
ಬೆಳಗಾವಿ, ಜನವರಿ 20: ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಪೂಜಾರಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆತ ಬಾಲಕಿಯೊಬ್ಬಳನ್ನು ಕಾಮಿಸಿ ನಿರಂತರವಾಗಿ ಕಾಡುತ್ತಿದ್ದ. ಇದರಿಂದ ಬಾಲಕಿಯ ಅಪ್ರಾಪ್ತ ವಯಸ್ಸಿನ ತಮ್ಮ ರೊಚ್ಚಿಗೆದ್ದು, ಆತನನ್ನು ಹಾರೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ರಾಜಾಪುರ ಗ್ರಾಮದ ನಿವಾಸಿ ಮಂಜುನಾಥ ಸುಭಾಷ್ ಎಣ್ಣಿ (23) ಎಂದು ಗುರುತಿಸಲಾಗಿದೆ. ಮಂಜುನಾಥ ಕಳೆದ ಹಲವು ವರ್ಷಗಳಿಂದ ಅಪ್ರಾಪ್ತ ಯುವತಿಯನ್ನು ಹಿಂಬಾಲಿಸುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಯುವತಿಯ 17 ವರ್ಷದ ತಮ್ಮ ಹಲವು ಬಾರಿ ‘ಅಕ್ಕನ ಉಸಾಬರಿಗೆ ಬರಬೇಡ’ ಎಂದು ಎಚ್ಚರಿಕೆ ನೀಡಿದ್ದ. ಆದರೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಮಂಜುನಾಥ ಯುವತಿಯನ್ನು ಕಾಡುತ್ತಿದ್ದ ಎನ್ನಲಾಗಿದೆ.
ಮಂಜುನಾಥ ಎಣ್ಣಿ ರಾಜಾಪುರ ಗ್ರಾಮದ ಚೂನಮ್ಮ ದೇವಿಯ ದೇವಸ್ಥಾನದ ಪೂಜಾರಿಯಾಗಿದ್ದ. ಬುಧವಾರ ಬೆಳಿಗ್ಗೆ ದೇವಾಲಯಕ್ಕೆ ಪೂಜೆ ಮಾಡಲು ಬಂದಿದ್ದ ವೇಳೆ, ದೇವಸ್ಥಾನದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಅಪ್ರಾಪ್ತ ಬಾಲಕ, ಹಾರೆಯಿಂದ ಮಂಜುನಾಥನ ಮೇಲೆ ದಾಳಿ ನಡೆಸಿದ್ದಾನೆ. ಬೆನ್ನಿಗೆ ಬಲವಾಗಿ ಹಾರೆಯಿಂದ ಹೊಡೆದ ಪರಿಣಾಮ ಮಂಜುನಾಥ ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಪ್ರಾಣಬಿಟ್ಟಿದ್ದಾನೆ.
ಇದನ್ನೂ ಓದಿ: ಬೆಳಗಾವಿ: ಸರ್ಕಾರಿ ಆಸ್ಪತ್ರೆ ವೈದ್ಯನ ಮನೆಯಲ್ಲೇ ಇತ್ತು ಗಾಂಜಾ ಸ್ಟಾಕ್!
ಘಟನೆಗೆ ಸಂಬಂಧಿಸಿ ಘಟಪ್ರಭಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ದೊರೆತ ಮಾಹಿತಿ ಆಧರಿಸಿ ಆರೋಪಿಯಾಗಿರುವ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಗ್ರಾಮದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.