ಚಿನ್ನ ಸ್ಮಗ್ಲಿಂಗ್ ಮಾತ್ರವಲ್ಲ, ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಕಳ್ಳಸಾಗಣೆಯಾಗುತ್ತಿದೆ ಡೀಸೆಲ್! ಬೃಹತ್ ಜಾಲ ಪತ್ತೆ
ಗಲ್ಫ್ ದೇಶಗಳಿಂದ ಚಿನ್ನ ಕಳ್ಳ ಸಾಗಣೆ ಮಾಡುವ ಬಗ್ಗೆ ಆಗಾಗ ವರದಿಗಳಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ಇದೀಗ, ಸ್ಪೋಟಕ ವಿಚಾರವೊಂದನ್ನು ಬೆಳಗಾವಿ ಪೊಲೀಸರು ಬಯಲಿಗಳದಿದ್ದಾರೆ. ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಅವರು ಪತ್ತೆ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಬೆಳಗಾವಿ, ಜನವರಿ 21: ಚಿನ್ನ ಕಳ್ಳಸಾಗಣೆ (Gold smuggling) ಮಾದರಿಯಲ್ಲೇ ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ (Karnataka) ಡೀಸೆಲ್ ಕಳ್ಳಸಾಗಣೆ (Diesel smuggling) ಮಾಡುತ್ತಿರುವ ಭಾರೀ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟ ಉಂಟುಮಾಡುತ್ತಿದ್ದ ಈ ಅಕ್ರಮವನ್ನು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಮೇಲೆ ಮಾಳಮಾರುತಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾಗ ಡೀಸೆಲ್ ಕಳ್ಳಸಾಗಣೆ ಬೆಳಕಿಗೆ ಬಂದಿದೆ.
ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಯಾವುದೇ ದಾಖಲೆಯಿಲ್ಲದೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿರುವುದು ಪತ್ತೆಯಾಗಿದೆ.
17 ಲಕ್ಷ ರೂ. ಮೌಲ್ಯದ ಡೀಸೆಲ್ ಜಪ್ತಿ
ದಾಳಿಯ ವೇಳೆ ಸುಮಾರು 17 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಹಾಗೂ ಟ್ಯಾಂಕರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತನಿಖೆ ವೇಳೆ, ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಎಂಬಾತನ ಪಾತ್ರ ಬೆಳಕಿಗೆ ಬಂದಿದ್ದು, ಇದು ದೊಡ್ಡ ಮಟ್ಟದ ಸ್ಮಗ್ಲಿಂಗ್ ಜಾಲವಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಲ್ಫ್ ದೇಶಗಳಿಂದ ಅಕ್ರಮವಾಗಿ ತೈಲ ಉತ್ಪನ್ನಗಳನ್ನು ಭಾರತಕ್ಕೆ ತರಲಾಗುತ್ತಿದ್ದು, ಈ ಜಾಲದಲ್ಲಿ ಮಹಾರಾಷ್ಟ್ರ ಹಾಗೂ ರಾಜಸ್ಥಾನದ ಖದೀಮರು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ವರ್ಷಗಳ ಕಾಲ ಈ ತೈಲ ಕಳ್ಳಸಾಗಣೆ ದಂಧೆ ನಡೆಯುತ್ತಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.
ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ಡೀಸೆಲ್ ಕಳ್ಳಸಾಗಣೆ
ಮೂಲಗಳ ಮಾಹಿತಿ ಪ್ರಕಾರ, ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ತೈಲ ನಿಗಮಗಳಿಗೆ ಪೆಟ್ರೋಲಿಯಂ ಉತ್ಪನ್ನಗಳು ಸಾಗಾಟವಾಗುತ್ತಿತ್ತು. ಕೆಲ ಹಡಗು ಮಾಲೀಕರು ಈ ಅಕ್ರಮ ಜಾಲದೊಂದಿಗೆ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗಲ್ಫ್ ದೇಶಗಳ ತೈಲ ಉತ್ಪಾದಕರೊಂದಿಗೆ ಸ್ಮಗ್ಲರ್‌ಗಳು ನೇರ ಸಂಪರ್ಕ ಹೊಂದಿರುವ ಅನುಮಾನವೂ ವ್ಯಕ್ತವಾಗಿದೆ.
ಅರ್ಧ ದರಕ್ಕೆ ಡೀಸೆಲ್ ಮಾರಾಟ!
ಅಕ್ರಮವಾಗಿ ತರಲಾಗುತ್ತಿರುವ ಈ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡಲಾಗುತ್ತಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಡೀಸೆಲ್ ಬಂಕ್‌ಗಳಿಗೆ ಸರಬರಾಜು ಮಾಡಿರುವ ಸಾಧ್ಯತೆಯಿದೆ. ತನಿಖೆಯಿಂದಷ್ಟೇ ಈ ತೈಲ ಕಳ್ಳರ ಕರಾಮತ್ತುಗಳು ಹೊರಬೀಳಬೇಕಿದೆ.
ಇದನ್ನೂ ಓದಿ: ರನ್ಯಾ ಚಿನ್ನ ಸ್ಮಗ್ಲಿಂಗ್ ಪ್ರಕರಣ: ಸಚಿವರ ನಂಟಿನ ರಹಸ್ಯದ ಬಗ್ಗೆ ಯತ್ನಾಳ್ ಸ್ಫೋಟಕ ಸುಳಿವು
ಸದ್ಯ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದು, ವಿಶೇಷ ತಂಡಗಳನ್ನು ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಪ್ರಕರಣದ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.