
ಬೆಳಗಾವಿ, ಜನವರಿ 23: ಜಿಲ್ಲೆಯ ಬೈಲಹೊಂಗಲ (Belagavi) ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಪತಿ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಪತ್ನಿಯ ಕಾಟದಿಂದ ಸಿಟ್ಟಿಗೆದ್ದ ಪತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮೃತರ ಪೋಷಕರ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ ಫಕೀರಪ್ಪ ಗಿಲಕ್ಕನವರ ಜೊತೆ ಮದುವೆಯಾಗಿ 3 ವರ್ಷ ಕಳೆದರೂ ಮಕ್ಕಳಾಗುತ್ತಿಲ್ಲವೆಂದು ಪತ್ನಿ ರಾಜೇಶ್ವರಿ (21) ಆಗಾಗ್ಗೆ ಕಿರಿಕ್ ಮಾಡುತ್ತಿದ್ದಳು. ಇದರಿಂದ ಬೇಸತ್ತ ಪತಿ, ಸಿಟ್ಟಿಗೆದ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಕಥೆ ಕಟ್ಟಿದ ಆರೋಪಿ, ಈ ಬಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆದರೆ ಅಂತ್ಯಕ್ರಿಯೆ ವೇಳೆ ರಾಜೇಶ್ವರಿಯ ಪೋಷಕರು ಮಗಳ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಬೆತ್ತಲೆ ಮಾಡಿ, ಕರೆಂಟ್ ಶಾಕ್ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ
ತಕ್ಷಣವೇ ಅವರು ಬೈಲಹೊಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಫಕೀರಪ್ಪ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿಯೂ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.