ಬೆಳಗಾವಿ, ಜನವರಿ 24: ಸಾಲ ಕಟ್ಟದಿದ್ದಕ್ಕೆ ಬಾಣಂತಿ ಸಮೇತ ಕುಟುಂಬವನ್ನು ಹೊರಹಾಕಿ ಮೈಕ್ರೋ ಫೈನಾನ್ಸ್ (Micro finance) ಸಿಬ್ಬಂದಿ ಮನೆ ಸೀಜ್ ಮಾಡಿದ್ದ ಘಟನೆ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ನಡೆದಿದೆ. ಟಿವಿ9 ವರದಿ ಬೆನ್ನಲ್ಲೇ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಹಾಕಿದ್ದ ಬೀಗ ಓಪನ್ ಮಾಡಿದ್ದಾರೆ. ಜೊತೆಗೆ ಫೈನಾನ್ಸ್ ಕಂಪನಿ ಜೊತೆ ಖಾಸಗಿ ಆಪ್ತ ಸಹಾಯಕನ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಧಾನ ಯಶಸ್ವಿಯಾಗಿದೆ.
ಗಣಪತಿ ಲೋಹಾರ ಮನೆ ಸೀಜ್ ಮಾಡಿ ಒಂದು ತಿಂಗಳ ಹಸುಗೂಸು ಸಮೇತ ಫೈನಾನ್ಸ್ ಸಿಬ್ಬಂದಿ ಹೊರಹಾಕಿ ಮನೆಗೆ ಬೀಗ ಹಾಕಿದ್ದರು. ಇಂದು ಬೆಳಗ್ಗೆಯಿಂದ ಟಿವಿ9 ನಿರಂತರವಾಗಿ ವರದಿ ಬಿತ್ತರಿಸಿತ್ತು. ಟಿವಿ9 ವರದಿ ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎಗಳಿಗೆ ಸೂಚನೆ ನೀಡಿದ್ದರು. ಆಸ್ಪತ್ರೆಯಲ್ಲಿದ್ದರೂ ಘಟನೆ ಬಗ್ಗೆ ಮಾಹಿತಿ ಪಡೆದು ಗಂಭೀರವಾಗಿ ಪರಿಗಣಿಸಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲೂ ಮೈಕ್ರೋ ಫೈನಾನ್ಸ್ ಹಾವಳಿ: ಸಾಲ ಮರುಪಾವತಿಸುವಂತೆ ಮಹಿಳೆಗೆ ಕಿರುಕುಳ ಆರೋಪ
ಫೈನಾನ್ಸ್ ಕಂಪನಿಯಿಂದ ಪಡೆದಿದ್ದ ಅಸಲು ಮರುಪಾವತಿಗೆ ಸಮ್ಮತಿ ಹಿನ್ನಲೆ ಇತ್ತ ಫೈನಾನ್ಸ್ ಕಂಪನಿ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಆಪ್ತ ಸಹಾಯಕರ ಸಂಧಾನ ಯಶಸ್ವಿಯಾಗಿದೆ. ಇನ್ನು ಮನೆಯಿಂದ ಹೊರಹಾಕಿದ್ದರಿಂದ ಗಣಪತಿ ಲೋಹಾರ ಕುಟುಂಬ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಚನಕಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದರು.
ಫೈನಾನ್ಸ್ ಸಿಬ್ಬಂದಿ ಮನವೊಲಿಸಿ ಅವರಿಂದಲೇ ಮನೆ ಬೀಗ ಓಪನ್ ಮಾಡಿಸಿದ್ದು, ಇದೀಗ ಬಾಣಂತಿ ಕುಟುಂಬವನ್ನು ಸಚಿವೆ ಲಕ್ಷ್ಮೀ ಪಿಎ ಮನೆಗೆ ಕರೆತಂದು ಬಿಟ್ಟಿದ್ದಾರೆ. ಖುಷಿಯಿಂದ ಮನೆಯೊಳಗೆ ತೆರಳಿದ ಗಣಪತಿ ಲೋಹಾರ ಕುಟುಂಬ, ತಮ್ಮನ್ನು ಮತ್ತೆ ಮನೆಗೆ ಸೇರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ್ತೊಂದು ಫೈನಾನ್ಸ್ ಕಿರುಕುಳ ಪ್ರಕರಣ ಕೂಡ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಯಾರೂ ಇಲ್ಲದಾಗ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿರುವಂತಹ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಮನೆಯವರು ಜಮೀನಿಗೆ ತೆರಳಿದ್ದ ವೇಳೆ ಸಿಬ್ಬಂದಿ ಸೀಜ್ ಮಾಡಿದ್ದರು.
ಯಲ್ಲವ್ವ ಬಸಪ್ಪ ಕುರಕುಂದ ಮನೆಗೆ ಇಕ್ವಿಟಾಸ್ ಫೈನಾನ್ಸ್ ಕಂಪನಿ ಬೀಗ ಹಾಕಿದ್ದಾರೆ. 5 ವರ್ಷದ ಹಿಂದೆ 8 ಲಕ್ಷ ರೂ. ಸಾಲ ಪಡೆದಿದ್ದ ಯಲ್ಲವ್ವ ಬಸಪ್ಪ ಕುರಕುಂದ, ಇದುವರೆಗೆ 9 ಲಕ್ಷ ರೂ. ಹಣ ಕಟ್ಟಿದ್ದಾರೆ. ಮತ್ತೆ 4 ಲಕ್ಷ ರೂ. ಹಣ ಕಟ್ಟುವಂತೆ ಇಕ್ವಿಟಾಸ್ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಕಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಮೈಕ್ರೋ ಫೈನಾನ್ಸ್ ಕಿರುಕುಳ: ಜ 25ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
2 ಲಕ್ಷ ರೂಪಾಯಿ ಕಟ್ಟುತ್ತೇವೆ ಎಂದಿದ್ದ ಯಲ್ಲವ್ವ ಬಸಪ್ಪ ಕುರಕುಂದ, ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂದಿ ಏಕಾಏಕಿ ಮನೆಗೆ ಬೀಗಹಾಕಿದ್ದಾರೆ. ಬಟ್ಟೆ, ಅಡುಗೆ ಸಾಮಗ್ರಿ ಸೇರಿದಂತೆ ಎಲ್ಲಾ ವಸ್ತುಗಳು ಮನೆಯೊಳಗಿದೆ. ತಿನ್ನಲು ಏನೂ ಇಲ್ಲದೆ ಅಕ್ಷರಶಃ ಯಲ್ಲವ್ವ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಜಪ್ತಿ ಮಾಡಿದ್ದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.