ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನವು (winter session) ಡಿಸೆಂಬರ್ 19 ರಿಂದ 10 ದಿನಗಳ ಕಾಲ ಬೆಳಗಾವಿಯ (Belagavi) ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha) ನಡೆಯಲಿದೆ. ಈ ಹಿನ್ನೆಲೆ ಇಂದು (ಡಿ.12) ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಮಾತನಾಡಿ ಬೆಳಗಾವಿಯಲ್ಲಿ ನಡೆಯುತ್ತಿರುವ 10ನೇ ಅಧಿವೇಶನ ಇದಾಗಿದೆ. ಈ ಅಧಿವೇಶನದಲ್ಲಿ ಗಡಿಪ್ರದೇಶ ಅಭಿವೃದ್ಧಿ ವಿಧೇಯಕ ಸೇರಿ 6 ವಿಧೇಯಕ ಮಂಡಿಸಲಾಗುವುದು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ವಿಶೇಷ ಆದ್ಯತೆ ನೀಡುತ್ತೇವೆ. ಬೆಂಗಳೂರು ಭೂಸುಧಾರಣೆ, ಕನ್ನಡ ಸಮಗ್ರ ಅಭಿವೃದ್ಧಿ ಬಿಲ್ ಮಂಡಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ಗಳ ಮೇಲೆ ಚರ್ಚಿಸಿ ಅಂಗೀಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 15ನೇ ವಿಧಾನಸಭೆಯ 14ನೇ ಅಧಿವೇಶನದ ಕುರಿತು ಚರ್ಚೆಯಾಗಿದೆ. ಮೊದಲ ದಿನ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಎರಡನೇ ದಿನ ಕಲಾಪಗಳು ನಡೆಯಲಿವೆ. ಅಧಿವೇಶನಕ್ಕೆ ಜಿಲ್ಲಾಡಳಿತ 15 ತಂಡಗಳನ್ನು ನೇಮಿಸಿಕೊಂಡಿದ್ದಾರೆ. ವಿಧಾನಮಂಡಲ ವತಿಯಿಂದ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಎಲ್ಲಾ ಇಲಾಖೆಯವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸದನ ನಡೆಸಲು ಬೇಕಾದ ಪೂರಕವಾದ ಎಲ್ಲಾ ವ್ಯವಸ್ಥೆ ಸಿದ್ಧವಿದೆ. ಸಚಿವರು, ಶಾಸಕರು, ಅಧಿಕಾರಿಗಳ ವಸತಿಗೆ ವ್ಯವಸ್ಥೆ ಮಾಡಿದ್ದೇವೆ. ವಸತಿಗೆ ಎರಡು ಸಾವಿರಕ್ಕೂ ಹೆಚ್ಚು ರೂಮ್ಗಳನ್ನ ವ್ಯವಸ್ಥೆ ಮಾಡಿದ್ದೇವೆ ಎಂದರು.
ಸದನದ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಾನು ಸಹಿವುಸುವುದಿಲ್ಲ
ಅಧಿವೇಶನದಲ್ಲಿ ಸಚಿವರು, ಶಾಸಕರ ಹಾಜರಾತಿ ಕಡ್ಡಾಯಕ್ಕೆ ಕ್ರಮ ವಹಿಸಲಾಗಿದೆ. ಅಧಿವೇಶನದಲ್ಲಿ ಪ್ರತಿಯೊಬ್ಬ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದುವೇಳೆ ಸದನಕ್ಕೆ ಗೈರಾದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹಿಂದಿನ ಅಧಿವೇಶನ ಸಮಯದಲ್ಲಿ, ಅಧಿವೇಶನಕ್ಕೆ ಹೋಗಲ್ಲ, ಅಲ್ಲೇನಿದೆ ಎಂಬ ಶಾಸಕರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಸದನದ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಾನು ಸಹಿವುಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ
ಪ್ರಸಕ್ತ ಅಧಿವೇಶನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಆದರೆ ಪ್ರಶಸ್ತಿ ಪ್ರಧಾನ ದಿನಾಂಕ, ಶಾಸಕರ ಹೆಸರು ಇನ್ನೂ ಅಂತಿಮವಾಗಿಲ್ಲ. ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಉಭಯ ಸದನದ ಕಲಾಪ ಮುಕ್ತವಾಗಿ ನಡೆಯಲಿದೆ. ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಸುವರ್ಣ ವಿಧಾನಸೌಧಕ್ಕೆ ದಶಕದ ಸಂಭ್ರಮ
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲು ಬೆಳಗಾವಿಯಲ್ಲಿ 2007ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ದ್ರೇ ವ್ಯಾಕ್ಸಿನ್ ಡಿಪೋದಲ್ಲಿ ಬಹಳಷ್ಟು ಅರಣ್ಯವಿದ್ದು ಈ ಅರಣ್ಯ ಸಂಪತ್ತು ಹಾಳಾಗುತ್ತೆ ಅಂತಾ ಸುವರ್ಣಸೌಧ ನಿರ್ಮಾಣಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾದ ಕಾರಣ ಅಲ್ಲಿ ಸೌಧ ಸ್ಥಾಪನೆ ವಿಚಾರವನ್ನ ಕೈಬಿಡಲಾಯಿತು.
ಇದೆಲ್ಲದರ ನಡುವೆ 2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಅಂದಿನ ಸ್ಪೀಕರ್ ಜಗದೀಶ ಶೆಟ್ಟರ್ ನೇತೃತ್ವದ ಸಮಿತಿ ಬೆಳಗಾವಿ ತಾಲೂಜಿನ ಹಲಗಾ ಬಸ್ತವಾಡ ಗ್ರಾಮಗಳ ಬಳಿಯ ಜಾಗ ಪರಿಶೀಲನೆ ಮಾಡಿ ಅಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಿತು. 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಸುವರ್ಣಸೌಧ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. 438 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ಸೌಧವನ್ನ 2012ರ ಅಕ್ಟೋಬರ್ 11ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟನೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Mon, 12 December 22