ಚಿಕ್ಕೋಡಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮತ್ತೊಮ್ಮೆ ಫುಡ್ ಪಾಯ್ಸನಿಂಗ್: 12 ವಿದ್ಯಾರ್ಥಿಗಳು ಅಸ್ವಸ್ಥ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೆ ಫುಡ್ ಪಾಯಿಸನಿಂಗ್ ಪ್ರಕರಣ ವರದಿಯಾಗಿದೆ. ಶಾಲೆಯ ಆಹಾರ ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಇದು ಹಿಂದೆಯೂ ಸಂಭವಿಸಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ.

ಬೆಳಗಾವಿ, ನವೆಂಬರ್ 4: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai residential school) ಮತ್ತೊಮ್ಮೆ ವಿಷಾಹಾರ ಪ್ರಕರಣ ಹೊರಬಿದ್ದಿದೆ. ಮಂಗಳವಾರ ರಾತ್ರಿ 12 ವಿದ್ಯಾರ್ಥಿಗಳು ಆಹಾರ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ವಸತಿ ಶಾಲೆಯಲ್ಲಿ ಈ ಹಿಂದೆಯೂ ಫುಡ್ ಪಾಯ್ಸನಿಂಗ್ ಆಗಿತ್ತು. ಆದರೆ ಮತ್ತೊಮ್ಮೆ ಇದೇ ಸ್ಥಿತಿ ಮರುಕಳಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದ ಪೋಷಕರು ಹಾಗೂ ಮಕ್ಕಳಲ್ಲಿ ಆತಂಕ ಮನೆ ಮಾಡಿದೆ. ಜೀವಕ್ಕೆ ಏನಾದರೂ ಕುತ್ತು ಬಂದರೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆ ಪಾಲಕರಿಗೆ ಕಾಡುತ್ತಿದೆ. ಇನ್ನೂ ಘಟನೆ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೇಕಂತಲೇ ವಿಷ ಬೆರೆಸಿರುವ ಅನುಮಾನ
ಈ ಘಟನೆಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಲೆಯ ಅಡುಗೆಗೆ ಉದ್ದೇಶಪೂರ್ವಕವಾಗಿ ವಿಷ ಬೇರೆಸಿರುವ ಅನುಮಾನವಿದೆ. ಒಳಗಿನ ನೌಕರರ ಮೇಲೆ ಸಂಶಯ ಇದೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವರ ಈ ಮಾತು ಪಾಲಕರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.
ಈ ಹಿಂದೆಯೂ ದಾಖಲಾಗಿದ್ದ ವಿಷಾಹಾರ ಪ್ರಕರಣ
ಸೆಪ್ಟೆಂಬರ್ 12ರಂದು ಇದೇ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಆಗಿ ಒಂದಲ್ಲಾ ಎರಡಲ್ಲಾ ಒರೋಬ್ಬರಿ 120ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದರಲ್ಲಿ ಹತ್ತಕ್ಕೂ ಅಧಿಕ ಮಕ್ಕಳು ಐಸಿಯು ವರೆಗೂ ಹೋಗಿ ಬಳಿಕ ಗುಣಮುಖರಾಗಿ ವಾಪಸ್ ಆಗಿದ್ದರು. ಇದಾದ ಬಳಿಕ ಇಪ್ಪತ್ತು ದಿನದ ಹಿಂದೆ ನ್ಯಾಯಾಧೀಶರು ಕೂಡ ಇದೇ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆಗಿ ಸಿಬ್ಬಂದಿ ಹಾಗೂ ವಾರ್ಡನ್ನನ್ನು ತರಾಟೆಗೆ ತೆಗೆದುಕೊಂಡು ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



