ಬೆಳಗಾವಿ, ನವೆಂಬರ್ 05: ಆ ಊರಲ್ಲಿ ಕೊರೊನಾದಂತ ಕ್ಲಿಷ್ಟಕರ ಸಮಯದಲ್ಲಿ ಕೇವಲ ಮೂರೂ ಜನ ಕೊರೊನಾದಿಂದ ತೀರಿ (death) ಹೋಗಿದ್ದರು. ಆದರೆ ಯಾರ ಕೆಟ್ಟ ದೃಷ್ಟಿ ನೆಟ್ಟಿತ್ತೋ, ದೇವರ ಶಾಪ ಏನಾದ್ರೂ ಆಯ್ತೋ ಗೊತ್ತಿಲ್ಲ ಒಂದೂವರೆ ತಿಂಗಳಲ್ಲಿ ಮೂವತ್ತು ಜನ ತೀರಿ ಹೋಗಿದ್ದಾರೆ. ಹತ್ತು ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ವಯಸ್ಕರರೂ ಸಹ ಸಾವನ್ನಪ್ಪುತ್ತಿದ್ದು ದೇವಿಯ ಶಾಪ ಊರಿಗೆ ತಗುಲಿದೆ ಎನ್ನಲಾಗ್ತಿದೆ. ಅಂತಹದೊಂದು ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ತೂರನೂರು ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತಿವೆ. ಚಿಕ್ಕ ವಯಸ್ಸಿನ ಮಕ್ಕಳೂ ಸೇರಿದಂತೆ ವಯಸ್ಸಾದವರವರೆಗೂ ಸಹ ಬೇರೆ ಬೇರೆ ಕಾರಣಗಳಿಂದ ತೀರಿ ಹೋಗುತ್ತಿದ್ದಾರೆ. ಈ ರೀತಿ ಸರಣಿ ಸಾವಿಗೆ ದುರ್ಗಾ ದೇವಿಯ ಶಾಪವೇ ಕಾರಣ ಅಂತಿದ್ದಾರೆ ಗ್ರಾಮಸ್ಥರು.
ಇದನ್ನೂ ಓದಿ: ಬೆಳಗಾವಿ: ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ ದಾಳಿ
ಹೌದು ಕೆಲ ದಿನಗಳ ಹಿಂದೆ ದುರ್ಗಾದೇವಿಯ ದೇವಸ್ಥಾನ ಅರ್ಚಕರು ದೇವಿಯ ವಿಗ್ರಹದ ಮೇಲೆ ಇದ್ದ ಎಣ್ಣಿ ಜಿಗಿಯನ್ನ ಕೆತ್ತನೆ ಮಾಡುವಾಗ ದೇವಿಯ ಮೂರ್ತಿಗೆ ಒಂದು ಭಾಗ ವಿರೂಪಗೊಂಡಿತ್ತಂತೆ. ಹೀಗೆ ಆದ ಕೆಲ ದಿನಗಳಲ್ಲೇ ಈ ರೀತಿ ಗ್ರಾಮದಲ್ಲಿ ಸಾಲು ಸಾಲು ಸಾವು ಸಂಭವಿಸುತ್ತಿವೆ ಅನ್ನೋದು ಒಂದು ಕಡೆಯಾದರೆ, ಇದು ಗ್ರಾಮಸ್ಥರನ್ನ ಆತಂಕಕ್ಕೆ ಎಡೆ ಮಾಡಿದ್ದು ಸಾವಿಗೆ ನಿಖರ ಕಾರಣ ತಿಳಿಯದೆ ಗ್ರಾಮಸ್ಥರು ಇದು ದೇವಿ ಶಾಪ ಎಂದು ಹೇಳುತ್ತಿದ್ದಾರೆ.
ಗ್ರಾಮದಲ್ಲಿ ಸಾವುಗಳು ಸಂಭವಿಸುತ್ತಿದ್ದಂತೆ ಗ್ರಾಮದ ಹಲವರ ಮೈಯಲ್ಲಿ ದೇವಿ ಬಂದು ನೀವು ನನ್ನ ವಿಗೃಹವನ್ನು ವಿರೂಪ ಮಾಡಿದ್ದೀರಿ. ಹೀಗಾಗಿ ಊರಿಗೆ ನನ್ನ ಶಾಪ ಹತ್ತಿದೆ ಎಂದು ದೇವಿ ಹೇಳುತ್ತಿದ್ದಾಳಂತೆ. ಹೀಗಾಗಿ ಗ್ರಾಮಸ್ಥರು ಆತಂಕಗೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದಾರೆ. ಅರ್ಚಕರ ಸಲಹೆಯಂತೆ ಹೋಮ-ಹವನ ಹಾಗೂ ಅಭಿಷೇಕ ಮಾಡಿ ದೇವಿಯನ್ನು ಶಾಂತಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಇದನ್ನೂ ಓದಿ: ಗಡಿ ಕ್ಯಾತೆ ಆಯ್ತು ಈಗ ಕರ್ನಾಟಕಕ್ಕೆ ಹರಿದು ಬರುವ ದೂಧ್‌ಗಂಗಾ ನದಿ ನೀರಿನ ಮೇಲೆ ಮಹಾರಾಷ್ಟ್ರ ಕಣ್ಣು
ಅಲ್ಲದೆ ಗ್ರಾಮದಲ್ಲಿ ಮಂಗಳವಾರ ದೇವರಿಗೆ ಉಡಿ ತುಂಬು ಕಾರ್ಯ ಮಾಡುತ್ತಿದ್ದಾರೆ. ಆ ದಿನ ಯಾರೂ ಕೆಲಸ ಕಾರ್ಯ ಮಾಡದೇ ಮನೆಯಲ್ಲಿ ದೇವಿ ಜಪ ಮಾಡುತ್ತಿದ್ದಾರೆ. ಅರ್ಚಕರ ಸಲಹೆಯಂತೆ ಕಳೆದ 15 ದಿನಗಳಿಂದ ದೇವಿಯ ಗರ್ಭಗುಡಿ ಮುಚ್ಚಿರುವ ಗ್ರಾಮಸ್ಥರು. ಅರ್ಚಕರು ಬಂದಾಗ ಮಾತ್ರ ಗರ್ಭಗುಡಿ ತೆರೆದು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಇದೇ ತಿಂಗಳು 15 ರಂದು ದೇವಿ ಜಾತ್ರೆ ಮಾಡಲು ಗ್ರಾಮಸ್ಥರ ನಿರ್ಧಾರ ಮಾಡಿದ್ದು. ಆ ವೇಳೆ ಹೋಮ- ಹವನ, ಕುಂಭಮೇಳ, ಉಡಿ ತುಂಬುವ ಕಾರ್ಯ ಮಾಡಿ. ಮನೆಗೊಂದು ಕುರಿ ಮರಿಯನ್ನು ದೇವಿಗೆ ಹರಕೆ ಕೊಡಲು ನಿರ್ಧರಿಸಿದ್ದಾರೆ.
ಇದು ಶಾಪವೋ, ಕಾಕತಾಳಿಯವೋ ದೇವರೇ ಬಲ್ಲ. ಆದರೆ ಸರಣಿ ಸಾವುಗಳು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ನಡೆಯುತ್ತಿರುವ ಸಾವುಗಳ ಬಗ್ಗೆ ನಿಖರ ಕಾರಣ ಪತ್ತೆ ಹಚ್ಚಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Sun, 5 November 23