ಬೆಳಗಾವಿ, ಏಪ್ರಿಲ್ 29: ಎದುರು ಮನೆಯವರಿಗೆ ಒಳ್ಳೆಯದಾಗಲಿ ಎಂದು ಸಾಲದ ರೂಪದಲ್ಲಿ ಟ್ರ್ಯಾಕ್ಟರ್ ಕೊಳ್ಳಲು ಐದು ಲಕ್ಷ ರೂ. ನೀಡಿದ್ದರು. ಆದರೆ ಕೊಟ್ಟ ಹಣ (money) ವಾಪಾಸ್ ಕೇಳಿದ್ದಕ್ಕೆ ಪಾಪಿಗಳು ಕುಟುಂಬ ಸಮೇತ ಬಂದು ಅಟ್ಟಹಾಸ ಮೆರೆದಿದ್ದರು. ಇಲ್ಲಿ ಸಾಲ ಕೊಟ್ಟವನ ಮಗಳನ್ನೇ ಕೊಂದು ಕೆಕೆ ಹಾಕಿದ್ದರು. ಅಷ್ಟಕ್ಕೂ ನಾಲ್ಕು ವರ್ಷದ ಮಗುವನ್ನ ಕೊಂದಿದ್ದು ಯಾಕೆ? ಹಣಕಾಸಿನ ವ್ಯವಹಾರದ ಮಧ್ಯ ಹೆಣ್ಣಿನ ವಿಚಾರ ಏನು ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಮುಂದೆ ಇದೆ ಓದಿ. ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಕಾಡಪ್ಪ ಕಾಳಾಪಾಟೀಲ್ ಜಮೀನು ನೋಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಲ್ಪ ಸ್ವಲ್ಪ ದುಡ್ಡು ಮಾಡಿಕೊಂಡಿದ್ದಾರೆ. ಊರಲ್ಲಿ ಯಾರಿಗಾದರೂ ಸಹಾಯ ಅಂತಾ ಬಂದರೆ ಅವರ ಕಷ್ಟಕ್ಕೆ ಸ್ಪಂದಿಸುತ್ತಾ ಜೀವನ ನಡೆಸುತ್ತಿದ್ದಾರೆ. ಹೀಗಿದ್ದ ಕಾಡಪ್ಪ ತಾನೂ ಕೊಟ್ಟ ಸಾಲದಿಂದಲೇ ಇದೀಗ ತನ್ನ ಮಗಳನ್ನ ಕಳೆದುಕೊಂಡು ಕಣ್ಣೀರಿಡುವಂತಾಗಿದೆ.
ಹೌದು ಇಲ್ಲಿ ಕಾಡಪ್ಪ ಒಳ್ಳೆಯದನ್ನ ಬಯಸಿ ಹಣ ಕೊಟ್ಟಿದ್ದೆ ಆತನಿಗೆ ಶಾಪವಾಗಿ ಪರಿಣಮಿಸಿ ನಡೆಯಬಾರದ ಘಟನೆ ನಡೆದು ಹೋಗಿದೆ. ಕೊಟ್ಟವ ಕೊಡಂಗಿ ಇಸಿದುಕೊಂಡವ ವೀರಭದ್ರ ಅನ್ನೋ ಗಾದೆ ಮಾತು ಈ ಕೇಸ್ನಲ್ಲಿ ನಿಜವಾಗಿ ಹೋಗಿದೆ. ಕಾಡಪ್ಪನಿಗೆ ಮೂರು ಜನ ಮಕ್ಕಳಿದ್ದು ಶ್ರೀನಿಧಿ ಕೊನೆಯ ಮಗಳಾಗಿದ್ದರಿಂದ ಬಹಳ ಮುದ್ದಾಗಿ ಆಕೆಯನ್ನ ಸಾಕಿ ಸಲಹುತ್ತಿರುತ್ತಾರೆ. ಫೆಬ್ರವರಿ 7ರಂದು ಮಗುವಿನ ಹುಟ್ಟು ಹಬ್ಬವನ್ನ ಕೂಡ ಅದ್ದೂರಿಯಾಗಿ ಆಚರಣೆ ಮಾಡಿರುತ್ತಾರೆ.
ಇದನ್ನೂ ಓದಿ: ದಾವಣಗೆರೆ: ಪತ್ನಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿ; ವಿಷಯ ತಿಳಿದ ಮಗನಿಂದ ತಂದೆಯ ಬರ್ಬರ ಹತ್ಯೆ
ಹೀಗೆ ಹುಟ್ಟು ಹಬ್ಬ ಆದ ಎರಡೇ ತಿಂಗಳಿಗೆ ಮಗಳನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವ ಸ್ಥಿತಿ ನಿರ್ಮಾಣ ಆಗಿದೆ. ಮಗು ಅನಾರೋಗ್ಯದಿಂದನೋ ಅಥವಾ ಇನ್ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದರೆ ಎನೋ ಅಂದುಕೊಂಡು ಕೊಂಚ ಸಮಾಧಾನ ಪಡಿಸಿಕೊಳ್ಳಬಹುದಿತ್ತು. ಆದರೆ ಇಲ್ಲಿ ಹೆತ್ತವರ ಕಣ್ಣಮುಂದೆ ಪಾಪಿಗಳ ಅಟ್ಟಹಾಸಕ್ಕೆ ಮಗು ಬಲಿಯಾಗಿದ್ದು ಕುಟುಂಬಸ್ಥರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಶ್ರೀನಿಧಿ ಕಾಳಾಪಾಟೀಲ್ ತಂದೆ ಜಮೀನಿನಲ್ಲಿ ಉಳುಮೆ ಮಾಡುತ್ತಾ ಸ್ವಲ್ಪ ದುಡ್ಡು ಕೂಡ ಉಳಿತಾಯ ಮಾಡಿದ್ದ. ನಾಲ್ಕೈದು ಜನರಿಗೆ ತಮ್ಮ ಜಮೀನಿನಲ್ಲೇ ಕೆಲಸ ಕೂಡ ಕೊಟ್ಟಿದ್ದ ಈತನಿಗೆ ಕೆಲ ವರ್ಷಗಳಿಂದ ತನ್ನ ಮನೆಯ ಮುಂಭಾಗದ ದೇವರಾಜ್ ಬಾಬರ್ ಎಂಬಾತನಿಗೂ ಕೆಲಸ ಕೊಟ್ಟಿದ್ದ. ಚೆನ್ನಾಗಿ ಕೆಲಸ ಮಾಡ್ತಾ ಮಾಲೀಕ ಕಾಡಪ್ಪನ ವಿಶ್ವಾಸವನ್ನ ದೇವರಾಜ್ ಗಳಿಸಿಕೊಂಡಿದ್ದ. ಇದೇ ವೇಳೆ ಜಮೀನಿನಲ್ಲಿ ಉಳುಮೆ ಮಾಡಲು ಒಂದು ಟ್ರ್ಯಾಕ್ಟರ್ ತೆಗೆದುಕೊಳ್ಳುತ್ತಿದ್ದೇನೆ ಸಾಲ ಕೊಡಿ ಕ್ರಮೇಣವಾಗಿ ತಿರಿಸುತ್ತೇನೆ ಅಂತಾ ಹೇಳಿ ಐದು ಲಕ್ಷ ರೂ. ಹಣವನ್ನ ಸಾಲದ ರೂಪದಲ್ಲಿ ಪಡೆದುಕೊಂಡಿದ್ದ.
ಕಾಡಪ್ಪ ಕೂಡ ಹಿಂದೆ ಮುಂದೆ ಯೋಚಿಸದೇ ಹಣವನ್ನ ಕೊಟ್ಟಿದ್ದ. ಆದರೆ ಕೊಡುವ ಸಂದರ್ಭದಲ್ಲಿ ದೇವರಾಜ್ ಕಡೆಯಿಂದ ಎರಡು ಖಾಲಿ ಚೆಕ್ ಗಳನ್ನ ಕೂಡ ಪಡೆದುಕೊಂಡಿದ್ದ. ಹೀಗೆ ಸಾಲ ಪಡೆದು ಟ್ರ್ಯಾಕ್ಟರ್ ತೆಗೆದುಕೊಂಡ ಕೆಲವೇ ದಿನಗಳಲ್ಲಿ ದೇವರಾಜ್ ಬದಲಾಗಿ ಹೋಗಿದ್ದ. ಕಾಡಪ್ಪನ ಜಮೀನಿಗೆ ಕೆಲಸಕ್ಕೆ ಹೋಗುತ್ತಿದ್ದವ ಒಂದು ವರ್ಷದ ಹಿಂದೆ ಜಗಳವಾಡಿಕೊಂಡು ಬಿಟ್ಟಿದ್ದ. ಇದಾದ ಬಳಿಕ ಕಾಡಪ್ಪ ಆಗಾಗ ತನಗೆ ಹಣದ ಅಡಚನೆ ಇದೆ ಹಣ ವಾಪಾಸ್ ಕೊಡು ಅಂತಾ ದೇವರಾಜ್ಗೆ ಕೇಳತೊಡಗಿದ್ದ. ಆರಂಭದಲ್ಲಿ ಇಂದು ಕೊಡ್ತೇನೆ, ನಾಳೆ ಕೊಡ್ತೇನಿ ಅಂತಿದ್ದ ದೇವರಾಜ್ ಕೆಲ ದಿನಗಳಿಂದ ತನ್ನ ವರಸೆಯನ್ನ ಬದಲಿಸಿ ಬಿಟ್ಟಿದ್ದ.
ಸದ್ಯಕ್ಕೆ ತನ್ನ ಬಳಿ ಹಣವಿಲ್ಲ ಯಾವಾಗ ದುಡ್ಡಿರುತ್ತೋ ಅಗ ಕೊಡ್ತೇನಿ ಏನೂ ಮಾಡಿಕೊಳ್ತಿ ಮಾಡಿಕೊ ಅಂತಾ ವಾಪಾಸ್ ಮಾತಾಡಿದ್ದ. ಇದು ಕಾಡಪ್ಪನಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಇದರಿಂದ ಆಕ್ರೋಶಗೊಂಡ ಕಾಡಪ್ಪ ಅಂದು ಹಣ ಕೊಡುವಾಗ ಮಧ್ಯಸ್ಥಿಕೆ ವಹಿಸಿದ್ದ ಮುಖಂಡರನ್ನ ಕರೆದು ಈ ರೀತಿ ದೇವರಾಜ್ ಹಣ ಇದ್ದಾಗ ಕೊಡ್ತೇನಿ ಅಂತಾ ಉಡಾಪೆ ಮಾತಾಡ್ತಿದ್ದಾನೆ ನೀವೆ ಹೇಳಿ ಹಣ ಕೊಡಿಸಿ ಅಂತಾ ಪಂಚಾಯಿತಿ ಮಾಡಿಸಿದ್ದ.
ಈ ವೇಳೆ ಬೈಯ್ದು ಬುದ್ದಿ ಹೇಳಿದ ಮುಖಂಡರು ಆದಷ್ಟು ಬೇಗ ಹಣ ಕೊಡು ಒಮ್ಮೆಲೆ ಐದು ಲಕ್ಷ ರೂ. ಕೊಡಲು ಆಗದಿದ್ರೇ ಒಂದು ಲಕ್ಷದಂತೆ ಕೊಟ್ಟು ಹಣ ಮುಟ್ಟಿಸುವ ಅಂತಾ ಹಿರಿಯರೇ ದೇವರಾಜ್ಗೆ ವಾರ್ನ್ ಮಾಡಿದ್ದರು. ಈ ವೇಳೆ ಆಯ್ತು ಹಣ ಕೊಡ್ತೇನಿ ಅಂತಾ ದೇವರಾಜ್ ಒಪ್ಪಿಕೊಂಡು ಅಲ್ಲಿಂದ ಹೊರಟು ಹೋಗಿದ್ದ.
ಇದಾದ ಬಳಿಕ ಒಂದು ತಿಂಗಳು ಕಾದು ನೋಡಿದ ಕಾಡಪ್ಪ ಮತ್ತೆ ದೇವರಾಜ್ ಬಳಿ ಹಣ ಕೊಡುವಂತೆ ಕೇಳಿದ್ದಾನೆ. ಈ ವೇಳೆ ದೇವರಾಜ್ ಎಂದಿನಂತೆ ಅದೇ ಶೈಲಿಯಲ್ಲಿ ಉತ್ತರ ನೀಡಿದ್ದಾನೆ. ಈಗ ಹಣವಿಲ್ಲ ಇದ್ದಾಗ ಕೊಡ್ತೇನಿ ಅಂತಾ ಹೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಕೂಡ ಆಗುತ್ತೆ. ಆಗ ಕೆಲವರು ಜಗಳ ಬಿಡಿಸಿ ಬಗೆ ಹರಿಸಿದ್ದಾರೆ. ಯಾವಾಗ ದೇವರಾಜ್ ಹಣ ಕೊಡಿ ಅಂದಾಗ ಉಡಾಪೆ ಉತ್ತರ ಕೊಡಲು ಶುರು ಮಾಡ್ತಾನೆ ಆಗ ಅಲರ್ಟ್ ಆದ ಕಾಡಪ್ಪ ಐಗಳಿ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸ್ ಕೊಟ್ಟಿದ್ದಾರೆ. ಅದು ಕೆಲ ದಿನಗಳ ಹಿಂದೆ ಕೋರ್ಟ್ನಿಂದ ದೇವರಾಜ್ನ ಹೆಸರಲ್ಲಿ ನೋಟೀಸ್ ಕೂಡ ಬರುತ್ತೆ. ಯಾವಾಗ ಹಣಕ್ಕಾಗಿ ಕೋರ್ಟ್ನಿಂದ ನೋಟಿಸ್ ಬಂತೋ ಆಗ ದೇವರಾಜ್ ಮತ್ತು ಕುಟುಂಬಸ್ಥರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ.
ಇದೆಲ್ಲಾ ಬೆಳವಣಿಗೆ ನಡುವೆ ಅದೊಂದು ವಿಚಾರಕ್ಕೆ ಈ ಎರಡು ಕುಟುಂಬದ ನಡುವೆ ಮುನಿಸು ಶುರುವಾಗಿತ್ತು. ಕೊಲೆ ಮಾಡಿದ ಆರೋಪಿ ದೇವರಾಜ್ ಹೆಂಡತಿ ಜೊತೆಗೆ ಕಾಡಪ್ಪನ ತಮ್ಮ ಹನುಮಂತನ ಎನೋ ನಡೆಸಿದ್ದಾನೆ ಅಂತಾ ಸಂಶಯ ಪಟ್ಟುಕೊಂಡು ಜಗಳ ಮಾಡುತ್ತಿದ್ದರು. ಕೊಲೆಯ ಹಿಂದಿನ ದಿನ ಏಪ್ರಿಲ್ 26ರಂದು ದೇವರಾಜ್ ಪತ್ನಿ ಸಂಜೆಯಿಂದ ಮನೆಯಲ್ಲಿ ಕಾಣಿಸುವುದಿಲ್ಲ. ಮನೆ ಸೇರಿದಂತೆ ಎಲ್ಲ ಕಡೆ ಹುಡುಕಾಟ ನಡೆಸಿದ ದೇವರಾಜ್ ಮತ್ತು ತಂದೆ ಜ್ಯೋತಿಬಾ ಕೊನೆಯಲ್ಲಿ ಕಾಡಪ್ಪನಿಗೆ ಕರೆ ಮಾಡಿ ನಿನ್ನ ತಮ್ಮ ನನ್ನ ಹೆಂಡತಿಯನ್ನ ಓಡಿಸಿಕೊಂಡು ಹೋಗಿದ್ದಾನೆ ಅಂತಾ ದೇವರಾಜ್ ಹೇಳಿದ್ದಾನೆ. ಈ ವೇಳೆ ಕಾಡಪ್ಪ ನನ್ನ ತಮ್ಮ ಎಲ್ಲಿಯೂ ಹೋಗಿಲ್ಲ ಮನೆಯಲ್ಲೇ ಇದ್ದಾನೆ. ನಿಮ್ಮಾಕೆ ಎಲ್ಲಿಗೆ ಹೋಗಿದ್ದಾಳೆ ನಮಗೆನೂ ಗೊತ್ತು ಅಂತಾ ಬೈಯ್ದು ಪೋನ್ ಇಟ್ಟಿದ್ದಾನೆ.
ಇದನ್ನೂ ಓದಿ: ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ; ಮೃತನ ಮಗನೂ ಸೇರಿ ಮೂವರ ಬಂಧನ
ಹೀಗೆ ಒಂದು ಕಡೆ ಕೋರ್ಟ್ ನಿಂದ ಚೆಕ್ ಬೌನ್ಸ್ ಕೇಸ್ ನೋಟಿಸ್ ಬಂದು ಇನ್ನೊಂದು ಕಡೆ ಒಂದು ದಿನ ಕಳೆದ್ರೂ ದೇವರಾಜ್ ಪತ್ನಿ ಮನೆಗೆ ಬಂದಿಲ್ಲ ಅನ್ನೋ ಕಾರಣ ಈ ಎರಡು ವಿಚಾರ ಇಟ್ಟುಕೊಂಡು ಏಪ್ರಿಲ್ 27ರಂದು ಕಾಡಪ್ಪನ ಮನೆಗೆ ದೇವರಾಜ್ ಆತನ ತಂದೆ ಜ್ಯೋತಿಬಾ ಮತ್ತು ತಮ್ಮ ಯುವರಾಜ್ ಮೂವರು ಸೇರಿಕೊಂಡು ಬಂದಿದ್ದಾರೆ. ಆರಂಭದಲ್ಲಿ ನಿನ್ನ ತಮ್ಮ ಎಲ್ಲಿ ಅಂತಾ ಜಗಳ ತೆಗೆದಿದ್ದಾರೆ. ಜೊತೆಗೆ ದುಡ್ಡಿಗೆ ಕೇಸ್ ಕೊಡಸ್ತಿಯಾ ಅಂತಾ ಜೋರಾಗಿ ಗಲಾಟೆ ಮಾಡಲು ಶುರು ಮಾಡಿದ್ದಾರೆ. ಆಗ ಕಾಡಪ್ಪ ತಮ್ಮ ಹನುಮಂತ ಜಮೀನಿಗೆ ಹೋಗಿದ್ದಾನೆ ನಿನ್ನ ಹೆಂಡತಿಗೂ ತಮ್ಮನಿಗೂ ಏನೂ ಸಂಬಂಧ ಇಲ್ಲಾ ಅಂತಾ ಹೇಳಿದ್ದಾನೆ. ಇದಾದ ಬಳಿಕ ನೀವು ದುಡ್ಡ ಕೊಡದಿದ್ದಕ್ಕೆ ಕೇಸ್ ಹಾಕಿದ್ದೇನೆ ಹಣ ಕೊಡಿ ಅಂತಾ ಜೋರು ಮಾಡಿದ್ದಾನೆ.
ಮೂರು ಜನ ಜಗಳ ತೆಗೆಯಬೇಕು ಅಂದುಕೊಂಡೇ ಬಂದವರು ಕಾಡಪ್ಪನ ಮೇಲೆ ಹಲ್ಲೆ ಮಾಡಲು ಶುರು ಮಾಡ್ತಾರೆ. ತಂದೆಯನ್ನ ಹೊಡೆಯುತ್ತಿದ್ದನ್ನ ಗಮನಿಸಿದ ಶ್ರೀನಿಧಿ ತಂದೆ ಕಾಲಿನ ಬಳಿ ಬಂದು ನಿಂತು ಜೋರಾಗಿ ಅಳಲು ತೊಡಗುತ್ತೆ. ಪುಟ್ಟ ಕಂದಮ್ಮ ಕಿರುಚುತ್ತಿದ್ದರು ಬಿಡದ ಪಾಪಿಗಳು ಕಾಡಪ್ಪನ ಕಾಲ ಬಳಿ ಇದ್ದ ಶ್ರೀನಿಧಿಯನ್ನ ಜಾಡಿಸಿ ಒದೆಯುತ್ತಾರೆ. ದೂರ ಹೋಗಿ ಬಿದ್ದ ಮಗುವನ್ನ ದೇವರಾಜ್ ಕಾಲಿನಿಂದ ತುಳಿದು ಕೊಂದೆ ಬಿಡ್ತಾನೆ. ಬಳಿಕ ನಿನ್ನ ಮಗಳನ್ನ ಮುಗಿಸಿದ್ದೇನೆ ನಿನ್ನನ್ನೂ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕುತ್ತಾನೆ. ಮಗು ಮೃತಪಟ್ಟಿದ್ದನ್ನ ಗಮನಿಸಿದ ಕಾಡಪ್ಪ ಜೋರಾಗಿ ಕಿರುಚಲಾರಂಭಿಸಿದ ಆಗ ಅಲರ್ಟ್ ಆದ ಪಾಪಿಗಳು ಕೂಡಲೇ ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ.
ಇನ್ನೂ ಪ್ರಕರಣ ದಾಖಲಿಸಿಕೊಂಡು ಐಗಳಿ ಠಾಣೆ ಪೊಲೀಸರು ದೇವರಾಜ್ ನ ಬೆನ್ನು ಬಿದ್ದು ನಿನ್ನೆ ಮೂರು ಜನರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಮೂರು ಜನ ಪಾಪಿಗಳು ಹಣ ಮತ್ತು ಹೆಣ್ಣಿನ ವಿಚಾರವನ್ನ ಹೇಳಿ ತಾವೇ ಮಗುವನ್ನ ಕೊಂದಿದ್ದು ಅನ್ನೋದನ್ನ ಕೂಡ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಹೇಳಿಕೆ ದಾಖಲಿಸಿಕೊಂಡು ಜ್ಯೋತಿಬಾ(60), ದೇವರಾಜ್(26). ಯುವರಾಜ್(23) ಮೂವರನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ಕಳುಹಿಸುವ ಕೆಲಸ ಮಾಡದ್ದಾರೆ. ಇನ್ನೂ ಗಲಾಟೆಯಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದರು ಅಂತಾ ಕಾಡಪ್ಪ ಹೇಳುತ್ತಿದ್ದು ಈ ಆಯಾಮದಲ್ಲೂ ಇದೀಗ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.
ಮನೆ ಎದುರಿನವರು ಉದ್ದಾರ ಆಗ್ಲಿ ಜೀವನದಲ್ಲಿ ಮುಂದೆ ಬರಲಿ ಅಂತಾ ಹಣಕೊಟ್ಟು ಸಹಾಯ ಮಾಡಿದ್ದರು. ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮನೆ ಮಂದಿಯೇ ಬಂದು ಮಗುವನ್ನ ಬಲಿ ಪಡೆದಿದ್ದಾರೆ. ಇಲ್ಲಿ ಹಣವೂ ಇಲ್ಲಾ ಮೇಲಾಗಿ ಹೆತ್ತ ಮಗುವನ್ನೂ ಕಳೆದುಕೊಂಡು ಕುಟುಂಬ ಕಣ್ಣಿರಿಡ್ತಿದೆ. ಅಟ್ಟಹಾಸ ಮೆರೆದ ಪಾಪಿಗಳಿಗೆ ಕಠಿಣ ಶಿಕ್ಷೆ ಕೊಡಿಸ ಮಗುವಿನ ಆತ್ಮಕ್ಕೆ ಶಾಂತಿ ಕೊಡಿಸುವ ಕೆಲಸ ಪೊಲೀಸರು ಮಾಡಲಿ ಎಂಬುದು ಎಲ್ಲರ ಆಗ್ರಹ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 pm, Mon, 29 April 24