ಬೆಳಗಾವಿ, ಆಗಸ್ಟ್ 28: ಹಲವು ಕಾರಣಗಳಿಂದ ಬೆಳಗಾವಿ ವಿಮಾನ (Belagavi Airport) ನಿಲ್ದಾಣದಿಂದ ಕೆಲವು ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದೆ. ಬೆಳಗಾವಿಯಿಂದ ವಿಮಾನ ಸಂಚಾರಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವ ಹೊರತಾಗಿಯೂ ಕೆಲವು ಕಡೆಗಳಿಗೆ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಕೆಲವು ತಿಂಗಳುಗಳ ಹಿಂದೆ ಬೆಳಗಾವಿ ಮತ್ತು ದೆಹಲಿ (Belagavi Delhi Flight) ನಡುವಣ ವಿಮಾನ ಕೂಡ ಸ್ಥಗಿತಗೊಂಡಿತ್ತು. ಇದರಿಂದ ರಾಷ್ಟ್ರ ರಾಜಧಾನಿಗೆ ತೆರಳುವ ಹೆಚ್ಚಿನ ಸಂಖ್ಯೆಯ ವಿಮಾನ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು. ದೀರ್ಘಾವಧಿಯ ನಂತರ ಇದೀಗ, ಬೆಳಗಾವಿ ಮತ್ತು ದೆಹಲಿ ನಡುವಿನ ದೈನಂದಿನ ವಿಮಾನ ಸಂಚಾರ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿವೆ.
ಮೂಲಗಳ ಪ್ರಕಾರ, ಬೆಳಗಾವಿ-ದೆಹಲಿ ವಿಮಾನ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇಂಡಿಗೋ ಏರ್‌ಲೈನ್ಸ್ ಎರಡು ನಗರಗಳ ನಡುವೆ ವಿಮಾನ ಸೇವೆ ನೀಡಲಿದ್ದು, ದೆಹಲಿ-ಬೆಳಗಾವಿ ವಿಮಾನವು ದೆಹಲಿಯಿಂದ ಪ್ರತಿದಿನ ಮಧ್ಯಾಹ್ನ 3.45 ಕ್ಕೆ ಟೇಕ್ ಆಫ್ ಆಗಲಿದ್ದು, ಸಂಜೆ 6.05 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ-ದೆಹಲಿ ವಿಮಾನವು ಬೆಳಗಾವಿಯಿಂದ ಸಂಜೆ 6.35 ಕ್ಕೆ ಹೊರಟು ದೆಹಲಿಯನ್ನು ರಾತ್ರಿ 9 ಕ್ಕೆ ತಲುಪಲಿದೆ.
ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್
ಹಲವು ತಿಂಗಳುಗಳ ಹಿಂದೆ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ವಿಮಾನಯಾನ ಸಂಸ್ಥೆಗಳು ಕೆಲವು ಮಾರ್ಗಗಳ ನಡುವಣ ಸೇವೆಯನ್ನು ಹಠಾತ್ತನೆ ಸ್ಥಗಿತಗೊಳಿಸಿದ್ದವು. ಬೆಳಗಾವಿ ದೆಹಲಿ ನಡುವೆ ಈ ಹಿಂದೆ ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ಸೇವೆ ಒದಗಿಸುತ್ತಿತ್ತು. ಅದು ಸ್ಥಗಿತಗೊಂಡ ನಂತರ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಬೆಳಗಾವಿ-ದೆಹಲಿ ನಡುವಣ ಪ್ರಯಾಣಕ್ಕಾಗಿ ಗೋವಾ ಅಥವಾ ಬೆಂಗಳೂರಿಗೆ ತೆರಳಬೇಕಾಗಿತ್ತು.
ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಂದ ವಿವಿಧ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಹೆಚ್ಚಿನ ವಿಮಾನಗಳಿಗೆ ಪ್ರಯಾಣಿಕರಿಂದ ಸ್ಪಂದನೆ ದೊರೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ