ಬೆಳಗಾವಿ: ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ 9 ವಿದ್ಯಾರ್ಥಿಗಳ ರಕ್ಷಣೆ
ಕರ್ನಾಟಕ-ಗೋವಾ ಗಡಿ ಭಾಗದ ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡಿದ್ದ ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನ ಒಂಬತ್ತು ಜನ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಬೆಳಗಾವಿ, ಜನವರಿ 01: ಕರ್ನಾಟಕ-ಗೋವಾ (Karnataka-Goa) ಗಡಿ ಭಾಗದ ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ (Trekking) ತೆರಳಿ ಹಾದಿ ತಪ್ಪಿಸಿಕೊಂಡಿದ್ದ ಬೆಳಗಾವಿಯ (Belagavi) ಒಂಬತ್ತು ಜನ ವಿದ್ಯಾರ್ಥಿಗಳನ್ನು (Students) ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ಒಂಬತ್ತು ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ಬೈಕ್ಗಳಲ್ಲಿ ಪರವಾಡ ಗ್ರಾಮದ ಜಲವಾಣಿ ಜಲಪಾತವನ್ನು ವೀಕ್ಷಿಸಲು ತೆರಳಿದ್ದರು.
ಪರವಾಡ ಗ್ರಾಮದಿಂದ 3 ಕಿ.ಮೀ ದೂರದವರಗೆ ಕಾಲುದಾರಿಯಲ್ಲಿ ಬೈಕ್ ತೆಗೆದುಕೊಂಡ ಹೋದ ವಿದ್ಯಾರ್ಥಿಗಳು ಮರದ ಕೆಳೆಗೆ ಬೈಕ್‌ಗಳನ್ನು ನಿಲ್ಲಿಸಿ ಅರಣ್ಯ ಪ್ರದೇಶದೊಳಗೆ ಹೋಗಿದ್ದರು. ಅರಣ್ಯದ ಕಾಲುದಾರಿಯ ಮೂಲಕ ಜಲಪಾತಕ್ಕೆ ತೆರಳಿ ಅಲ್ಲಿಯೇ ಕೆಲ ಹೊತ್ತು ಕಳೆದು ಸಂಜೆ ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಮರಳುವಾಗ ಹಾದಿ ತಪ್ಪಿದ್ದರು.
ದಾರಿ ಹುಡುಕುತ್ತಾ ಕೊನೆಗೆ ಕಾಡಿನೊಳಗೆ ಪ್ರವೇಶಿಸುವ ಮಾರ್ಗಕ್ಕೆ ಬಂದು ತಲುಪಿದರು. ಬಳಿಕ ತಮ್ಮ ಸ್ನೇಹಿತರು, ಪೋಷಕರು ಮತ್ತು ಸಂಬಂಧಿಕರಿಗೆ ಕರೆ ಮಾಡಲು ಪ್ರಾರಂಭಿಸಿದರು. ಆದರೆ ಕಳಪೆ ಮೊಬೈಲ್ ನೆಟ್‌ವರ್ಕ್‌ನಿಂದ ಯಾರೊಂದಿಗೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಸ್ವಲ್ಪ ಸಮಯದ ನಂತರ, ಓರ್ವ ವಿದ್ಯಾರ್ಥಿ ತಮ್ಮ ಸ್ನೇಹಿತನೊಂದಿಗೆ ಸಂಪರ್ಕ ಸಾಧಿಸಿದನು. ಮತ್ತು ಅವರ ದುಃಸ್ಥಿತಿಯ ಬಗ್ಗೆ ತಿಳಿಸಿದನು. ಕೂಡಲೇ ಚಾರಣಿಗನ ಸ್ನೇಹಿತ ಈ ಸಂಗತಿಯನ್ನು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದನು.
ವಿಷಯ ತಿಳಿದ ಕೂಡಲೇ ಎಸಿಎಫ್ ಸಂತೋಷ್ ಚವ್ಹಾಣ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಮಹದಾಯಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಜಲವಾಣಿ ಜಲಪಾತಗಳು ಗೋವಾ ಅರಣ್ಯ ಪ್ರದೇಶಕ್ಕೆ ಬರುವುದರಿಂದ ಈ ವಿಚಾರವನ್ನು ಅವರಿಗೂ ತಿಳಿಸಲಾಯಿತು. ಕೂಡಲೇ ಕರ್ನಾಟಕ ಮತ್ತು ಗೋವಾ ಅರಣ್ಯಾಧಿಕಾರಿಗಳು ಶೋಧ ಕಾರ್ಯ ಆರಂಭಿಸಿದರು. ಎಸಿಎಫ್ ಸಂತೋಷ್ ಚವ್ಹಾಣ 2-3 ತಂಡಗಳನ್ನು ರಚಿಸಿ ಮತ್ತು ಅವುಗಳನ್ನು ವಿವಿಧ ದಿಕ್ಕುಗಳಲ್ಲಿ ಕಳುಹಿಸಿದರು. ಕರ್ನಾಟಕದ ಸುಮಾರು 20-25 ಸಿಬ್ಬಂದಿ ಹಾಗೂ ಗೋವಾ ಅರಣ್ಯ ಇಲಾಖೆಯ 12-15 ಸಿಬ್ಬಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಫೋನ್ ಮೂಲಕ ಅರಣ್ಯ ಅಧಿಕಾರಿಯನ್ನು ಸಂಪರ್ಕಿಸಿದರು.
ಇದನ್ನೂ ಓದಿ: ರಾಮನಗರ: ಸ್ನೇಹಿತನ ಜತೆ ಚಾರಣಕ್ಕೆ ತೆರಳಿದ್ದ ಯುವಕ ನಾಪತ್ತೆ, 4 ದಿನಗಳ ಬಳಿಕ ಶವವಾಗಿ ಪತ್ತೆ!
ಪ್ರಕರಣದ ಬಗ್ಗೆ ಎಸಿಎಫ್ ಸಂತೋಷ್ ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳು ಜಲಪಾತದಿಂದ ಕೇವಲ 2-3 ಕಿಮೀ ದೂರದಲ್ಲಿರುವ ದೊಡ್ಡ ಬಂಡೆಯ ಕೆಳಗೆ ಆಶ್ರಯ ಪಡೆದಿದ್ದರು. ನಾವು ಹತ್ತಿರ ತಲುಪಿದಾಗ, ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗುತ್ತಿರುವುದು ನಮಗೆ ಕೇಳಿಸಿತು. ನಾವು ಅವರನ್ನು ರಕ್ಷಿಸಿದ್ದೇವೆ ಮತ್ತು ಅವರು ಈಗ ಸುರಕ್ಷಿತವಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಗೋವಾ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಚಾರಣ ಅಥವಾ ಇತರ ಕಾರಣಗಳಿಗಾಗಿ ಅರಣ್ಯವನ್ನು ಅಕ್ರಮವಾಗಿ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಗೋವಾ ಅರಣ್ಯಾಧಿಕಾರಿಗಳು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. “ಪೋಷಕರು ಮತ್ತು ಕಾಲೇಜು ಆಡಳಿತದಿಂದ ಜವಾಬ್ದಾರಿಯನ್ನು ತೆಗೆದುಕೊಂಡ ನಂತರ, ಗೋವಾ ಅರಣ್ಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅವರ ಕುಟುಂಬಗಳಿಗೆ ನೀಡಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Mon, 1 January 24