ಬೆಳಗಾವಿ: ಬೆಳಗಾವಿ ಜಿಲ್ಲೆ ಶ್ರೀರಾಮಸೇನೆ ಅಧ್ಯಕ್ಷ ರವಿ ಮೇಲೆ ಫೈರಿಂಗ್ (Belagavi Firing) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 18 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಕ್ಯಾಂಪ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಭಿಜಿತ್ ಭಾತ್ಕಂಡೆ, ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾಮ್ ಬಂಧಿತ ಆರೋಪಿಗಳು. ಆರೋಪಿಗಳ ಬಂಧನವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಖಚಿತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಇಂದು(ಜನವರಿ 08) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಫೈರಿಂಗ್ ನಡೆದು 18 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೈಕ್ನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈಗ ಫೈರಿಂಗ್ ಪ್ರಕರಣದಲ್ಲಿ ಸುಫಾರಿ ನೀಡಿದ ಆರೋಪಿ ಸೇರಿ ಮೂವರ ಬಂಧನವಾಗಿದೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದಾಳಿ ನಡೆಸಿದ್ದರು. ಅಭಿಜಿತ್ ಮತ್ತು ರವಿ ನಡುವೆ ಹಣಕಾಸಿನ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದರು. 2020ರ ಜ.1ರಂದು ಅಭಿಜಿತ್ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಯ ಪ್ರಮುಖ ಆರೋಪಿ ರವಿ ಕೋಕಿತಕರ್ ಆಗಿರುತ್ತಾರೆ. ವೈಯಕ್ತಿಕ ದ್ವೇಷ ಹಿನ್ನೆಲೆ ನಿನ್ನೆ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಈ ಆರೋಪಿಗಳು ನಿನ್ನೆ(ಜನವರಿ 08) ಸಂಜೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಕಾರಿನಲ್ಲಿ ಹೋಗುವಾಗ ಹಿಂಡಲಗಾ ಬಳಿ ಗುಂಡಿನ ದಾಳಿ ನಡೆಸಿದ್ದರು. ರವಿ ಕೋಕಿತಕರ್ ಕಾರಿನಲ್ಲಿ ಬೆಳಗಾವಿಯಿಂದ ಹಿಂಡಲಗಾ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಹಿಂಡಲಗಾ ಗ್ರಾಮದ ಬಳಿ ರೋಡ್ ಹಂಪ್ನಲ್ಲಿ ಕಾರು ಸ್ಲೋ ಆಗಿದೆ. ಈ ವೇಳೆಯೇ ಫೈರಿಂಗ್ ಮಾಡಿದ್ದರು. ಇದರಿಂದ ಗುಂಡು ರವಿ ಗದ್ದಕ್ಕೆ ತಗುಲಿ ಬಳಿಕ ಚಾಲಕನ ಕೈಗೆ ತಗುಲಿತ್ತು.
ಆರೋಪಿಗಳ ಬಂಧನಕ್ಕೆ 4 ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ನಾಲ್ಕು ಪ್ರತ್ಯೇಕ ತಂಡ ರಚನೆ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಒಂದು ತಂಡ ಗೋವಾ, ಮತ್ತೊಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ ತೀವ್ರ ಶೋಧ ನಡೆಸಿತ್ತು.ಇನ್ನುಳಿದು ಮತ್ತೆರಡು ತಂಡಗಳು ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿತ್ತು.
ಇನ್ನಷ್ಟು ಬೆಳಗಾವಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:05 pm, Sun, 8 January 23