ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿನ ದಾಳಿ, ರವಿ ಗದ್ದಕ್ಕೆ ತಗುಲಿ ಬಳಿಕ ಚಾಲಕನ ಕೈಗೆ ಬಿದ್ದ ಬುಲೆಟ್

ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿರುವ ಘಟನೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿನ ದಾಳಿ, ರವಿ ಗದ್ದಕ್ಕೆ ತಗುಲಿ ಬಳಿಕ ಚಾಲಕನ ಕೈಗೆ ಬಿದ್ದ ಬುಲೆಟ್
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 07, 2023 | 10:50 PM

ಬೆಳಗಾವಿ: ಬೆಳಗಾವಿ (Belagavi) ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ (Shriram Sena district president) ಮೇಲೆ  ಇಬ್ಬರು ಅಪರಿಚಿತರು ಗುಂಡಿನ ದಾಳಿ (Firing) ನಡೆದಿರುವ ಘಟನೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್, ಕಾರು ಚಾಲಕ ಮನೋಜ್ ದೇಸೂರಕರ್‌ ಗಾಯಗೊಂಡಿದ್ದಾರೆ. ರವಿ ಕೋಕಿತಕರ್ ಹಾಗೂ ಕಾರು ಚಾಲಕನನ್ನು ಖಾಸಗಿ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿ ಕೋಕಿತಕರ್ ಕಾರಿನಲ್ಲಿ ಬೆಳಗಾವಿಯಿಂದ ಹಿಂಡಲಗಾ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ  ಹಿಂಡಲಗಾ ಗ್ರಾಮದ ಬಳಿ ರೋಡ್ ಹಂಪ್​​​​ನಲ್ಲಿ ಕಾರು ನಿಧಾನವಾಗಿದೆ. ಈ ವೇಳೆ ಅಪರಿಚಿತರು ಫೈರಿಂಗ್ ಮಾಡಿದ್ದಾರೆ. ಇದರಿಂದ ಗುಂಡು ರವಿ ಗದ್ದಕ್ಕೆ ತಗುಲಿ ಬಳಿಕ ಚಾಲಕನ ಕೈಗೆ ತಗುಲಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಚಾಕು ಇರಿತ ಮತ್ತು ಕೊಲೆಗಳಾಗಿದ್ದವು.

ಖಾಸಗಿ ಆಸ್ಪತ್ರೆ ಬಳಿ ಹಿಂದೂಪರ ಕಾರ್ಯಕರ್ತರ ಜಮಾವಣೆ

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರವಿ ಕೋಕಿತಕರ್ ಚಿಕಿತ್ಸೆ ಪಡೆಯುತ್ತಿರುವ  ಖಾಸಗಿ ಆಸ್ಪತ್ರೆ ಬಳಿ ಹಿಂದೂಪರ ಕಾರ್ಯಕರ್ತರ ಜಮಾವಣೆಯಾಗಿದ್ದಾರೆ. ಆಸ್ಪತ್ರೆಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆ ಬಳಿ ಒಂದು KSRP ತುಕಡಿ ನಿಯೋಜನೆ ಮಾಡಲಾಗಿದೆ. ಸದ್ಯ ರವಿ ಕೋಕಿತಕರ್  ಪ್ರಾಣಾಪಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಮನೋಜ್ ದೇಸೂರಕರ್‌ಗೂ ಚಿಕಿತ್ಸೆ ಮುಂದುವರಿದಿದೆ.

ರಾಜ್ಯಾದ್ಯಂತ ಶ್ರೀರಾಮಸೇನೆಯಿಂದ ಪ್ರತಿಭಟನೆ

ಫೈರಿಂಗ್‌ ನಡೆಸಿದ ಇಬ್ಬರನ್ನು ಕೂಡಲೇ ಬಂಧಿಸಬೇಕು. ನಾಳೆ (ಜ.8) ರಂದು ರಾಜ್ಯಾದ್ಯಂತ ಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಯುತ್ತೆ. ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇ‌ನೆ. ಪೊಲೀಸರು ಸಿಸಿ ಕ್ಯಾಮರಾ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್  ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾಳೆ ಸಂಜೆ ಬೆಳಗಾವಿಯಲ್ಲಿ ಹಿಂದೂ ಸಮಾಜೋತ್ಸವ ಇದೆ. ಗುಂಡೇಟಿನ ದುಷ್ಕೃತ್ಯಕ್ಕೆ, ನಾಚಿಕೆಗೇಡಿತನಕ್ಕೆ ಉತ್ತರ ನೀಡುತ್ತೇನೆ. ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ ಆಗಿದೆ. ಕೂದಲೆಳೆಯಷ್ಟು ಕತ್ತಿಗೆ ಗುಂಡು ತಾಕಿ ಚಾಲಕನ ಕೈಯೊಳಗೆ ಗುಂಡು ಹೊಕ್ಕಿದೆ‌. ಬಹಳ ದೊಡ್ಡ ಪ್ರಮಾಣದಲ್ಲಿ ಅಪಾಯಕಾರಿ ಹಲ್ಲೆ ತಪ್ಪಿದೆ ಎಂದರು.

ನಿಮ್ಮ ಗುಂಡಿಗೆ, ಬಾಂಬ್‌ಗೆ, ಕತ್ತಿಗೆ, ತಲ್ವಾರ್‌ಗೆ ಹೆದರಲ್ಲ

ಈ ರೀತಿ ದುಷ್ಕರ್ಮಿಗಳ ಆಟ ನಡೆಯುವುದಿಲ್ಲ. ಹಿಂದುತ್ವಕ್ಕೋಸ್ಕರ ಇರುವ ಶ್ರೀರಾಮಸೇನೆ ಸಂಘಟನೆ ಇದೆ. ಎಂದೂ ಯಾವತ್ತೂ ನಿಮ್ಮ ಗುಂಡಿಗೆ, ಬಾಂಬ್‌ಗೆ, ಕತ್ತಿಗೆ, ತಲ್ವಾರ್‌ಗೆ ಹೆದರಲ್ಲ. ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ.  ಬೈಕ್ ಮೇಲೆ ಬಂದ ಇಬ್ಬರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು.

ಹಿಂದುತ್ವ ಪರ ಕೆಲಸ ಮಾಡುವ ರವಿ ಮೇಲೆ ಹಲ್ಲೆ ಮಾಡಿದ್ದು ಒಳ್ಳೆಯ ಸಂಗತಿಯಲ್ಲ

ಈ ರೀತಿಯ ಘಟನೆ ನಡೆಯಬಾರದು. ಹಿಂದುತ್ವ ಪರ ಕೆಲಸ ಮಾಡೋ ರವಿ ಕೋಕಿತಕರ್ ಮೇಲೆ ಹಲ್ಲೆ ಒಳ್ಳೆಯ ಸಂಗತಿ ಅಲ್ಲ. ಪೊಲೀಸ್ ಆಯುಕ್ತರಿಗೆ ನಾನು ವಿನಂತಿ ಮಾಡುತ್ತೇನೆ. ಕೂಡಲೇ ಆರೋಪಿಗಳ ಬಂಧನ ಆಗಬೇಕು.  ಬೆಳಗಾವಿಯಲ್ಲಿ ಕನ್ನಡ ಮರಾಠಿ ಗಲಾಟೆ ಇದೆ ಆದಾಗಲೂ ಈ ರೀತಿ ಘಟನೆ ನಡೆದಿಲ್ಲ ಎಂದು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ.

ಹಿಂದೂ ಶಂಡ ಅಲ್ಲ ಗಂಡಸ ಅದಾನೆ ಯಾರೂ ಹೆದರಲ್ಲ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಳಗಾವಿಯ ಒಳ್ಳೆಯ ವಾತಾವರಣ ಹಾಳು ಮಾಡುವ ಪ್ರಯತ್ನ ಇದಾಗಿದೆ.. ತಮ್ಮ ತಮ್ಮ ಧರ್ಮಗಳ ಬಗ್ಗೆ ಮಾತನಾಡುವ ಅಧಿಕಾರ ಎಲ್ಲರಿಗೂ ಇದೆ. ಹಿಂದೂ ಸಮಾವೇಶ ಕಾರ್ಯಕ್ರಮ ಮಾಡುತ್ತಾರೆ ಯಾರಿಗೂ ಹೆದರುವ ಅವಶ್ಯವಿಲ್ಲ. ರವಿ ಹಿಂದೂ ಸಮಾಜದ ಪರ ಹೋರಾಟ ಮಾಡುತ್ತಾರೆ. ನೀವು ನಿಮ್ಮ ಧರ್ಮದ ಕೆಲಸ ಮಾಡಿದರೇ ಯಾರೂ ಅಡ್ಡಿ ಬರಲ್ಲ. ನಾವು ನಮ್ಮ ಧರ್ಮದ ಕೆಲಸ ಮಾಡುತ್ತೇವೆ ಅದರಲ್ಲಿ ತಪ್ಪೇನಿದೆ. ಘಟನೆ ಕುರಿತು ಗೃಹಸಚಿವರ ಜೊತೆ ಮಾತನಾಡುವೆ ಎಂದು ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ ಪೊಲೀಸರ ನಾಲ್ಕು ಪ್ರತ್ಯೇಕ ತಂಡ ರಚನೆ

ಆರೋಪಿಗಳ ಪತ್ತೆಗೆ ಪೊಲೀಸರ ನಾಲ್ಕು ಪ್ರತ್ಯೇಕ ತಂಡ ರಚಿಸಿದ್ದೇವೆ. ಬೆಳಗಾವಿಯಿಂದ ಹಿಂಡಲಗಾ ಗ್ರಾಮಕ್ಕೆ ತೆರಳುವಾಗ ಫೈರಿಂಗ್ ನಡೆದಿದೆ.  ರವಿ ಕೋಕಿತಕರ್ ಮತ್ತು ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ವೈಯಕ್ತಿಕ ಕಾರಣವೋ, ಸಂಘಟನೆ ಕಾರಣಕ್ಕೋ ಎಂಬುವುದರ ಬಗ್ಗೆ ತನಿಖೆ ಮಾಡುತ್ತೇವೆ. ಗುಂಡಿನ ದಾಳಿ ಸಂಬಂಧ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ ಎಂದು ಆಸ್ಪತ್ರೆಗೆ ಭೇಟಿ ಬಳಿಕ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:18 pm, Sat, 7 January 23