ಬೆಳಗಾವಿ, ನವೆಂಬರ್ 6: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ (Belagavi Politics) ಹೊರಗಿನವರು ಮೂಗು ತೂರಿಸುತ್ತಿರುವುದಕ್ಕೆ ಈಗಾಗಲೇ ಕೆಲವರ ಮೇಲೆ ಮುನಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ರಾಜಕೀಯ ವಿರೋಧಿಗಳಿಗೆ ಶಾಸಕರ ಪ್ರವಾಸದ ಹೆಸರಿನಲ್ಲಿ ಸಂದೇಶವನ್ನು ರವಾನಿಸುವ ಕೆಲಸ ಮಾಡಿದ್ದರು. ಈ ಮಧ್ಯೆ, ಇಬ್ಬರು ಪವರ್ಫುಲ್ ಸಚಿವರ ನಡುವೆ ಮತ್ತೊಂದು ಸುತ್ತಿನ ಕದನ ಶುರುವಾಗಿದೆ. ಬೆಳಗಾವಿ ಅಭಿವೃದ್ದಿ ಪ್ರಾಧಿಕಾರದಲ್ಲಿ ನೂರು ಕೋಟಿ ಪ್ರೊಜೆಕ್ಟ್ ಟೆಂಡರ್ ವಿಚಾರಕ್ಕೆ ಸತೀಶ್ ಮತ್ತು ಭೈರತಿ ಸುರೇಶ್ ನಡುವೆ ಮುಸುಕಿನ ಗುದ್ದಟ ಶುರುವಾಗಿದೆ.
ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರ ವತಿಯಿಂದ ಕಣಬರಗಿ ಗ್ರಾಮದಲ್ಲಿ ಹೊಸದೊಂದು ಲೇಯೌಟ್ ಮಾಡಲಾಗುತ್ತಿದೆ. ಇದರ ಅಭಿವೃದ್ದಿಗಾಗಿ ನಗರಾಭಿವೃದ್ದಿ ಇಲಾಖೆ ನೂರು ಕೋಟಿ ವೆಚ್ಚದ ಟೆಂಡರ್ ಕರೆದಿದ್ದು ಇದೇ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಭೈರತಿ ಸುರೇಶ್ ನಡುವೆ ಫೈಟ್ ಶುರುವಾಗಿದೆ. ಲೇಯೌಟ್ನಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಎಲ್ಲ ರೀತಿಯ ಅಭಿವೃದ್ದಿ ಮಾಡಲು ಈ ಟೆಂಡರ್ ಕರೆದಿದ್ದಾರೆ. ಇಲ್ಲಿ ಟೆಂಡರ್ನ ನಗರಾಭಿವೃದ್ದಿ ಸಚಿವರು ಹೊರಗಿನ ರಾಜ್ಯದವರಿಗೆ ನೀಡ್ತಿದ್ದಾರಂತೆ. ಬೆಳಗಾವಿ ಜಿಲ್ಲೆಯ ಗುತ್ತಿಗೆದಾರರಿಗೆ ಟೆಂಡರ್ ನೀಡುವ ವಿಚಾರವಾಗಿ ಈಗಾಗಲೇ ಸತೀಶ್ ಜಾರಕಿಹೊಳಿ ಸಚಿವ ಭೈರತಿ ಸುರೇಶ್ ಜತೆ ಮಾತನಾಡಿದ್ದರು. ಅದಾಗಿಯೂ ಬೇರೆಯವರಿಗೆ ಟೆಂಡರ್ ಕೊಡ್ತಿರುವುದು ಸತೀಶ್ ಮುನಿಸಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಈ ಮಧ್ಯೆ, ಬೆಳಗಾವಿ ಜಿಲ್ಲೆಯ ಕೆಲ ಗುತ್ತಿಗೆದಾರರು ಸಚಿವ ಭೈರತಿ ಸುರೇಶ್ ಅವರನ್ನ ಭೇಟಿಯಾಗಿ ಸ್ಥಳೀಯರಿಗೆ ಟೆಂಡರ್ ನೀಡುವಂತೆ ಮನವಿ ಮಾಡಿದ್ರೂ ಸ್ಪಂದಿಸಿಲ್ಲವಂತೆ. ಇದರಿಂದ ಆಕ್ರೋಶಗೊಂಡ ಬೆಳಗಾವಿ ಜಿಲ್ಲಾ ಕಾರ್ಯನಿರತ ಗುತ್ತಿಗೆದಾರ ಸಂಘ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಗುತ್ತಿಗೆದಾರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಸಚಿವ ಭೈರತಿ ಸುರೇಶ್ ವಿರುದ್ದ ಧಿಕ್ಕಾರ ಕೂಗ್ತಾ ಅಂಬೇಡ್ಕರ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ಬಂದು ಡಿಸಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದು ಇಂದು ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಅಂತಾ ಹೇಳಿದ್ದಾರೆ. ಜತೆಗೆ ಭೈರತಿ ಸುರೇಶ್ ಅವರು ಪರ್ಸಂಟೇಜ್ ಪಡೆದುಕೊಂಡು ಹೊರಗಿನವರಿಗೆ ಈ ಟೆಂಡೆರ್ ಕೊಡ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಹೇಳಿದ ಮೇಲೆಯೂ ಈ ಟೆಂಡರ್ ಬೇರೆಯವರಿಗೆ ಕೊಡ್ತಿರುವುದು ಪರ್ಸಂಟೇಜ್ಗಾಗಿ ಅಂತಾ ಗಂಭೀರ ಆರೋಪವನ್ನ ಮಾಡಿದ್ದಾರೆ.
ಗುತ್ತಿಗೆದಾರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಭೈರತಿ ಸುರೇಶ್, ಇನ್ನೂ ಒಂದು ಟೆಂಡರ್ ಕರೆದಿಲ್ಲಾ. ಈ ವರೆಗೂ ಯಾರಿಗೂ ಟೆಂಡರ್ ಕೊಟ್ಟಿಲ್ಲ. ಪಾರದರ್ಶಕವಾಗಿ ಟೆಂಡರ್ ನಡೆಯುತ್ತೆ, ಸಾಮರ್ಥ್ಯ ಇದ್ದವರು ತಗೊಳ್ತಾರೆ. ನನ್ನ ವಿರುದ್ಧ ಸುಮ್ಮನೇ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಕುರ್ಚಿ ಬಗ್ಗೆ ಅನುಮಾನ ವ್ತಕ್ತಪಡಿಸಿದ ಮೋದಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ಸರ್ಕಾರದಲ್ಲಿ ತಮ್ಮ ಕೆಲಸಗಳು ಆಗ್ತಿಲ್ಲಾ, ಅನುದಾನ ಬರ್ತಿಲ್ಲ ಅಂತಾ ಕೆಲ ಶಾಸಕರು ಹೇಳಿಕೊಳ್ಳುವ ಹೊತ್ತಿನಲ್ಲೇ ಟೆಂಡರ್ ವಿಚಾರದಲ್ಲಿ ಸತೀಶ್ ಮತ್ತು ಭೈರತಿ ಸುರೇಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಹೊರ ಬಂದಿದೆ. ಇತ್ತ ಗುತ್ತಿಗೆದಾರರು ಕೂಡ ಸಚಿವರ ವಿರುದ್ದ ಬೀದಿಗಿಳಿದಿದ್ದು ಹೊರಗಿನವರಿಗೆ ಇಲ್ಲಿ ಕೆಲಸ ಮಾಡಲು ಅವಕಾಶ ಕೊಡಲ್ಲಾ ಅಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ