ವಾಹನ ಸವಾರರೇ ಎಚ್ಚರ: ಬೆಳಗಾವಿಯಲ್ಲಿ ಮತ್ತೆ ರಸ್ತೆಗಿಳಿಯಲಿವೆ ಟೋಯಿಂಗ್ ವಾಹನಗಳು
ಹಬ್ಬದ ದಿನಗಳಲ್ಲಿ ಕಿರಿದಾದ ಮಾರುಕಟ್ಟೆ ಪ್ರದೇಶಗಳು ಜನ, ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ವಾಹನ ಸವಾರರು ಪಾರ್ಕಿಂಗ್ ಜಾಗ ಅರಸಿ ಮಾರುಕಟ್ಟೆಯಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ರಸ್ತೆ ಬದಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬೆಳಗಾವಿ ಸೆ.12: ಮಹಾನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ (Traffic Rules Break) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಂದಿನವಾರ ಗಣೇಶ ಚತುರ್ಥಿ (Ganesha Chaturthi) ಇದ್ದು, ಈ ವೇಳೆ ಸಂಚಾರ ದಟ್ಟಣೆ ಉಂಟಾಗದಂತೆ ತಡೆಯಲು ಇಲಾಖೆ ಒಂದು ವರ್ಷದ ಬಳಿಕ ಟೋಯಿಂಗ್ (Towing Vehicle) ಪುನರಾರಂಭಿಸಲು ಮುಂದಾಗಿದೆ. ಮುಂದಿನ ವಾರದಿಂದ ಸಂಚಾರ ಪೊಲೀಸ್ ಇಲಾಖೆ (Traffic Police) ಅಧಿಕಾರಿಗಳು ಖುದ್ದು ಫೀಲ್ಡ್ಗೆ ಇಳಿಯಲಿದ್ದಾರೆ. ಈ ವೇಳೆ ನಿಯಮ ಉಲ್ಲಂಘಿಸಿದ್ದ ವಾಹನಗಳನ್ನು ಟೋಯಿಂಗ್ ಮಾಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದರು.
ಹಬ್ಬದ ದಿನಗಳಲ್ಲಿ ಕಿರಿದಾದ ಮಾರುಕಟ್ಟೆ ಪ್ರದೇಶಗಳು ಜನ, ವಾಹನಗಳಿಂದ ತುಂಬಿ ತುಳುಕುತ್ತಿರುತ್ತದೆ. ವಾಹನ ಸವಾರರು ಪಾರ್ಕಿಂಗ್ ಜಾಗ ಅರಸಿ ಮಾರುಕಟ್ಟೆಯಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ರಸ್ತೆ ಬದಿ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರದಿಂದ ಟೋಯಿಂಗ್ ವಾಹನಗಳು ರಸ್ತೆಗೆ ಇಳಿಯಲಿವೆ.
ಟೋಯಿಂಗ್ನಿಂದ ಮತ್ತು ಇದಕ್ಕೆ ವಿಧಿಸುವ ಹೆಚ್ಚುವರಿ ದಂಡದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ 2022ರಲ್ಲಿ ರಾಜ್ಯ ಸರ್ಕಾರ ಟೋಯಿಂಗ್ ನಿಷೇಧಿಸಿತು. ಈ ಹಿಂದೆ ಖಾಸಗಿ ಏಜೆನ್ಸಿಗಳು ಟೋಯಿಂಗ್ ವಾಹನಗಳ ಗುತ್ತಿಗೆ ಪಡೆಯುತ್ತಿದ್ದವು, ಆದರೆ ಈಗ ಸಂಚಾರ ಪೊಲೀಸರೇ ಟೋಯಿಂಗ್ ಮಾಡಲಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಹೃದಯ ಭಾಗವಾದ ಬಾಪಟ್ ಗಲ್ಲಿಯಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ
ಗಣೇಶೋತ್ಸವಕ್ಕೆ ಒಂದು ದಿನ ಮುಂಚೆಯೇ ಟೋಯಿಂಗ್ ಆರಂಭಿಸಲಾಗುತ್ತದೆ. ಸಂಚಾರ ಪೊಲೀಸರ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಸಂಚಾರ ಠಾಣೆಗಳಲ್ಲಿ 20,000 ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸುಮಾರು 1.3 ಕೋಟಿ ದಂಡ ವಸೂಲಿ ಮಾಡಲಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಅಗತ್ಯ ಇರುವ ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ಗಳನ್ನು ಹಾಕಲಾದ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಜನರು ಸರಿಯಾಗಿ ಪಾರ್ಕಿಂಗ್ ಮಾಡದಿದ್ದರೆ, ಅವರ ವಾಹನಗಳನ್ನು ಖಂಡಿತವಾಗಿಯೂ ಟೋಯಿಂಗ್ ಮಾಡಲಾಗುವುದು ಎಂದು ಹೇಳಿದರು.
ರಾಮತೀರ್ಥ ನಗರದ ನಿವಾಸಿ ರವಿ ಕಾಂಬಳೆ ಮಾತನಾಡಿ, ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಪ್ರವಾಸಿಗರು ಕೆಲಸಕ್ಕಾಗಿ ನಗರಕ್ಕೆ ಬರುತ್ತಾರೆ. ಪ್ರತಿ ವರ್ಷ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಬೆಳಗಾವಿ ಬೆಳೆದಂತೆ ಸಮಸ್ಯೆಗಳು ಹೆಚ್ಚಾಗುತ್ತವೆ, ಆದರೆ ಇದಕ್ಕೆ ಪರಿಹಾರ ನೀಡುವವರು ಕಾಣೆಯಾಗಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವುದು ಅಗತ್ಯ. ಇದಕ್ಕಾಗಿ ಇಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು.
ಶಿವಬಸವ ನಗರ ನಿವಾಸಿ ಪ್ರವೀಣ್ ಎಂ. ಮಾತನಾಡಿ, ಬೆಳೆಯುತ್ತಿರುವ ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಮಹಾನಗರ ಪಾಲಿಕೆಯ ಯೋಜನೆ ದಶಕ ಕಳೆದರೂ ಜಾರಿಯಾಗಿಲ್ಲ. ಕೂಡಲೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ