ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಯಲಕ್ಕೆ 18 ಲಕ್ಷ ರೂ. ವಿದ್ಯುತ್ ಬಿಲ್, ಕುಲಪತಿ ಶಾಕ್
ಮಂಗಳೂರಿನ ವ್ಯಕ್ತಿಯೋರ್ವರ ಮನೆ ವಿದ್ಯುತ್ ಬಿಲ್ ಒಂದು ತಿಂಗಳಿಗೆ ಬರೋಬ್ಬರಿ 7,71,072 ರೂ. ಬಂದಿತ್ತು. ಇದು ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಬೆಳಗಾವಿ ವಿಟಿಯು ವಿಶ್ವವಿದ್ಯಾಯಲಕ್ಕೂ ಸಹ ವಿದ್ಯುತ್ ಬಿಲ್ ಶಾಕ್ ಆಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಯಾಗಿರುವ ಗೃಹಜ್ಯೋತಿ ಯೋಜನೆಗೆ(Gruha Jyothi Scheme) ಅನುಮೋದನೆ ನೀಡಿದ ಬೆನ್ನಲ್ಲೇ ವಿದ್ಯುತ್ ಬಿಲ್ನಲ್ಲಿ (Electricity Bill) ಭಾರೀ ಪ್ರಮಾಣದಲ್ಲಿ ಏರಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದುಪ್ಪಟ್ಟು ವಿದ್ಯುತ್ ಬಿಲ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ. ಬಿಲ್ ರೀಡರ್ ಯಡವಟ್ಟಿನಿಂದ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿತ್ತು. ಅದರಂತೆ ಇದೀಗ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ(vtu belagavi university )ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಹೆಸ್ಕಾಂ ಪ್ರಸಕ್ತ ತಿಂಗಳು 18 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದೆ. ಈ ಬಿಲ್ ಕಂಡು ಕುಲಪತಿ ಪ್ರೊ. ವಿದ್ಯಾಶಂಕರ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಮೀಟರ್ ರೀಡರ್ ಯಡವಟ್ಟು: ಏಳು ಲಕ್ಷ ರೂ. ಕರೆಂಟ್ ಬಿಲ್ ನೋಡಿ ಶಾಕ್ ಆದ ಮಂಗಳೂರಿನ ವ್ಯಕ್ತಿ
ಹೌದು…ಬೆಳಗಾವಿಯಲ್ಲಿರುವ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕ್ಯಾಂಪಸ್ನ ಮೇ ಈ ತಿಂಗಳ ವಿದ್ಯುತ್ ಬಿಲ್ ಬರೋಬ್ಬರಿ 18 ಲಕ್ಷ ರೂ. ಬಂದಿದೆ. ಇದರೊಂದಿಗೆ ವಿಟಿಯು ಮುಖ್ಯ ಕ್ಯಾಂಪಸ್ ಸೇರಿ ಒಟ್ಟು 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ. ಬಂದಿದೆ. ಮಾರ್ಚ್ ತಿಂಗಳಲ್ಲಿ 25,56,928 ರೂ, ಏಪ್ರಿಲ್ ತಿಂಗಳಲ್ಲಿ 25,29,021 ರೂ, ವಿದ್ಯುತ್ ಬಿಲ್ ಅನ್ನು ವಿಟಿಯು ಪಾವತಿಸಿತ್ತು. ಆದರೆ, ಮೇ ತಿಂಗಳಲ್ಲಿ 35,05,869 ರೂ. ಬಿಲ್ ಬಂದಿದೆ. ಒಂದೇ ತಿಂಗಳಲ್ಲಿ ಏಕಾಏಕಿ 10 ಲಕ್ಷ ರೂ. ಬಿಲ್ ಬಂದಿರುವುದಕ್ಕೆ ವಿಟಿಯು ಆಡಳಿತ ಮಂಡಳಿ ಹೌಹಾರಿದೆ. ಇನ್ನು 10 ಲಕ್ಷ ರೂ. ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂಗೆ ಪತ್ರ ಬರೆಯಲು ವಿಟಿಯು ಕುಲಪತಿ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: BESCOM: ಜೂನ್ ತಿಂಗಳಲ್ಲಿ ಹೆಚ್ಚು ವಿದ್ಯುತ್ ಬಿಲ್ ಬಂದಿದೆಯೇ? ಬೆಸ್ಕಾಂ ಸ್ಪಷ್ಟೀಕರಣ ಇಲ್ಲಿದೆ
ಮಂಗಳೂರಿನ ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿತ್ತು. ಇದರಿಂದ ಮಾಲೀಕ ಬಿಲ್ ನೋಡಿ ಶಾಕ್ ಆಗಿದ್ದರು. ಆದ್ರೆ, ಮೀಟರ್ ರೀಡರ್ ಎಡವಟ್ಟಿನಿಂದ ಇಷ್ಟೊಂದು ಬಿಲ್ ಬಂದಿದ್ದು, ಈ ಬಗ್ಗೆ ಮೆಸ್ಕಾಂ (MESCOM) ಸರಿಪಡಿಸಿತ್ತು. ಪ್ರತಿ ತಿಂಗಳು 3 ಸಾವಿರ ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ ಏಕಾಏಕಿ 7,71,072 ರೂ. ಬಂದಿದ್ದು, ಮೀಟರ್ ರೀಡರ್ ಯಡವಟ್ಟಿನಿಂದ ಈ ರೀತಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ಸ್ಪಷ್ಟನೆ ನೀಡಿದ್ದರು.
ಇನ್ನು ವಿದ್ಯುತ್ ಬಿಲ್ ದಿಢೀರ್ ಹೆಚ್ಚಳದ ವಿಚಾರವಾಗಿ ಬೆಸ್ಕಾಂ (BESCOM) ಸ್ಪಷ್ಟೀಕರಣ ನೀಡಿದೆ. ಜೂನ್ ತಿಂಗಳಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ ಮಾಹಿತಿ ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ ಆನ್ಲೈನ್ನಲ್ಲಿ ಋಣಾತ್ಮಕ ಬಿಲ್ ಬಂದಿದೆ. ಇನ್ನೆರಡು ದಿನಗಳ ಒಳಗೆ ಇದನ್ನು ಸರಿಪಡಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:05 am, Tue, 20 June 23