
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Soudha) ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು (ಡಿ.21) ಅಧಿವೇಶನ ಗದ್ದಲದಿಂದ ಕೂಡಿತ್ತು. ಹೌದು ವಿಪಕ್ಷಗಳು ಸರ್ಕಾರಿ ಬಸ್ (Government Bus) ವ್ಯವಸ್ಥೆ ಬಗ್ಗೆ ಚರ್ಚೆ ಮಾಡಲು ಅರ್ಧಗಂಟೆ ಸಮಯ ಕೊಡಿ ಎಂದಿರುವ ವಿಚಾರವಾಗಿ ಸದನದಲ್ಲಿ (Assembly) ಕೋಲಾಹಲ ಎದ್ದಿತು.
ಕಳೆದ ಕೆಲವು ದಿನಗಳ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಅನೇಕ ಊರುಗಳಗೆ ಬಸ್ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ. ಇದನ್ನು ತಿಳಿದು ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದಾಗ, ಜಿಲ್ಲಾಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಆಕ್ರೋಶ ಹೊರ ಹಾಕಿದರು. ನಂತರ ಸದನದ ಕಾಂಗ್ರೆಸ್ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಈ ವೇಳೆ ಕೈ ಶಾಸಕರು ಬಸ್ ಸಮಸ್ಯೆ ಬಗ್ಗೆ ಚರ್ಚಿಸಲು 30 ನಿಮಿಷ ಅವಕಾಶ ಕೊಡಿ ಇಲ್ಲದಿದ್ದರೇ ನಾವು ಧರಣಿ ಮುಂದುವರೆಸುತ್ತೇವೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ KBJNL: ಭಾರೀ ಅವ್ಯವಹಾರ, ಲೋಕಾಯುಕ್ತಕ್ಕೆ ದೂರು, ಸಚಿವ ಗೋವಿಂದ ಕಾರಜೋಳ ಭಾಗಿ ಶಂಕೆ
ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಲು ಸರ್ಕಾರ ಒಪ್ಪಿದೆ ಧರಣಿ ಕೈಬಿಡಿ ಎಂದು ಸ್ಪೀಕರ್ ಕುಮಾರ್ ಬಂಗಾರಪ್ಪ ಹೇಳಿದರು. ಸಚಿವರು ವಿಷಾದ ವ್ಯಕ್ತಪಡಿಸಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸದನದನಲ್ಲಿ ಘೋಷಣೆ ಮುಂದುವರೆಯಿತು.
ಸಿದ್ದರಾಮಯ್ಯ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ದಾಳಿ ಮಾಡುವುದು ಆ ಕಡೆ ಶಾಸಕರು ಮಾತನಾಡಿದಾಗ ಸಹಿಸಿಕೊಳ್ಳಬೇಕಾಗುತ್ತದೆ. ಟೇಬಲ್ ಮೇಲೆ ನಿಂತು ಮಾತನಾಡಿದ್ದು ಹಿಂದೆ ನೋಡಿದ್ದೇವೆ. ವಿಷಯ ಎಷ್ಟಿದೆ ಅಷ್ಟೇ ಮಾತನಾಡಿ. ದಾಳಿ ಮಾಡಿದರು ಅಂದರೇ ಹೇಗೆ? ಸಿಎಂ ಮಾತಿಗೆ ಸಿಟ್ಟಾದ ಸಿದ್ದರಾಮಯ್ಯ, ಮತ್ತೆ ಧಿಕ್ಕಾರ ಕೂಗಿ ಎಂದರು.
ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರನ್ನು ಆಚೆಗೆ ಹಾಕಿ, ನಾನು ಸಂಸದೀಯ ವ್ಯವಹಾರಗಳ ಸಚಿವ ಹೇಳುತ್ತಿದ್ದೇನೆ. ಮಾರ್ಷಲ್ ಕರೆಸಿ ಹೊರಗೆ ಕಳಿಸಿ ಎಂದು ಕಾಂಗ್ರೆಸ್ ಶಾಸಕರ ಮೇಲೆ ಮಾಧುಸ್ವಾಮಿ ಗರಂ ಆಗಿದ್ದರು. ಆಗ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರ ಹಾಕಿದ್ದಾರೆ. ಇದೇನಾ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಸಿದ್ದರಾಮಯ್ಯ ಗರಂ ಆದರು. ಗೂಂಡಾ ಮಂತ್ರಿ ಎಂದು ಕಾಂಗ್ರೆಸ್ ಶಾಸಕರು ಕೂಗಾಡಿದರು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸಚಿವ ಮಾಧುಸ್ವಾಮಿ ಗರಂ ಆಗಿದ್ದರು. ಮಾಧುಸ್ವಾಮಿ ಮಾತನಾಡುವಾಗ ಅಂಜಲಿ ನಿಂಬಾಳ್ಕರ್ ಬಾವಿಗಿಳಿದು ಎದುರು ಮಾತನಾಡಿದರು. ಇದಕ್ಕೆ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂಜಲಿ ನಿಂಬಾಳ್ಕರ್ ಅವರನ್ನು ಅಮಾನತು ಮಾಡಬೇಕು, ಹೊರಗೆ ಹಾಕಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ನಿರ್ಣಯ ಮಾಡುತ್ತೇನೆ. ಸದನದಿಂದ ಆಚೆ ಹಾಕಲೇಬೇಕು ಎಂದರು. ಹೊರಗಡೆ ಹಾಕ್ತೀರೋ ಇಲ್ವೋ ಎಂದು ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದರು. ಇದಕ್ಕೆ ಕಾಂಗ್ರೆಸ್ ತೀರ್ವ ಆಕ್ಷೇಪ ವ್ಯಕ್ತಪಡಿಸಿತು.
ಇದನ್ನೂ ಓದಿ: ಚಿತ್ರದುರ್ಗದ ಮುರುಘಾಶ್ರೀಯನ್ನು ಗಲ್ಲಿಗೇರಿಸಲು ಒತ್ತಾಯ: ಬಹುಜನ ಸಮಾಜ ಪಕ್ಷದಿಂದ ಪ್ರತಿಭಟನೆ
ಧರಣಿ ಮಾಡಿ ಸದನದ ಸಮಯ ಹಾಳು ಮಾಡೋದು ಸರಿಯಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಈಗಾಗಲೇ ಸಚಿವರು ಚರ್ಚೆ ಮಾಡೋದಾಗಿ ಹೇಳಿದ್ದಾರೆ ಎಂದರು. ರಂಗನಾಥ್ರನ್ನು ಹೇಯ್ ಆಚೆ ಹೋಗು ಅಂದರೇ ಏನರ್ಥ? ಎಲ್ಲಾ ಶಾಸಕರನ್ನು ರಕ್ಷಣೆ ಮಾಡಬೇಕಾದವರು ಅಧ್ಯಕ್ಷರು. ಆದರೆ ಸಚಿವರು ಈ ರೀತಿ ಮಾತಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ನಂತರ ಪ್ರತಿಪಕ್ಷ ಶಾಸಕರ ಮನವೊಲಿಸಲು ವಿಧಾನಸಭೆ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ಸಭೆ ನಡೆದಿದೆ. ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ, ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರೆ. ಸಂಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ಹೊರ ಹಾಕಿದರು. ಒಬ್ಬ ಸದಸ್ಯರನ್ನು ಆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ, ನನಗೆ ಸ್ವಾಭಿಮಾನ ಇದೆ ಎಂದು ಸಿಟ್ಟಾಗಿ ಅರ್ಧದಲ್ಲೇ ಸಭೆಯಿಂದ ಎದ್ದು ಹೋದರು.
ಚರ್ಚೆ ಬಳಿಕ ನಂತರ ವಿಪಕ್ಷ ಕಾಂಗ್ರೆಸ್ ನಾಯಕರು ತಣ್ಣಗಾಗಿದ್ದು, ಧರಣಿ ವಾಪಸ್ ಪಡೆಯಲಿದ್ದಾರೆ. ಕಲಾಪ ಆರಂಭದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಮಾತನಾಡಿದ್ದಾರೆ. ನಂತರ ವಿಪಕ್ಷ ಕಾಂಗ್ರೆಸ್ ಧರಣಿ ವಾಪಸ್ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Wed, 21 December 22