ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ

ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ ರೈತ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ
ಬೆಳಗಾವಿ ಪ್ರತಿಭಟನೆ ನಡೆಸಿದ ರೈತರು
Follow us
TV9 Web
| Updated By: guruganesh bhat

Updated on: Aug 10, 2021 | 4:42 PM

ಬೆಳಗಾವಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಳಗಾವಿಯ ರೈತರು ಚೆನ್ನಮ್ಮ ವೃತ್ತದಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿ ಪ್ರತಿಭಟನೆ‌ ನಡೆಸಿದರು. ರೈತ ಮುಖಂಡ ಸೋಮು ರೈನಾಪುರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಬೆಳಗಾವಿ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೂ ಉರುಳು ಸೇವೆ ಮಾಡಿದ್ದಾರೆ, ಪ್ರತಿಭಟನೆ. ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಖಾಸಗೀಕರಣ ನಿರ್ಧಾರ ರೈತ ವಿರೋಧಿಯಾಗಿದೆ. ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ನೆಲಮಂಗಲ: ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ರೈತ ಸಂಘ ಧರಣಿ ನಡೆಸಿದೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕುಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೂ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ನಿರ್ಧಾರ ಹಿಂಪಡೆಯುವಂತೆ ರೈತ ಸಂಘಟನೆ ಆಗ್ರಹಿಸಿದೆ.

ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸಬಾರದೆಂಬ ಆಕ್ಷೇಪವೇಕೆ? ವಿದ್ಯುತ್ ವಿತರಣೆಗೆ ಖಾಸಗಿ ಕಂಪನಿಗಳ ಮುಕ್ತಪ್ರವೇಶಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರಿ ಸ್ವಾಮ್ಯದ ವಿತರಣಾ ಕಂಪನಿಗಳ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ರಾಜ್ಯ ಸರ್ಕಾರಗಳ ಆಕ್ಷೇಪವಾಗಿದೆ. ಲಾಭ ತಂದುಕೊಡುವ ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಗಳತ್ತ ಮಾತ್ರ ಖಾಸಗಿ ಕಂಪನಿಗಳು ಗಮನಹರಿಸುತ್ತವೆ. ಹೆಚ್ಚಿನ ಜವಾಬ್ದಾರಿ, ಬಾಧ್ಯತೆ ಮತ್ತು ನಷ್ಟಕ್ಕೆ ಕಾರಣವಾಗುವ ಗ್ರಾಮೀಣ ಗೃಹ ಸಂಪರ್ಕಗಳನ್ನು ಕಡೆಗಳಿಸುತ್ತವೆ. ಅದು ಕೊನೆಗೆ ರಾಜ್ಯ ಸರ್ಕಾರಗಳ ಬಾಧ್ಯತೆಯಾಗಿಯೇ ಉಳಿಯುತ್ತದೆ ಎಂದು ರಾಜ್ಯ ಸರ್ಕಾರಗಳು ಹೇಳಿವೆ.

ಮಮತಾ ಬ್ಯಾನರ್ಜಿ ಸಹ ತಮ್ಮ ಪತ್ರದಲ್ಲಿ ಇದೇ ವಿಚಾರವನ್ನು ಪ್ರತಿಪಾದಿಸಿದ್ದಾರೆ. ವಿದ್ಯುತ್ ವಿತರಣಾ ಮಸೂದೆ ತಿದ್ದುಪಡಿಯಿಂದ ಈ ಕ್ಷೇತ್ರವು ಲಾಭವನ್ನೇ ಗಮನದಲ್ಲಿರಿಸಿಕೊಂಡ ಖಾಸಗಿ ಕಂಪನಿಗಳಿಗೆ ನಗರಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಅದೇ ಹೊತ್ತಿಗೆ ನಷ್ಟಕ್ಕೆ ಕಾರಣವಾಗುವ ಗ್ರಾಮೀಣ ಪ್ರದೇಶಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಇಂಧನ ಸಚಿವ ಆರ್​.ಕೆ.ಸಿನ್ಹಾ ಸಮಕ್ಷಮ ನಡೆದ ಸಭೆಯಲ್ಲಿಯೂ ವಿವಿಧ ರಾಜ್ಯ ಸರ್ಕಾರಗಳು ಈ ಕುರಿತು ತಮ್ಮ ಆತಂಕ ಹೇಳಿಕೊಂಡವು. ‘ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣಾ ಕಾರ್ಯದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿದರೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಹದ ಮಿಶ್ರಣವನ್ನು ಮಾಡಿಕೊಡುತ್ತೇವೆ. ಸಮಾನ ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದ್ದರು.

 ಇದನ್ನೂ ಓದಿ:  ವಿದ್ಯುತ್ ತಿದ್ದುಪಡಿ ಮಸೂದೆಗೆ ರಾಜ್ಯಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು ಏಕೆ? ವಿದ್ಯುತ್ ವಿತರಣಾ ಕಂಪನಿಗಳ ಭವಿಷ್ಯಕ್ಕೇನು ಅಪಾಯ?

(Bengaluru and Belagavi Farmers Protest opposing Privatisation Of Electricity and its Amendment Bill 2021)