ಚಾಮರಾಜನಗರ: ಬೆಳಗಾವಿ ಜಿಲ್ಲೆ ವಿಭಜನೆಗೆ ಉಮೇಶ್ ಕತ್ತಿ (Umesh Katti) ಒಲವು ತೋರಿದ್ದಾರೆ. ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ರಚನೆಗೆ ಒತ್ತಾಯ ಮಾಡಿದ್ದಾರೆ. ಈ ಕುರಿತು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಮೂರು ವಿಭಾಗಗಳಿವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿಭಜನೆಯಾಗಬೇಕು ಎಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಗೋಕಾಕ್ ನೂತನ ಜಿಲ್ಲೆ ರಚನೆಗೆ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಹುಕ್ಕೇರಿ ಜಿಲ್ಲೆ ಮಾಡಬೇಕೆಂದು ನನಗೂ ಆಸೆ ಇದೆ. ಆದ್ರೆ ಹುಕ್ಕೇರಿ ಜಿಲ್ಲೆ ಮಾಡಲು ಆಗಲ್ಲವಲ್ಲಾ. ಹಾಗೇ ಗೋಕಾಕ್ ಸಹ ಜಿಲ್ಲೆಯಾಗಿ ಮಾಡಲು ಆಗಲ್ಲ. ಎಸಿ ಕಚೇರಿಗಳಿದ್ದಲ್ಲಿ ಜಿಲ್ಲೆಗಳನ್ನು ಘೋಷಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಗೋಕಾಕ್ ನೂತನ ಜಿಲ್ಲೆ ರಚನೆಗೆ ಸಚಿವ ಕತ್ತಿ ವಿರೋಧ ವ್ಯಕ್ತಪಡಿಸಿದ್ದಾರೆ.
ಅಕ್ರಮವಾಗಿ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರಿಗೆ ದಂಡ ವಿಚಾರವಾಗಿ ಬಂಡೀಪುರದಲ್ಲಿ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ 13 ಲಕ್ಷ ಕಾರ್ಡ್ ರದ್ದು ಮಾಡಲಾಗಿದೆ. ಅಕ್ರಮವಾಗಿ ಪಡೆದಿರುವ 13 ಲಕ್ಷ ಪಡಿತರ ಕಾರ್ಡ್‌ಗಳು ರದ್ದು ಮಾಡಲಾಗಿದೆ. ಹೊಸದಾಗಿ 4 ಲಕ್ಷ ಜನರು ಪಡಿತರ ಚೀಟಿಗೆ ಅರ್ಜಿ ಹಾಕಿದ್ದಾರೆ ಎಂದು ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ವಿಜಯೇಂದ್ರ, ಹೀಗಾಗಿ ಬಿ.ವೈ.ವಿಜಯೇಂದ್ರಗೆ ಸಚಿವಸ್ಥಾನ ನೀಡಿದರೆ ತಪ್ಪಿಲ್ಲ ಎಂದು ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು? ಉಮೇಶ್ ಕತ್ತಿ ನೇತೃತ್ವದ ನಿಯೋಗಕ್ಕೆ ನಮ್ಮ ಬೆಂಬಲ ಇದೆ. ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜನೆಗೆ ನಮ್ಮ ಪಕ್ಷಾತೀತವಾಗಿ ಬೆಂಬಲ ಇದೆ ಎಂದು ಬೆಳಗಾವಿಯಲ್ಲಿ ಈ ಮೊದಲು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು? ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜನೆಗೆ ನಮ್ಮ ಪಕ್ಷಾತೀತವಾಗಿ ಬೆಂಬಲ ಇದೆ. ಈಗಾಗಲೇ ಬೆಳಗಾವಿ ತಾಲೂಕು ವಿಭಜನೆಗೆ ಮನವಿ ಮಾಡಿದ್ದೇನೆ. ನಮ್ಮ ಸರ್ಕಾರ ಬಂದ ಬಳಿಕ ಪ್ರತ್ಯೇಕ ತಾಲೂಕು ಮಾಡ್ತೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂದೂ ವ್ಯಕ್ತಿಯ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ನೆರವಿಗೆ ಧಾವಿಸಿದ್ದು ಒಬ್ಬ ಮುಸ್ಲಿಂ ವ್ಯಕ್ತಿ!
ಇದನ್ನೂ ಓದಿ: ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು -ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್