Belagavi: ರಾಜಕೀಯವಾಗಿ ಸೂಕ್ಷ್ಮವಾಗಿರುವ ಬೆಳಗಾವಿ ಪಾಲಿಕೆಗೆ ಇನ್ನೂ ಇಲ್ಲ ಮೇಯರ್ ಭಾಗ್ಯ! ಕಮಲ ಶಾಸಕರ ಕರಾಮತ್ತು?

| Updated By: ಸಾಧು ಶ್ರೀನಾಥ್​

Updated on: Jan 25, 2022 | 9:27 AM

ಬೆಳಗಾವಿ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದಿದೆ. 58 ವಾರ್ಡ್​ಗಳ ಪೈಕಿ 35 ವಾರ್ಡ್​ಗಳಲ್ಲಿ ಬಿಜೆಪಿ ಜಯಸಾಧಿಸಿ ಗದ್ದುಗೆ ತನ್ನದಾಗಿಸಿಕೊಂಡಿದೆ. ಅದ್ರಲ್ಲೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ರೂ ಬೆಳಗಾವಿ ಪಾಲಿಕೆ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Belagavi: ರಾಜಕೀಯವಾಗಿ ಸೂಕ್ಷ್ಮವಾಗಿರುವ ಬೆಳಗಾವಿ ಪಾಲಿಕೆಗೆ ಇನ್ನೂ ಇಲ್ಲ ಮೇಯರ್  ಭಾಗ್ಯ! ಕಮಲ ಶಾಸಕರ ಕರಾಮತ್ತು?
ಬೆಳಗಾವಿ ಪಾಲಿಕೆಗಿಲ್ಲ ಮೇಯರ್! ಮೇಯರ್ ಆಯ್ಕೆ ವಿಳಂಬದ ಹಿಂದಿದ್ಯಾ ಕಮಲ ಶಾಸಕರ ಕೈವಾಡ?
Follow us on

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದಿವೆ.. ಆದ್ರೂ, ಇನ್ನೂ ನೂತನ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸುವ ಭಾಗ್ಯ ಸಿಕ್ಕಿಲ್ಲ.. ಮೇಯರ್-ಉಪಮೇಯರ್ ಆಯ್ಕೆಯಾಗಿಲ್ಲ.. ಈವರೆಗೂ ಒಂದೇ ಒಂದು ಸಭೆಯೂ ನಡೆದಿಲ್ಲ.. ಇದ್ರಿಂದ ಬೆಳಗಾವಿ ಅಭಿವೃದ್ಧಿಗೆ ಗೃಹಣ ಹಿಡಿದಿದೆ. ಬೆಳಗಾವಿ ಪಾಲಿಕೆ 4 ತಿಂಗಳಾದ್ರೂ ಅತಂತ್ರವಾಗಿಯೇ ಇದೆ! ಮೇಯರ್-ಉಪಮೇಯರ್ ಆಯ್ಕೆಯಾಗದೆ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದಿದೆ. 58 ವಾರ್ಡ್​ಗಳ ಪೈಕಿ 35 ವಾರ್ಡ್​ಗಳಲ್ಲಿ ಬಿಜೆಪಿ ಜಯಸಾಧಿಸಿ ಗದ್ದುಗೆ ತನ್ನದಾಗಿಸಿಕೊಂಡಿದೆ. ಅದ್ರಲ್ಲೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ರೂ ಬೆಳಗಾವಿ ಪಾಲಿಕೆ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಇತ್ತ ಮೇಯರ್, ಉಪಮೇಯರ್ ಚುನಾವಣೆ ನಡೆಸದ ಸರ್ಕಾರದ ನಿರ್ಧಾರದಿಂದ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರೇ ರೋಸಿ ಹೋಗಿದ್ದಾರೆ. ಆದ್ರೆ ಸರ್ಕಾರದ ವಿರುದ್ಧ ಮಾತನಾಡದ ಸ್ಥಿತಿಯಲ್ಲಿದ್ದು, ಆಂತರಿಕವಾಗಿಯೇ ಅಸಮಾಧಾನ ಹೊರಹಾಕ್ತಿದ್ದಾರೆ. ಬಿಜೆಪಿಯೇ ಆಡಳಿತದಲ್ಲಿದ್ರೂ ಪಾಲಿಕೆ ಬಗ್ಗೆ ನಿರ್ಲಕ್ಷ್ಯವೇಕೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಜನ ಆಕ್ರೋಶಗೊಂಡಿದ್ದಾರೆ (Belagavi Mayor Election).

ಮೇಯರ್ ಪಟ್ಟಕ್ಕಾಗಿ ಬಿಜೆಪಿ ಶಾಸಕರಲ್ಲೇ ಫೈಟ್..!
ಮತ್ತೊಂದ್ಕಡೆ, ಮೇಯರ್ ಆಯ್ಕೆ ಸಂಬಂಧ ಬಿಜೆಪಿ ಶಾಸಕರಲ್ಲೇ ಪೈಪೋಟಿ ಇದೆ ಅನ್ನೋ ಮಾತು ಕೇಳಿ ಬರ್ತಿದೆ. ಮೇಯರ್ ಸ್ಥಾನ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಸದಸ್ಯರಿಗೆ ಸಿಗಲಿ ಅಂತಾ ಶಾಸಕ ಅಭಯ್ ಪಾಟೀಲ್ ಪ್ರಯತ್ನಿಸುತ್ತಿದ್ರೆ, ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ತಮ್ಮ ಕ್ಷೇತ್ರದ ಸದಸ್ಯರಿಗೆ ಮೇಯರ್ ಪಟ್ಟ ನೀಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ. ಮೇಯರ್ ಸ್ಥಾನ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಮೇಯರ್ ಸ್ಥಾನಕ್ಕೆ ಲಿಂಗಾಯತ ಹಾಗೂ ಮರಾಠ ಸಮುದಾಯದ ಮಧ್ಯೆಯೂ ಫೈಟ್ ಇದೆ.

ಆಯಾ ಸಮುದಾಯದ ಸದಸ್ಯರು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಮಾತಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮೇಯರ್ ಉಪಮೇಯರ್ ಆಯ್ಕೆಗೆ ನಗರ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಅಡ್ಡಗಾಲು ಹಾಕುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.. ಬಿಜೆಪಿ ಶಾಸಕರು ಇರೋವರೆಗೆ ಅವರೇ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು ಚಹಾ, ಬಿಸ್ಕೇಟ್ ಸೇವಿಸೋಕೆ ಮಾತ್ರ ಅಂತಾ ವ್ಯಂಗ್ಯವಾಡಿದ್ದಾರೆ.

ಇನ್ನು, ಮೇಯರ್ ಚುನಾವಣೆ ಬಗ್ಗೆ ಮಾತಾಡಿರುವ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, ಶೀಘ್ರದಲ್ಲಿಯೇ ಮೇಯರ್ ಉಪಮೇಯರ್ ಆಯ್ಕೆ ಆಗುತ್ತೆ ಅಂತಾ ಹೇಳಿದ್ದಾರೆ.‌ ಈ ತಿಂಗಳಾಂತ್ಯಕ್ಕೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಫೆಬ್ರವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುತ್ತೆ ಅಂದಿದ್ದಾರೆ.

ಒಟ್ಟಿನಲ್ಲಿ, ಮೊದಲೇ ಮಹಾನಗರ ಪಾಲಿಕೆ ಚುನಾವಣೆ ವಿಳಂಬವಾಗಿತ್ತು. ಈಗ ಮತ್ತೆ ಮೇಯರ್ ಉಪಮೇಯರ್ ಆಯ್ಕೆ ವಿಳಂಬವಾಗುತ್ತಿದ್ದು, ಬೆಳಗಾವಿ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ನಗರದಲ್ಲಿ ಇರುವ ಜ್ವಲಂತ ಸಮಸ್ಯೆಗಳ ಸರಮಾಲೆ ಮತ್ತಷ್ಟು ಹೆಚ್ಚಾಗಿದೆ.

-ಸಹದೇವ ಮಾನೆ, ಟಿವಿ9, ಬೆಳಗಾವಿ

ಇದನ್ನು ಓದಿ:
Indira Canteen: ಇಂದಿರಾ ಕ್ಯಾಂಟೀನ್​ನಲ್ಲಿ ಕೋಟಿ ಕೋಟಿ ಲೂಟಿ ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದೆ

ಇದನ್ನು ಓದಿ:
ಮದುವೆಯಾಗುವ ಭರವಸೆ ಉಲ್ಲಂಘನೆ ವಂಚನೆಯಲ್ಲ: ಹೈಕೋರ್ಟ್ ಏಕಸದಸ್ಯ ಪೀಠ ಆದೇಶ

Published On - 9:23 am, Tue, 25 January 22