ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿನ ಬೆಂಕಿ ತಣ್ಣಗಾಗಿಸಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂಟ್ರಿ ಕೊಡಲಿದ್ದಾರೆ. ಬಣ ಬಡಿದಾಟಕ್ಕೆ ಬ್ರೇಕ್ ಹಾಕಿ ಒಗ್ಗಟ್ಟಿನ ಜಪ ಜಪಿಸಲು ಬಿಜೆಪಿ ವರಿಷ್ಠರು ತಾಲೀಮು ನಡೆಸಿದ್ದಾರೆ. ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ಭಿನ್ನಮತ ಶಮನಕ್ಕೆ ಬಿಎಸ್‌ವೈ ಆ್ಯಂಡ್ ಟೀಂ ಪ್ಲ್ಯಾನ್ ಮಾಡಿಕೊಂಡಿದೆ. ವಿಭಾಗ ಮಟ್ಟದ ಬಿಜೆಪಿ ಪಕ್ಷ ಸಂಘಟನಾ ಸಭೆ ನಡೆಸಲು ಮುಂದಾಗಿದ್ದು ಸಭೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ಭಿನ್ನಮತದ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಗುತ್ತೆ. ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಎಲ್ಲರಿಗೂ ಸಭೆಗೆ ಆಹ್ವಾನಿಸಲಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಗೂ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಯಲಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಅರುಣ್ ಸಿಂಗ್ ಸೇರಿದಂತೆ ಕಮಲ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ನಾಯಕರು ಜಾರಕಿಹೊಳಿ ಬಣ ಮತ್ತು ಕತ್ತಿ, ಸವದಿ ಬಣದ ಕಡೆಯಿಂದ ಸಮಸ್ಯೆ ಆಲಿಸಲಿದ್ದಾರೆ. ಈ ವೇಳೆ ಎರಡು ಬಣದಿಂದ ಆರೋಪ ಪ್ರತ್ಯಾರೋಪ ಕೇಳಿ ಬರುವ ಸಾಧ್ಯತೆ ಇದೆ. ಸಮಸ್ಯೆಗಳನ್ನ ಆಲಿಸಿ ನಂತರ ಪರಿಹಾರ ಕಂಡುಕೊಳ್ಳಲಿದ್ದಾರೆ. ಜಾರಕಿಹೊಳಿ ಬಣದಲ್ಲಿ ಶಾಸಕರಾದ ಬಾಲಚಂದ್ರ, ಮಹೇಶ್ ಕುಮಟ್ಟಳ್ಳಿ, ಶ್ರೀಮಂತ ಪಾಟೀಲ್ ಸೇರಿ ಮಾಜಿ ಶಾಸಕರಿದ್ದಾರೆ. ಕತ್ತಿ ಬಣದಲ್ಲಿ ಲಕ್ಷ್ಮಣ ಸವದಿ, ಜೊಲ್ಲೆ ದಂಪತಿ, ಮಹಾಂತೇಶ್ ದೊಡ್ಡಗೌಡರ್, ಮಹಾದೇವಪ್ಪ ಯಾದವಾಡ ಇದ್ದಾರೆ.
ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಫೈಟ್ ಶುರುವಾಗಲು ಕಾರಣವೇನು?
ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಿಂದ ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣಗಳು ಏರ್ಪಟ್ಟಿದ್ದವು. ಎಂಎಲ್‌ಸಿ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ, ಸಹೋದರ ಲಖನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಹಿನ್ನೆಲೆ ಎರಡು ಬಣದಲ್ಲಿ ಒಳ ಜಗಳ ತಾರಕಕ್ಕೇರಿತ್ತು. ಇದಾದ ಬಳಿಕ ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಜಾರಕಿಹೊಳಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಗೆಲುವಿನಿಂದ ವಿರೋಧಿ ಬಣ ಇನ್ನಷ್ಟು ಒಗ್ಗಟ್ಟಾಗಿದೆ. ಎರಡು ಚುನಾವಣೆ ಸೋಲಿನ ನಂತರ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ನಡೆಸಿದೆ. ಜಾರಕಿಹೊಳಿ ಸಹೋದರರು ಮತ್ತು ಆಪ್ತರನ್ನ ಹೊರಗಿಟ್ಟು ಸಭೆ ನಡೆಸಲಾಗಿದೆ.
ಉಮೇಶ್ ಕತ್ತಿ, ಲಕ್ಷ್ಮಣ್ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಮಹಾಂತೇಶ್ ದೊಡ್ಡಗೌಡರ, ಮಾಜಿ ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಭಾಗಿಯಾಗಿದ್ದಾರೆ. ಬಿಜೆಪಿಯ ಅಧಿಕೃತ ಸಭೆ ಅಂತಾ ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ ಕತ್ತಿ ಟಾಂಗ್ ಕೊಟ್ಟಿದ್ದರು. ಎಂಎಲ್‌ಸಿ ಲಖನ್ ವಿರೋಧಿ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಣ ರಾಜಕೀಯ ಇರುವ ಕುರಿತು ಬಾಲಚಂದ್ರ ಜಾರಕಿಹೊಳಿ ಒಪ್ಪಿಕೊಂಡಿದ್ದರು. ಚುನಾವಣೆ ಮೊದಲೇ ಭಿನ್ನಮತ ಶಮನ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬೆಳಗಾವಿಗೆ ವರಿಷ್ಠರು ಎಂಟ್ರಿ ಕೊಡುತ್ತಿದ್ದು ಭಿನ್ನಮತ ಶಮನಕ್ಕೆ ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ ಎಫ್ಐಆರ್, ಹೇಳಿಕೆ ಬಳಿಕ ಕೇಸರಿ ಪಡೆ ಸೈಲೆಂಟ್