ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ: ಬಸವರಾಜ ಬೊಮ್ಮಾಯಿ ಘೋಷಣೆ

| Updated By: ganapathi bhat

Updated on: Oct 23, 2021 | 10:54 PM

Kittur Uthsava: ಕಿತ್ತೂರು ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ: ಬಸವರಾಜ ಬೊಮ್ಮಾಯಿ ಘೋಷಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಳಗಾವಿ: ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಣೆ ಮಾಡಲಾಗುತ್ತದೆ. ಒಂದು ತಿಂಗಳ ಕಾಲ ಕಿತ್ತೂರು ಜ್ಯೋತಿ ರಾಜ್ಯದಲ್ಲಿ ಸಂಚಾರ ಮಾಡುತ್ತದೆ ಎಂಬ ಬಗ್ಗೆ ವೇದಿಕೆ ಕಾರ್ಯಕ್ರಮದಲ್ಲೇ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಕಿತ್ತೂರು ಕರ್ನಾಟಕ ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸುತ್ತೇವೆ. ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ಕಿತ್ತೂರು ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಕಿತ್ತೂರು ಉತ್ಸವ 25ವರ್ಷಗಳನ್ನ ಪೂರೈಸುತ್ತಿದೆ. ಚೆನ್ನಮ್ಮನ ಕಿತ್ತೂರು ಉತ್ಸವದಲ್ಲಿ ಭಾಗವಹಿಸಲು ಬಹಳ ಸಂತೋಷ ಆಗ್ತಿದೆ. ನನ್ನ ಹಳೆಯ ನೆನಪುಗಳು ಇದೇ ವೇದಿಕೆಯಲ್ಲಿ ನೆನಪಾಗುತ್ತಿವೆ. ಮೊದಲ ಬಾರಿ ನಾನು ಇಲ್ಲಿಗೆ ಬಂದಾಗ ಅರಮನೆಗೆ ಬರಲು ರಸ್ತೆ ಕೂಡ ಇರಲಿಲ್ಲ. ಆ ಸಂದರ್ಭದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಿ 2008ರಲ್ಲಿ ಪ್ರಾಧಿಕಾರ ಮಾಡಲಾಯಿತು. ಅಂದು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಕಿತ್ತೂರಿನ ಜ್ಯೋತಿಯನ್ನು ಬೆಂಗಳೂರವರೆಗೂ ತೆಗೆದುಕೊಂಡು ಹೋಗುವ ಕೆಲಸ ಮಾಡಿದೆ. ದುರ್ದೈವ ಆ ಜ್ಯೋತಿ ಮುಂದೆ ಜಿಲ್ಲೆಗೆ ಅಷ್ಟೇ ಸೀಮಿತವಾಯಿತು‌. ಮುಂದಿನ ವರ್ಷ ಕಿತ್ತೂರು ಉತ್ಸವ ಜ್ಯೋತಿ ಇಡೀ ರಾಜ್ಯ ಸುತ್ತಿ ಕಿತ್ತೂರಿಗೆ ಬರಬೇಕು ಅಂತಾ ಆದೇಶ ಕೊಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಮುಂಬರುವ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಮಾಡುವ ನಿರ್ಣಯ
ಸತ್ಯಕ್ಕಾಗಿ ಇಂದು ನಾವು ರಾಜ್ಯಭಾರ ಮಾಡಬೇಕಿದೆ. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೇ ದೇಶ ಮುನ್ನಡಿಸಲು ಅಂತಹ ನಾಯಕತ್ವದ ಅವಶ್ಯಕತೆ ನಮಗಿದೆ. ಆ ಕೆಲಸವನ್ನ ಇಂದು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ವಿಶ್ವದಲ್ಲಿ ದೇಶದ ಸ್ವಾಭಿಮಾನ ಎತ್ತಿ ಹಿಡಿಯುವ ಕೆಲಸ ಪ್ರಧಾನಿ‌ ಮಾಡುತ್ತಿದ್ದಾರೆ. ನಾನು ಇಲ್ಲಿಂದ ವಿಜಯಪುರಕ್ಕೆ ಹೋಗಬೇಕಿರುವ ಕಾರಣಕ್ಕೆ ಮೊದಲು ಮಾತನಾಡಬೇಕಿದೆ. ಚೆನ್ನಮ್ಮನ ಕಿತ್ತೂರ ಕರ್ನಾಟಕ ಮಾಡಬೇಕು ಅಂತಾ ಬಹಳ ದಿನಗಳಿಂದ ಜನರ ಅಭಿಲಾಷೆ ಇದೆ. ಮುಂಬರುವ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಮಾಡುವ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಕಿತ್ತೂರು ಕರ್ನಾಟಕ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ರೂಪಾಯಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಮುಂದಿನ ಬಜೆಟ್​ನಲ್ಲಿ ಎರಡನೂರು ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನನಗೆ ಕಿತ್ತೂರಿಗೂ ಅನ್ಯೋನ್ಯ ಸಂಬಂಧ ಆ ಭಗವಂತ ಸೃಷ್ಟಿಸಿದ್ದಾನೆ ಅನಿಸುತ್ತೆ. ಇಲ್ಲಿ ಬಂದಾಗ ನಾನು ಸ್ಪೂರ್ತಿ ತಗೆದುಕೊಂಡು ಹೋಗ್ತೇನೆ. ನನ್ನ ವಿಚಾರಗಳು, ಗುರಿಗಳು, ಸಂಕಲ್ಪ ಇನ್ನಷ್ಟು ಗಟ್ಟಿಯಾಗ್ತಾವೆ. ಅದು ಚನ್ನಮ್ಮನ ಮಹಿಮೆ, ಅವಳ ಪರಿಶುದ್ಧ ದೇಶಭಕ್ತಿ ತ್ಯಾಗ ಬಲಿದಾನ ಎಲ್ಲಾ ನಮ್ಮ ಮನದಾಳದಲ್ಲಿದೆ. ಕಿತ್ತೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಅಭಿಲಾಷೆ ಇದೆ. ಭಗವಂತ ಅವಕಾಶ ಕೊಟ್ರೆ ಅದನ್ನ ಮಾಡ್ತೀನಿ. ರಾಷ್ಟ್ರೀಯ ಸ್ಮಾರಕ ಮಾಡಬೇಕಂದ್ರೆ ಆರ್ಕಿಯಾಲಾಜಿಕಲ್ ಪರ್ಮಿಷನ್ ಪಡೆದುಕೊಂಡು ಆ ಕೆಲಸ ಮಾಡ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರ ಹೋದರೆ ಚೆನ್ನಮ್ಮನಿಂದ ಅಧಿಕಾರ ಹೋಯ್ತು ಎಂದು ಸಂತಸ ಪಡ್ತೇನೆ
ಮೌಢ್ಯಕ್ಕೆ ಸೆಡ್ಡು ಹೊಡೆದು ಕಿತ್ತೂರು ಉತ್ಸವದಲ್ಲಿ ಸಿಎಂ ಭಾಗಿ ಆಗಿದ್ದೇನೆ. ಅಕಸ್ಮಾತ್ ನಾನು ಉತ್ಸವಕ್ಕೆ ಬಂದಿದ್ದಕ್ಕೆ ಅಧಿಕಾರ ಹೋದರೆ ಚೆನ್ನಮ್ಮನಿಂದ ಅಧಿಕಾರ ಹೋಯ್ತು ಎಂದು ಸಂತಸ ಪಡ್ತೇನೆ. ಚಾಮರಾಜನಗರಕ್ಕೆ ಹೋಗಬೇಡಿ ಅಂದಿದ್ದರು ಹೋಗಿದ್ದೇನೆ. ಕಿತ್ತೂರು ಉತ್ಸವಕ್ಕೂ ಬರಬೇಡಿ ಅಂದಿದ್ದರು ಬಂದಿದ್ದೇನೆ. ಕಾಕತಾಳೀಯ, ಆಕಸ್ಮಿಕವಾಗಿ ಕೆಲ ಘಟನೆ ನಡೆದಿರಬಹುದು. ಆದ್ರೆ ಎಷ್ಟೋ ಜನ ಇಲ್ಲಿ ಬರದೇ ಇದ್ದರೂ ಶಾಶ್ವತ ಇರಲ್ಲ. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಾಗಿಲ್ಲ. ಅಧಿಕಾರ ಎಂದೂ ಶಾಶ್ವತವಲ್ಲ ಎಂದು ಅರ್ಥೈಸಿಕೊಳ್ಳಬೇಕು. ಚೆನ್ನಮ್ಮ ಸಲುವಾಗಿ ಯಾವ ಮೂಢನಂಬಿಕೆ ನನಗೆ ಅಡ್ಡ ಬರಲ್ಲ. ಅಕಸ್ಮಾತ್ ಇದರಿಂದಾಗಿ ನನ್ನ ಅಧಿಕಾರ ಹೋದರೆ ಸಂತಸ ಪಡ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಡೆಯುತ್ತಿರುವ ಕಿತ್ತೂರು ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಈ ಮೊದಲು 1997 ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನ ಸಿಎಂ ಜೆ.ಹೆಚ್‌. ಪಟೇಲ್ ಉತ್ಸವಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ಇದೀಗ ಎರಡನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ಲಭಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ‌, ಸಂಸದರೆ ಮಂಗಲಾ ಅಂಗಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಶಾಸಕರಾದ ಮಹಾಂತೇಶ ದೊಡಗೌಡರ್, ಅನಿಲ್ ಬೆನಕೆ ಸಾಥ್ ನೀಡಿದ್ದಾರೆ. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಜಗದ್ಗುರು, ಹರಿಹರ ಪೀಠದ ವಚನಾನಂದ ಸ್ವಾಮೀಜಿ ಉತ್ಸವದ ಸಾನಿಧ್ಯ ವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗೈರಾಗಿದ್ದಾರೆ.

ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ; ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಗೈರು

ಇದನ್ನೂ ಓದಿ: ಬೆಳಗಾವಿ: ಇಂದು ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ; ಸಂಜೆ 7 ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ

Published On - 9:39 pm, Sat, 23 October 21