ಬೆಳಗಾವಿ: ಇಂದು ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ; ಸಂಜೆ 7 ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ
1997ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದ ಅಂದಿನ ಸಿಎಂ ಜೆ.ಹೆಚ್.ಪಟೇಲ್ ಬಳಿಕ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಯಾರು ಸಹ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ.
ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ. ಇಂದು (ಅಕ್ಟೋಬರ್ 23) ಸಂಜೆ 7 ಗಂಟೆಗೆ ಕಿತ್ತೂರು ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಉತ್ಸವಕ್ಕೆ ಸಿಎಂ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಇದೆ. ಹೀಗಾಗಿ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದು, ಮೌಢ್ಯ ನಿವಾರಣೆಗೆ ಮುಂದಾಗಿದ್ದಾರೆ.
ಅಪನಂಬಿಕೆ ಹೋಗಲಾಡಿಸಲು ಮುಂದಾದ ಸಿಎಂ ಬಸವರಾಜ ಬೊಮ್ಮಾಯಿ 1997ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದ ಅಂದಿನ ಸಿಎಂ ಜೆ.ಹೆಚ್.ಪಟೇಲ್ ಬಳಿಕ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಯಾರು ಸಹ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ.
2012ರ ಅಕ್ಟೋಬರ್ 25ರಂದು ಕಿತ್ತೂರು ಉತ್ಸವ ಸಮಾರೋಪ ಸಮಾರಂಭಕ್ಕೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಇದೇ ವೇದಿಕೆಯಲ್ಲಿ ಕಿತ್ತೂರು ತಾಲೂಕು ಘೋಷಣೆ ಮಾಡಿದ್ದರು. ಈ ಹಿಂದೆ ಸಿಎಂ ಆಗಿದ್ದಾಗ ಬಿ.ಎಸ್.ಯಡಿಯೂರಪ್ಪ ಕಿತ್ತೂರು ಉತ್ಸವಕ್ಕೆ ಬಂದರೂ ಹೆದ್ದಾರಿ ಬದಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂಜೆ ನಡೆಯುವ ಉತ್ಸವಕ್ಕೆ ಬಾರದೇ ತೆರಳಿದರು. ಈ ಎಲ್ಲಾ ಕಾರಣಗಳಿಂದ ರಾಜಕೀಯ ನಾಯಕರ ಮೌಢ್ಯಕ್ಕೆ ಕಿತ್ತೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಗೃಹ ಸಚಿವರಾಗಿದ್ದಾಗ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟನೆಗೆ ಬಸವರಾಜ ಬೊಮ್ಮಾಯಿ ಕಿತ್ತೂರಿಗೆ ಬಂದಿದ್ದರು. ಬಸವರಾಜ ಬೊಮ್ಮಾಯಿ ಕಿತ್ತೂರು ಭೇಟಿ ಬಳಿಕ ಸಿಎಂ ಆದರು. ಗುಜರಾತ್ ಸಿಎಂ ಆಗಿದ್ದಾಗ ಕಿತ್ತೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ ಬಳಿಕ ಪ್ರಧಾನಿಯಾದರು. ಹೆಚ್.ಡಿ.ದೇವೇಗೌಡರು ಸಹ ಕಿತ್ತೂರು ಭೇಟಿ ನೀಡಿದ ಬಳಿಕವೇ ಪ್ರಧಾನಿಯಾದರು ಎಂದು ಕಿತ್ತೂರಿನ ಜನರು ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮುಖ್ಯಮಂತ್ರಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಚನ್ನಮ್ಮನ ಪುತ್ಥಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ವೀರ ವನಿತೆ ಚನ್ನಮ್ಮಳ ಶೌರ್ಯ ಸಾಧನೆ ಕೊಂಡಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಚನ್ನಮ್ಮನ ಪುತ್ಥಳಿ ಸ್ಥಾಪಿಸಲು ದೊಡ್ಡ ಹೋರಾಟ ನಡೆದಿದೆ. ನಮ್ಮ ತಂದೆಯವರು ಚನ್ನಮ್ಮ ಪೂರ್ತಿ ಸ್ಥಾಪನೆ ತೀರ್ಮಾನ ತೆಗೆದುಕೊಂಡಿದ್ದು, ನಾನು ಸಚಿವನಿದ್ದಾಗ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದೆ. 8 ಕೋಟಿ ಅನುದಾನ ನೀಡಿದ್ದೆ. ಈ ವರ್ಷ 50 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Jamboo Savari 2021: ಮೈಸೂರಿನಲ್ಲಿ ಸಂಭ್ರಮದ ದಸರಾ: ಜಂಬೂ ಸವಾರಿಗೆ ಚಾಲನೆ
Published On - 8:30 am, Sat, 23 October 21