Jamboo Savari 2021: ಮೈಸೂರಿನಲ್ಲಿ ಸಂಭ್ರಮದ ದಸರಾ: ಜಂಬೂ ಸವಾರಿಗೆ ಚಾಲನೆ
Mysuru Dasara 2021: ಅಭಿಮನ್ಯು ಆನೆಗೆ ಬಣ್ಣದ ಚಿತ್ರ ಬಿಡಿಸಿ ಅಲಂಕಾರ ಮಾಡಲಾಗಿದೆ. ನಾಮ್ದಾ, ಗಾದಿ, ಚಾಪು, ಜೂಲ ಹಾಕಿ ಸಿಂಗರಿಸಲಾಗಿದೆ. ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಬೇರ್ ರೂಪ್, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗರಿಸಲಾಗಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಾಡಹಬ್ಬ ದಸರಾ ಸಂಭ್ರಮ ಭರದಿಂದ ಸಾಗುತ್ತಿದೆ. ಜೋಡಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದಾರೆ. ಆ ಮೂಲಕ, ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಜೋಡಿ ನಂದಿ ಧ್ವಜಕ್ಕೆ ಶುಭ ಮೀನ ಲಗ್ನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಪೂಜೆ ಸಲ್ಲಿಸಲಾಗಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಿಎಂ ಪುಷ್ಪಾರ್ಚನೆ ಗೈದಿದ್ದಾರೆ. ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ದೇವಿಗೆ ಪುಷ್ಪಾರ್ಚನೆ ಮಾಡಲಾಗಿದೆ. ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ಮಾಡಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಡಿಸಿ ಡಾ.ಬಗಾದಿ ಗೌತಮ್‌ರಿಂದಲೂ ಪುಷ್ಪಾರ್ಚನೆ ಮಾಡಲಾಗಿದೆ.
ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ಸಾಗಲಿದೆ. ಕ್ಯಾಪ್ಟನ್ ಅಭಿಮನ್ಯುಗೆ ಈ ಬಾರಿ 5 ಆನೆಗಳು ಸಾಥ್ ನೀಡಿವೆ. ಅಭಿಮನ್ಯು ಅಕ್ಕಪಕ್ಕ ಕಾವೇರಿ, ಚೈತ್ರಾ ಆನೆಗಳ ಹೆಜ್ಜೆ ಹಾಕಿವೆ. ಕುಮ್ಕಿ ಆನೆಗಳಾಗಿ ಚೈತ್ರಾ, ಕಾವೇರಿ ಆನೆಗಳು ಸಾಥ್ ನೀಡಿವೆ. ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಾಲಸ್ವಾಮಿ ಹಾಗೂ ಸಾಲಾನೆಯಾಗಿ ಅಶ್ವತ್ಥಾಮ ಆನೆ ಹೆಜ್ಜೆ ಹಾಕಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸಹ ಹಿನ್ನೆಲೆಯಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರಾಗಿರುವ ಕಾರಣ ಬೊಮ್ಮಾಯಿಗೆ ನಂದಿ ಧ್ವಜ ಸಮಿತಿ ಸದಸ್ಯರು ಸವದತ್ತಿ ಯಲ್ಲಮ್ಮನ ವಿಗ್ರಹ ಉಡುಗೊರೆ ನೀಡಿದ್ದಾರೆ. ಸಚಿವ ಎಸ್.ಟಿ. ಸೋಮಶೇಖರ್ ಸಾಂಪ್ರದಾಯಿಕ ರೇಷ್ಮೆ ಕುರ್ತಾ, ರೇಷ್ಮೆ ಪಂಚೆ, ರೇಷ್ಮೆ ಶಲ್ಯ ತೊಟ್ಟು ಬಂದಿದ್ದಾರೆ.
ಅತ್ಯಂತ ಭಕ್ತಿ ಭಾವದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ್ಯಂತ ಉತ್ತಮ ಮಳೆ ಬೆಳೆ ಆಗಲಿ ಎಂದು ಹಾರೈಸುವೆ. ಉತ್ತಮ ಬೆಳೆ ಬಂದು ರೈತರಿಗೆ ಒಳ್ಳೆಯದಾಗಲಿ. ರಾಜ್ಯದ ಜನತೆಗೆ ವಿಜಯದಶಮಿ ಶುಭಾಶಯ ಎಂದು ಮೈಸೂರು ಅರಮನೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಸಿಎಂ ಶುಭಕೋರಿದ್ದಾರೆ. ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ, ಸಂಸದರಾದ ಮುನಿಸ್ವಾಮಿ, ಪ್ರತಾಪ್ ಸಿಂಹ ಮುಖ್ಯಮಂತ್ರಿ ಜೊತೆಗಿದ್ದಾರೆ.
ಕಣ್ಮನ ಸೆಳೆಯುವ ಸ್ತಬ್ಧಚಿತ್ರಗಳು ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಗಾಂಭೀರ್ಯ ಹೆಜ್ಜೆ ಹಾಕುತ್ತಿದೆ. ಮೆರವಣಿಗೆಯಲ್ಲಿ ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಇದೆ. ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ಧಚಿತ್ರಗಳು ಸಾಗಿದೆ. ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಭಾಗಿಯಾಗುತ್ತಿದ್ದವು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ, ಸ್ತಬ್ಧಚಿತ್ರಗಳಿಗೆ ಕೊಕ್ ಹಾಕಲಾಗಿದೆ. ಮೈಸೂರಿನಲ್ಲಿ ಸೂರಿನ ಬಗ್ಗೆ ಮುಡಾದಿಂದ ಸ್ತಬ್ಧ ಚಿತ್ರ ಮೆರವಣಿಗೆ ಸಾಗಿದೆ. ಬೇಡ ನನಗೆ ಕೊಡಲಿ ನೆರಳನೇಕೆ ಕೊಡಲಿ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಗಿದೆ. ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಸ್ತಬ್ಧಚಿತ್ರ ಮೆರವಣಿಗೆ ಇದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ ಸ್ತಬ್ಧಚಿತ್ರ ಕಂಡುಬಂದಿದೆ. ಆರೋಗ್ಯ ಇಲಾಖೆಯಿಂದ ಕೊವಿಡ್ ಮುಕ್ತ ಕರ್ನಾಟಕ ಸ್ತಬ್ಧಚಿತ್ರ ಇದೆ. ಮೈಸೂರು ದಸರಾ ಉಪಸಮಿತಿಯಿಂದಲೂ ಸ್ತಬ್ಧಚಿತ್ರ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರ ಮೆರವಣಿಗೆ ಕಂಡುಬಂದಿದೆ. ಅರಮನೆ ವಾದ್ಯಗೋಷ್ಠಿಯ ಸ್ತಬ್ಧಚಿತ್ರ ಮೆರವಣಿಗೆ ಸಾಗುತ್ತಿದೆ.
ಆನೆ ಮತ್ತು ಅಂಬಾರಿಗೆ ಸಿಂಗಾರ ಇದಕ್ಕೂ ಮೊದಲು ಅರಮನೆ ಭದ್ರತಾ ಕೊಠಡಿಯಿಂದ ಅಂಬಾರಿ ಹೊರಗೆ ತರಲಾಗಿದೆ. ಅರಮನೆ ಆಡಳಿತ ಮಂಡಳಿಯಿಂದ ಜಿಲ್ಲಾಡಳಿತಕ್ಕೆ ಅಂಬಾರಿ ಹಸ್ತಾಂತರ ಮಾಡಲಾಗಿತ್ತು. ಭದ್ರತಾ ಕೊಠಡಿಯಿಂದ ಹೊರತಂದು ಅಲಂಕಾರ ಮಾಡಲಾಗಿತ್ತು. ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಬಳಿಕ ಅಂಬಾರಿಯಲ್ಲಿ ಉತ್ಸವ ಮೂರ್ತಿ ಕೂರಿಸಲಾಗಿತ್ತು. ಅಂಬಾರಿಯನ್ನು ಅರಮನೆ ಆಡಳಿತ ಮಂಡಳಿ, ಮೈಸೂರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತ್ತು. ಅಂಬಾರಿಗೆ ಪುಷ್ಪಾಲಂಕಾರ ಮಾಡಿದ ಬಳಿಕ, ಅಂಬಾರಿ ಉತ್ಸವ ಮೂರ್ತಿ ಕೂರಿಸಲಾಗಿತ್ತು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸಹ 2021ರ ಸಲುವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಅಲಂಕಾರ ಮಾಡಲಾಗಿದೆ. ಅಭಿಮನ್ಯು ಆನೆಗೆ ಬಣ್ಣದ ಚಿತ್ರ ಬಿಡಿಸಿ ಅಲಂಕಾರ ಮಾಡಲಾಗಿದೆ. ನಾಮ್ದಾ, ಗಾದಿ, ಚಾಪು, ಜೂಲ ಹಾಕಿ ಸಿಂಗರಿಸಲಾಗಿದೆ. ಮಾವುತರು ಜಂಬೂಸವಾರಿಗೆ ಸಿದ್ಧತೆ ಮಾಡಿದ್ದರು. ಎಲ್ಲಾ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಬೇರ್ ರೂಪ್, ಕತ್ತಿನ ಘಂಟೆ, ಕಾಲಿನ ಘಂಟೆ, ಸಿರಿಯಿಂದ ಸಿಂಗರಿಸಿದ್ದರು.
ಇದನ್ನೂ ಓದಿ: Mysuru Dasara: ದಸರಾ ದೀಪಾಲಂಕಾರ 9 ದಿನ ಮುಂದುವರಿಕೆ: ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ
ಇದನ್ನೂ ಓದಿ: ಮೈಸೂರು ದಸರಾ 2021: ಅಂಬಾರಿಯಲ್ಲಿ ರಾರಾಜಿಸುವ ಮಹಿಷಮರ್ಧಿನಿ ಮೂರ್ತಿ ಹೇಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ
Published On - 5:41 pm, Fri, 15 October 21