ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಶಾಂತಿಯುತ ಪ್ರತಿಭಟನೆ ಮಾಡುವುದು ಅವರ ಹಕ್ಕು. ಪ್ರತಿಭಟನೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ನೀವೊಬ್ಬ ವಕೀಲರಾಗಿ ಹೀಗೆ ಹೇಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು. ‘ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶದಂತೆ ಎಲ್ಲರೂ ನಡೆಯಬೇಕು. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಧಿಕಾರ ಎಲ್ಲರಿಗೂ ಇರುತ್ತದೆ. ಅಸಮಾಧಾನ ಇರುವುದರಿಂದ ತಾನೆ ಅಪೀಲು ಹೋಗುವುದು? ಶಾಂತಿಯುತ ಪ್ರತಿಭಟನೆ ಮಾಡುವುದೂ ಸಹ ಅವರ ಹಕ್ಕು. ಸರ್ಕಾರ ಪ್ರತಿಭಟನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹೇಳಿಕೆಗೆ ಆಕ್ಷೇಪಿಸಿದ ಸಿ.ಟಿ.ರವಿ, ’ಕೋರ್ಟ್ ಆದೇಶದ ವಿರುದ್ಧ ಮಾತನಾಡಿ ಬೆದರಿಕೆ ಹಾಕುವುದು, ಶಾಂತಿಯುತ ವಾತಾವರಣ ಕೆಡಿಸುವುದು ಸರಿಯಲ್ಲ. ವೋಟ್ ಬ್ಯಾಂಕ್ ರಾಜಕಾರಣ ಮಹಾಪಾಪ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ‘ನೀವು ವಕೀಲರಾಗಿ ಈ ರೀತಿ ಹೇಳುವುದು ಸರಿಯಲ್ಲ’ ಎಂದು ಜಗದೀಶ್ ಶೆಟ್ಟರ್ ಆಕ್ಷೇಪಿಸಿದರು.
ತಾಯಿ ಹೃದಯ ಇಲ್ಲದ ಸರ್ಕಾರ
ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಈ ಸರ್ಕಾರಕ್ಕೆ ತಾಯಿ ಹೃದಯ ಇಲ್ಲ. ಇದ್ದಿದ್ದರೆ ಮುಸ್ಲಿಂ ಹೆಣ್ಣುಮಕ್ಕಳ ವಿಚಾರದಲ್ಲಿ ಹೀಗಾಗುತ್ತಿರಲಿಲ್ಲ. ಸ್ಕಾರ್ಫ್ ಹಾಕಿಕೊಂಡು ತರಗತಿಯಲ್ಲಿ ಕುಳಿತುಕೊಂಡರೆ ಯಾರಿಗೂ ನಷ್ಟ ಇರಲಿಲ್ಲ. ಸರ್ಕಾರದ ಧೋರಣೆಯು ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಸಮಸ್ಯೆಗಳನ್ನು ತಂದೊಡ್ಡಲಿದೆ. ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯ್ಯಲ್ಲಿ ಕಂಪ್ಯುಟರ್ ಇರಲಿ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ ಬಸವರಾಜ ಬೊಮ್ಮಾಯಿ ಸರ್ಕಾರದ ನಡೆ ಇದಕ್ಕೆ ಪೂರಕವಾಗಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆಗೆ ಹೋಗಲು ಸಾಧ್ಯವಾಗದ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ಯತ್ನಿಸಬೇಕಿತ್ತು. ಸಮುದಾಯದ ಪದ್ಧತಿಯಂತೆ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಇದನ್ನೊಂದು ವಿವಾದ ಆಗುವಂತೆ ಮಾಡಿದ್ದಾರೆ. ಕೋರ್ಟ್ ವಿಚಾರವಾಗಿ ಯಾವುದೇ ಪ್ರತಿಭಟನೆ, ಹೋರಾಟ, ತಿರಸ್ಕಾರ ಇಲ್ಲ. ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮುದಾಯ ಬಂದ್ ಆಚರಣೆ ಮಾಡ್ತಿದೆ. ಬಲವಂತವಾಗಿ ಬಂದ್ ಆಚರಣೆ ಇಲ್ಲ. ಬಂದ್ ಆಚರಣೆಗೆ ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಗುರುಗಳು ಕರೆ ಕೊಟ್ಟಿಲ್ಲ. ಮುಸ್ಲಿಂ ಸಮುದಾಯದ ಯುವಕರು ತಮ್ಮ ಕೆಲಸಕ್ಕೆ ಗೈರಾಗಿ ಬಂದ್ ಆಚರಣೆ ಮಾಡುತ್ತಿದ್ದಾರೆ. ಹೈಕೋರ್ಟ್ ನಮಗೆ ತೃಪ್ತಿಕೊಟ್ಟಿಲ್ಲ. ಹೀಗಾಗಿ ನಾವು ಸುಪ್ರಿಂಕೋರ್ಟ್ಗೆ ಹೋಗುತ್ತೇವೆ ಎಂದರು.
ಸಲೀಂ ಅಹಮದ್ ಮಾತಿಗೆ ಬಿಜೆಪಿ ಆಕ್ಷೇಪ
ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಅವರು ಬಜೆಟ್ ಚರ್ಚೆಯ ವೇಳೆ ಹಿಜಾಬ್ ವಿಷಯ ಪ್ರಸ್ತಾಪಿಸಿದರು. ಹಿಜಾಬ್ ಪ್ರಕರಣ ಇಷ್ಟು ದಿನ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಇದು ಬರುತ್ತೆ. ಹಿಜಾಬ್ ಎನ್ನುವುದು ಮುಸ್ಲಿಂ ಧರ್ಮದ ಒಂದು ಪದ್ಧತಿ. ಈ ಪದ್ಧತಿಯ ವಿರುದ್ಧ ಸರ್ಕಾರ ನಿರ್ಣಯ ಮಾಡಿದೆ ಎಂದು ದೂರಿದರು.
ಅಲೀಂ ಅಹಮದ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾ ನಾಯಕ ಶ್ರೀನಿವಾಸ ಪೂಜಾರಿ. ನಿಲ್ಲು ನಿಲುವು ಏನು ಎಂದು ಪ್ರಶ್ನಿಸಿದರು. ಈ ವೇಳೆ ಎದ್ದು ನಿಂತ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ‘ನಿಮ್ಮ ಮುಂದೆ ನಮ್ಮ ನಿಲುವು ಹೇಳಬೇಕಿಲ್ಲ. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುವಾಗ ಹೇಳುತ್ತೇವೆ’ ಎಂದರು. ಈ ವೇಳೆ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿ ಬಸವರಾಜ್ ಹೊರಟ್ಟಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ: ಹಿಜಾಬ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳಿಂದ ಕರ್ನಾಟಕ ಬಂದ್: ಎಲ್ಲಿ ಹೇಗಿತ್ತು, ಇಲ್ಲಿದೆ ವಿವರ
Published On - 2:12 pm, Thu, 17 March 22