ಬೆಳಗಾವಿ: ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸದ್ಯ ಮೊಸಳೆಗಳು ದಡಕ್ಕೆ ಬರ್ತಿವೆ. ಇನ್ನೂ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದ ಪಕ್ಕದಲ್ಲಿರುವ ಘಟಪ್ರಭಾ ನದಿಯಲ್ಲಿ ಇಂದು 18 ಮೊಸಳೆ ಮರಿಗಳು ಪ್ರತ್ಯಕ್ಷವಾಗಿವೆ. ಇದನ್ನ ಕಂಡ ಗ್ರಾಮಸ್ಥರು ಒಂದು ಕಡೆ ಆತಂಕಕ್ಕೊಳಗಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಇದೇ ಸ್ಥಳದಲ್ಲಿ ನಾಲ್ಕು ಮೊಸಳೆ ಮರಿಗಳು ಈಜಲು ಹೋಗಿದ್ದ ವ್ಯಕ್ತಿಗೆ ಕಂಡಿದ್ದವು.
ಇದೀಗ ಮತ್ತೆ 18 ಮರಿಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಮೊಸಳೆ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಎಲ್ಲವೂ 15 ದಿನಗಳ ಹಿಂದಷ್ಟೇ ಜನಸಿರುವ ಮರಿಗಳಾಗಿದ್ದು, ಅವುಗಳನ್ನ ಸ್ಥಳೀಯ ಯುವಕರು ಕೈಯಲ್ಲಿ ಹಿಡಿದು ಖುಷಿ ಪಟ್ಟುಕೊಂಡಿದ್ದಾರೆ.
ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗೆ ಮೊಸಳೆ ಮರಿಗಳು ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಸಿದ್ದು, ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳು ತಾಯಿ ಮೊಸಳೆಯನ್ನ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಘಟಪ್ರಭಾ ನದಿ ತಟದಲ್ಲಿ ಪದೇ ಪದೇ ಮೊಸಳೆಗಳು ಪ್ರತ್ಯಕ್ಷವಾಗುತ್ತಿದ್ದು, ಜಮೀನುಗಳಿಗೆ ಹೋಗಲು ರೈತರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿದ್ದಕ್ಕೆ ಮೊಸಳೆಗಳು ಗ್ರಾಮ ಮತ್ತು ಜಮೀನುಗಳತ್ತ ಮುಖ ಮಾಡುತ್ತಿದ್ದು ಸಾವಳಗಿ ಗ್ರಾಮ ಮತ್ತು ಗೋಕಾಕ್ ತಾಲೂಕಿನ ಹಾಗೂ ಹುಕ್ಕೇರಿ ತಾಲೂಕಿನ ಇಪ್ಪತ್ತೈದಕ್ಕೂ ಅಧಿಕ ಗ್ರಾಮಗಳ ಜನರಲ್ಲಿ ಮೊಸಳೆ ಭೀತಿ ಕಾಡುತ್ತಿದೆ. ಇನ್ನು ಪದೇ ಪದೇ ಮೊಸಳೆ ಮರಿಗಳು ಪ್ರತ್ಯಕ್ಷವಾಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.