ಸಿಟಿ ರವಿ ಬಂಧನ: ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಖಾನಾಪುರ ಸಿಪಿಐ ಅಮಾನತು, ಬಂದ್​ಗೆ ಕರೆ

| Updated By: ವಿವೇಕ ಬಿರಾದಾರ

Updated on: Dec 25, 2024 | 2:04 PM

ಸಿಟಿ ರವಿ ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ರಾಜಕೀಯ ಮುಖಂಡರ ಠಾಣೆ ಪ್ರವೇಶ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಮತ್ತು ಇತರ ಸಂಘಟನೆಗಳು ಈ ಅಮಾನತಿನನ್ನು ಖಂಡಿಸಿ ಖಾನಾಪುರ ಬಂದ್‌ಗೆ ಕರೆ ನೀಡಿವೆ. ಬೆಳಗಾವಿಯಲ್ಲಿ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಸಭೆ ನಡೆಸಿದ್ದು, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಟಿ ರವಿ ಬಂಧನ: ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಖಾನಾಪುರ ಸಿಪಿಐ ಅಮಾನತು, ಬಂದ್​ಗೆ ಕರೆ
ಸಿಟಿ ರವಿ, ಸಿಪಿಐ ಮಂಜುನಾಥ್​​
Follow us on

ಬೆಳಗಾವಿ, ಡಿಸೆಂಬರ್​​ 25:  ವಿಧಾನ ಪರಿಷತ್​ ಸದಸ್ಯ ಸಿಟಿ ರವಿ (CT Ravi) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ (Khanapur) ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಆದೇಶ ಹೊರಡಿಸಿದ್ದಾರೆ.

ರಾಜಕೀಯ ಮುಖಂಡರು ಠಾಣೆಯೊಳಗೆ ಬಂದಿದ್ದರಿಂದ ಅಮಾನತು: ಐಜಿಪಿ

ಸಿಪಿಐ ಮಂಜುನಾಥ್ ನಾಯಕ್ ​ಅಮಾನತಿಗೆ ಐಜಿಪಿ ವಿಕಾಸ್ ಕುಮಾರ್ ಕಾರಣ ನೀಡಿದ್ದಾರೆ. ಡಿಸೆಂಬರ್​ 19ರಂದು ಸಿ.ಟಿ.ರವಿಯವರನ್ನು ಹಿರೇಬಾಗೇವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಠಾಣೆಯ ಸಿಬ್ಬಂದಿಯನ್ನಿಟ್ಟುಕೊಂಡು ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಆಪಾದಿತರನ್ನು (ಸಿಟಿ ರವಿ) ಹೊರತುಪಡಿಸಿ ಯಾರನ್ನೂ ಒಳಬೀಡದಂತೆ ಆದೇಶಿಸಲಾಗಿತ್ತು.

ಆದರೆ, ಸಿಪಿಐ ಮಂಜುನಾಥ್ ನಾಯಕ್ ಸೂಕ್ತ ಬಂದೋಬಸ್ತ್ ಮಾಡಿರಲ್ಲ. ರಾಜಕೀಯ ಮುಖಂಡರು ಖಾನಾಪುರ ಠಾಣೆ ಒಳಗೆ ನುಗ್ಗಿ ಬಂದಿದ್ದರು. ಇದರಿಂದ ಠಾಣೆಯೊಳಗೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಜಕೀಯ ಮುಖಂಡರನ್ನು ತಡೆಯುವಲ್ಲಿ ವಿಫಲರಾಗಿದ್ದರು. ಮೇಲಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಕರ್ತವ್ಯ ಲೋಪ, ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸಿಟಿ ರವಿಯನ್ನು ಇಡೀ ರಾತ್ರಿ ಸುತ್ತಾಡಿಸಿದ್ದೇಕೆ? ಬೆಳಗಾವಿ ಪೊಲೀಸ್ ಆಯುಕ್ತ​ ಯಡಾ ಮಾರ್ಟಿನ್ ಕೊಟ್ಟ ಕಾರಣ ಇಲ್ಲಿದೆ

ಖಾನಾಪುರ ಬಂದ್​ಗೆ ಕರೆ

ಸಿಪಿಐ ಮಂಜುನಾಥ್​​ ನಾಯಕ್​​ ಅಮಾನತು ಖಂಡಿಸಿ ಬಿಜೆಪಿ, ಜೆಡಿಎಸ್​, ದಲಿತ ಪರ, ಕನ್ನಡ ಪರ ಸಂಘಟನೆಗಳು ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಖಾನಾಪುರ ಪಟ್ಟಣ ಬಂದ್​ಗೆ ಕರೆ ನೀಡಿವೆ.

ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ: ಪರಮೇಶ್ವರ್​

ಬೆಳಗಾವಿ ಪೊಲೀಸ್​ ಆಯುಕ್ತರ ​ಕಚೇರಿಯಲ್ಲಿ ಬುಧವಾರ ಗೃಹ ಸಚಿವ ಡಾ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜಿ ಪರಮೇಶ್ವರ್​, ಸಭೆಯಲ್ಲಿ ಸಿ.ಟಿ.ರವಿ ಪ್ರಕರಣದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ತನಿಖಾ ಹಂತದಲ್ಲಿ ಇರುವಾಗ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಖಾನಾಪುರ ಸಿಪಿ​ಐ ಅಮಾನತು ಇಲಾಖೆ ಅಧಿಕಾರಿಗಳ ನಿರ್ಧಾರವಾಗಿದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.

ಬಿಜೆಪಿ ಆಕ್ರೋಶ

ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಗೆ ಬಿಜೆಪಿಯ ಅನಿಲ್ ಬೆನಕೆ, ಸುಭಾಷ್​ ಪಾಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿತು. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಐಜಿಪಿ ವಿಕಾಸ್ ಕುಮಾರ್ ಅವರನ್ನು ಭೇಟಿಯಾಗಿ ಸಿಟಿ ರವಿ ಮೇಲೆ ಹಲ್ಲೆ ಮಾಡಿದರವನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿತು. ಇದೇ ವೇಳೆ, ಸಿಪಿಐ ಮಂಜುನಾಥ್ ಅಮಾನತು ಮಾಡಿದ್ದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Wed, 25 December 24