ಸಿಟಿ ರವಿಯನ್ನು ಇಡೀ ರಾತ್ರಿ ಸುತ್ತಾಡಿಸಿದ್ದೇಕೆ? ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕೊಟ್ಟ ಕಾರಣ ಇಲ್ಲಿದೆ
ಕಳೆದ ವಾರ ಬಿಜೆಪಿ ಶಾಸಕ ಸಿಟಿ ರವಿಯನ್ನು ಬಂಧಿಸಿದ ಬಳಿಕ ಬೆಳಗಾವಿ ಪೊಲೀಸರು ರಾತ್ರಿಯಿಡೀ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಿಟಿ ರವಿಯನ್ನು ಸುತ್ತಾಡಿಸಿದ್ದಕ್ಕೆ ಕೊಟ್ಟ ಕಾರಣಗಳು ಇಲ್ಲಿವೆ ನೋಡಿ.
ಬೆಳಗಾವಿ, ಡಿಸೆಂಬರ್ 24: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ನಲ್ಲಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ರಾತ್ರಿ ಇಡೀ ಹಲವು ಕಡೆಗಳಲ್ಲಿ ಸುತ್ತಾಡಿಸಿದ ವಿಚಾರವಾಗಿ ಇದೀಗ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸ್ಪಷ್ಟನೆ ನೀಡಿದ್ದಾರೆ. ಸಿಟಿ ರವಿ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದೇಕೆ ಎಂಬುದಕ್ಕೆ ಕಾರಣ ನೀಡಿ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಯಡಾ ಮಾರ್ಟಿನ್ ಹೇಳಿದ್ದೇನು?
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 186/2024 ಕಲಂ 75, 79 ಬಿಎನ್ಎಎಸ್ ದಾಖಲಾದ ನಂತರ ಸಿಟಿ ರವಿ ರವರನ್ನು ವಶಕ್ಕೆ ಪಡೆದು, ಹಿರೇಬಾಗೇವಾಡಿ ಠಾಣೆಯ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿರುತ್ತದೆ. ಆದರೆ ಸಿಟಿ ರವಿ ರವರ ಭದ್ರತಾ ಅಂಶವನ್ನು ಪರಿಗಣಿಸಿ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಬಳಿ ಅಪಾರ ಜನಸ್ತೋಮ ಸೇರಿದ್ದರಿಂದ ಅವರನ್ನು ಖಾನಾಪೂರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಖಾನಾಪೂರದಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದ ಮಾಧ್ಯಮ ಪ್ರತಿನಿಧಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಅಲ್ಲದೇ ಹೆಚ್ಚುವರಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದ್ದು. ಈ ಎಲ್ಲ ಅಂಶಗಳು ಸಹ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಸಾಮರ್ಥ್ಯ ಹೊಂದಿದ್ದವು ಎಂದು ಯಡಾ ಮಾರ್ಟಿನ್ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಸಿಟಿ ರವಿ ರವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾನಾಪೂರದಿಂದ ಅವರನ್ನು ರಾಮದುರ್ಗಕ್ಕೆ ಸ್ಥಳಾಂತರಿಸಲಾಯಿತು. ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಾಧ್ಯಮಗಳು ಹಾಗೂ ಇನ್ನಿತರ ವ್ಯಕ್ತಿಗಳು ಬೆಂಗಾವಲು ಪಡೆಯನ್ನು ಹಿಂಬಾಲಿಸಿದರು. ಸಿಟಿ ರವಿ ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಾವಲು ಪಡೆಯು ಅವರೆಲ್ಲರಿಂದ ತಪ್ಪಿಸಿಕೊಳ್ಳುವ ಕ್ರಮಗಳನ್ನು ಕೈಕೊಂಡಿರುತ್ತಾರೆ. ಈ ಪ್ರಕ್ರಿಯೆಯುದ್ದಕ್ಕೂ ಪೊಲೀಸರು ಸಿಟಿ ರವಿ ಅವರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿರುತ್ತಾರೆ. ಮರುದಿನ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದು ಮಾರ್ಟಿನ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಟಿ ರವಿಯನ್ನ ಫೇಕ್ ಎನ್ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ
ಸಿಟಿ ರವಿಯನ್ನು ರಾತ್ರಿಯಿಡೀ ಸುತ್ತಾಡಿಸಿದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವಾಗಿಯೂ ಬಹಳಷ್ಟು ವಾಕ್ಸಮರಕ್ಕೆ ಕಾರಣವಾಗಿತ್ತು. ಸಚಿವರ ಒತ್ತಡದ ಮೇರೆಗೆ ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಸಿಟಿ ರವಿ ನಕಲಿ ಎನ್ಕೌಂಟರ್ಗೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಆರೋಪಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ