ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಸಿದ್ಧತೆ ಹೇಗಿದೆ? ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ವಿವರ ಇಲ್ಲಿದೆ

ಬೆಳಗಾವಿಯಲ್ಲಿ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಡಿಸೆಂಬರ್ 26 ಮತ್ತು 27 ರಂದು ನಡೆಯುವ ಕಾರ್ಯಕ್ರಮಗಳಲ್ಲಿ ಗಾಂಧಿ ಪರಿವಾರದ ಭಾಗವಹಿಸುವಿಕೆ ಇರಲಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಲಾಗುವುದು ಮತ್ತು ಭವಿಷ್ಯದ ಕಾರ್ಯತಂತ್ರಗಳನ್ನು ಚರ್ಚಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮಗಳಿಗೆ ಸಂಬಂಧಿಸಿ ಅವರು ನೀಡಿರುವ ವಿವರ ಇಲ್ಲಿದೆ.

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಸಿದ್ಧತೆ ಹೇಗಿದೆ? ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ವಿವರ ಇಲ್ಲಿದೆ
ಡಿಕೆ ಶಿವಕುಮಾರ್
Follow us
Sahadev Mane
| Updated By: Ganapathi Sharma

Updated on: Dec 24, 2024 | 11:41 AM

ಬೆಳಗಾವಿ, ಡಿಸೆಂಬರ್ 24: ಮಹಾತ್ಮಾ ಗಾಂಧಿ ಅಧ್ಯಕ್ಷತೆಯ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪ್ರಯುಕ್ತ ಡಿಸೆಂಬರ್ 26 ಕ್ಕೆ ಗಾಂಧಿ ಪರವಾರ ಬೆಳಗಾವಿಗೆ ಬರಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. 26 ಹಾಗೂ 27ರಂದು ನಡೆಯಲಿರುವ ಅಧಿವೇಶನದ ಸಿದ್ಧತೆ ಬಗ್ಗೆ ಬೆಳಗಾವಿಯಲ್ಲಿ ಮಾಹಿತಿ ನೀಡಿದ ಅವರು, ಕಿತ್ತೂರು ಕರ್ನಾಟಕದ ಜನತೆ ಬೆಳಗಾವಿಗೆ ಬರಬೇಕು. ಶತಮಾನೋತ್ಸವ ಪ್ರಯುಕ್ತ ಮಾಡಿರುವ ಲೈಟಿಂಗ್ ಅಲಂಕಾರ ಬಂದು ನೋಡಬೇಕು ಎಂದರು.

ಈ ಹಿಂದೆ ಮಹಾತ್ಮಾ ಗಾಂಧಿ ಅಧ್ಯಕ್ಷರಾಗಿದ್ದ ಅಧಿವೇಶನದ ಎಲ್ಲಾ ಮಾಹಿತಿ ಸಂಗ್ರಹಿಸಿದ್ದೇವೆ. ಅಂತಹ ಇತಿಹಾಸ ಪುಟಕ್ಕೆ ಮತ್ತೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದೇವೆ. ಜನರು ಇಲ್ಲಿಗೆ ಬರಬೇಕು. ಪಾರ್ಟಿ, ಪಕ್ಷ ಎಂದು ಯೋಚನೆ ಮಾಡಬೇಡಿ. ನಮ್ಮ ಪಕ್ಷ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ನಿರ್ಧಾರ ಮಾಡುತ್ತದೆ. ಪ್ರಜಾಪ್ರಭುತ್ವ ನಿಮಗೆ ಸಿಕ್ಕಿದೆ, ಲೀಡರ್ ಆಗಬೇಕು ಎಂದುಕೊಂಡಿರುವವರು ಬನ್ನಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಯಾವಾಗ ಏನೇನು ಕಾರ್ಯಕ್ರಮ?

ಸಿದ್ಧತೆಗಳ ಬಗ್ಗೆ ಇಂದು ಅಂತಿಮ ಪರಿಶೀಲನೆ ಮಾಡುತ್ತೇನೆ. ಡಿಸೆಂಬರ್ 26 ರಿಂದ ಅಧಿಕೃತ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಡಿಸೆಂಬರ್ 26 ರಂದು ಮಧ್ಯಾಹ್ನ 3 ಗಂಟೆ ಎಐಸಿಸಿ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದೆ. 1924 ರ ಡಿಸೆಂಬರ್ 26 ರ ಮಧ್ಯಾಹ್ನ 3 ಗಂಟೆ ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾರ್ಯಕಾರಣಿ ಸಭೆ ನಡೆದಿತ್ತು. ಅದೇ ಸಮಯದಲ್ಲಿ ಈಗಲೂ ಸಭೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಡಿಸೆಂಬರ್ 27 ರಂದು ಬೆಳಗ್ಗೆ 10.30 ಕ್ಕೆ ಮಹಾತ್ಮಾ ಗಾಂಧಿ ಮೂರ್ತಿ ಅನಾವರಣ ಆಗಲಿದೆ. ಎಐಸಿಸಿ ಅಧ್ಯಕ್ಷರು ಡಿನ್ನರ್ ಕೊಡಿಸುತ್ತಿದ್ದಾರೆ. ಅಂದೇ ಸುವರ್ಣ ವಿಧಾನಸೌಧದಲ್ಲಿ ಪೋಟೋ ಸೆಷನ್ ಇದೆ. 27ರ ಮಧ್ಯಾಹ್ನ 12 ಗಂಟೆಗೆ ಶತಮಾನೋತ್ಸವ ಸಮಾವೇಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಡಿಸೆಂಬರ್ 26 ರಂದು ಬೆಳಗ್ಗೆ ಗಾಂಧಿ ಪರಿವಾರ ಬೆಳಗಾವಿಗೆ ಬರಲಿದೆ. ಗಾಂಧಿ ಪರಿವಾರದ ವಾಸ್ತವ್ಯಕ್ಕೆ ಸರ್ಕ್ಯೂಟ್ ಹೌಸ್‌ ಮತ್ತು ಖಾಸಗಿ ಹೊಟೆಲ್​ನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಅಂತಿಮವಾಗಿ ಗಾಂಧಿ ಪರಿವಾರದ ಭದ್ರತಾ ಸಿಬ್ಬಂದಿ ನಿರ್ಧಾರ ಮಾಡಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಕಾಂಗ್ರೆಸ್​ನ ಬಹುತೇಕ ನಾಯಕರ ದಂಡು ಈಗಾಗಲೇ ಬೆಳಗಾವಿಗೆ ಆಗಮಿಸಿದೆ.

ಇದನ್ನೂ ಓದಿ: ಸಿಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣ ತನಿಖೆ ಸಿಐಡಿ ಹೆಗಲಿಗೆ: ಜಿ ಪರಮೇಶ್ವರ್​​

ಏತನ್ಮಧ್ಯೆ, ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಬಿಜೆಪಿ ‘ಬೆಳಗಾವಿ ಚಲೋ’ ಅಭಿಯಾನ ಹಮ್ಮಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಈಗ ಯಾಕೆ ಆ ಬಗ್ಗೆ ಮಾತು? ಯಾರನ್ನಾದರೂ ಕಳುಹಿಸಲಿ, ಏನಾದರೂ ಮಾಡಲಿ. ಕಾಂಗ್ರೆಸ್ ಪಾರ್ಟಿ ಶಕ್ತಿ ಅವರಿಗೂ ಗೊತ್ತಿದೆ, ನಮಗೂ ಗೊತ್ತಿದೆ. ಈಗ ಅದರ ಬಗ್ಗೆ ನಾನು ಮಾತನಾಡಲ್ಲ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ