ಸಿ.ಟಿ.ರವಿ ಬಂಧನ ಪ್ರಕರಣ: ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ಧದಿಂದ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ಇದೀಗ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇದರ ಬೆನ್ನಲ್ಲೇ ಸಿಟಿ ರವಿ ಬಂಧನದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜ್ಯಪಾಲರ ಮೊರೆ ಹೋಗಿದೆ.
ಬೆಂಗಳೂರು, (ಡಿಸೆಂಬರ್ 24): ಎಂಎಲ್‌ಸಿ ಸಿ.ಟಿ.ರವಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜಭವನದ ಮೆಟ್ಟಿಲೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರನ್ನ ರಾಜ್ಯ ಸರ್ಕಾರ ನಡೆಸಿಕೊಂಡು ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಂದು (ಡಿಸೆಂಬರ್ 24) ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖಗೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕರಾದ ಜನಾರ್ದನರೆಡ್ಡಿ, ಸಿ.ಕೆ.ರಾಮಮೂರ್ತಿ, ಎಸ್.ರಘು, ಹಾವೇರಿ ಕ್ಷೇತ್ರದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯರಾದ ರವಿಕುಮಾರ್, ಕೇಶವ ಪ್ರಸಾದ್ ಅವರು ರಾಜಭವನದಲ್ಲಿ ಗವರ್ನರ್ ಭೇಟಿಯಾಗಿ ಸರ್ಕಾರದ ವಿರುದ್ಧ ದೂರು ನೀಡಿದರು.
ಬಿಜೆಪಿ ಎಂಎಲ್‌ಸಿ ಸಿಟಿ ರವಿ ಬಂಧನ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಖಂಡನೀಯ. ಬಂಧನದ ವೇಳೆ ಸಾಂವಿಧಾನಿಕ ಹಾಗೂ ಕಾನೂನು ಉಲ್ಲಂಘನೆ ಆಗಿದೆ. ಪೊಲೀಸ್ ಇಲಾಖೆ ಮೂಲಕ ಅಧಿಕಾರ ದುರ್ಬಳಕೆ ಆಗಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಬೇಕು ಎಂದು ಮನವಿ ಸಲ್ಲಿಸಿದೆ.
ರಾಜ್ಯಪಾಲರ ಭೇಟಿ ಬಳಿಕ ಅಶೋಕ್ ಹೇಳಿದ್ದಿಷ್ಟು
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ್, ಸಿ. ಟಿ. ರವಿ ಬಂಧನ, ನಂತರ ಪೊಲೀಸ್ ಟಾರ್ಚರ್, ನೂರಾರು ಕಿ.ಮೀ. ಅಲೆಸಿದ್ದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಕಾಡು, ಕಬ್ಬಿನ ಗದ್ದೆ, ಜಲ್ಲಿ ಕ್ರಷರ್ ಎಲ್ಲಾ ಕರೆದುಕೊಂಡು ಹೋಗಿದ್ದು ಅನುಮಾನ ಹುಟ್ಟಿಸಿದೆ. ಕಾಡು, ಕಬ್ಬಿನ ಗದ್ದೆಗಳು ಪೊಲೀಸ್ ಠಾಣೆಗಿಂತಲೂ ಸೇಫಾ? ಪೊಲೀಸ್ ಸ್ಟೇಷನ್ ಸೇಫ್ ಅಲ್ಲ ಎಂದು ಈ ಸರ್ಕಾರ ಜನರಿಗೆ ತಿಳಿಸಿದೆ. ಸರ್ಕಾರ ನಗೆ ಪಾಟಲಿಗೀಡಾಗಿದೆ ಎಂದು ವ್ಯಂಗ್ಯವಾಡಿದರು.
ಗೃಹ ಸಚಿವರು, ಸಿಎಂಗೆ ಗೊತ್ತಿಲ್ಲದೇ ಇವೆಲ್ಲಾ ನಡೆದಿದೆ. ಸಿ.ಟಿ. ರವಿಗೆ ಸೂಕ್ತ ರಕ್ಷಣೆ ಕೊಡಬೇಕು. ತನಿಖೆ ಪಾರದರ್ಶಕ ಆಗಿ ನಡೆಯಬೇಕು. ಪೊಲೀಸರಿಗೆ ಕ್ಷಣ ಕ್ಷಣಕ್ಕೂ ಯಾರಿಂದ ಫೋನ್ ಬರುತ್ತಿತ್ತು ಎಂದು ಗೊತ್ತಾದರೆ ಹಿಂದೆ ಯಾರಿದ್ದರು ಎನ್ನುವುದು ತಿಳಿಯುತ್ತದೆ. ರಾಜ್ಯಪಾಲರು ಸಂವಿಧಾನ ರಕ್ಷಕರು. ಯಾರಗೇ ಈ ಸಮಸ್ಯೆ ಆದರೂ ರಾಜ್ಯಪಾಲರು ಬಿಡಲ್ಲ ಎಂದು ಸಂದೇಶ ಕೊಡುವಂತೆ ಕೇಳಿಕೊಂಡಿದ್ದೇವೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಅಂತ ಕೇಳಿದ್ದೇವೆ. ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದರು.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಣೆ ಪ್ರಮಾಣದ ಬಗ್ಗೆ ಪ್ರತಿಕ್ರಿಯಿಸಿದ, ಯಾರು ಸತ್ಯ ಯಾರು ಮಿಥ್ಯ ಎನ್ನುವುದನ್ನು ಸಂವಿಧಾನ ತೀರ್ಮಾನ ಮಾಡುತ್ತದೆ. ಸಂವಿಧಾನದ ತೀರ್ಪು ಏನೇ ಬಂದರೂ ಸಿ.ಟಿ. ರವಿ ಒಪ್ಪಿಕೊಳ್ಳುತ್ತಾರೆ. ಧರ್ಮಸ್ಥಳದ ಮಂಜುನಾಥ ಮಂಜುನಾಥ ಆಗಿಯೇ ಇರಲಿ ಎಂದು ಟಾಂಗ್ ಕೊಟ್ಟರು.
ಸಭಾಪತಿ, ಗೃಹ ಇಲಾಖೆ, ಡಿಜಿ, ಐಜಿಪಿಗೆ ದೂರು
ಇನ್ನು ಸಿಟಿ ರವಿ ಬಂಧನ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದಿದೆ. ಇದಕ್ಕೆ ಪೂರಕವೆಂಬಂತೆ ಸಿ.ಟಿ.ರವಿ ಅವರು ವಿಧಾನಪರಿಷತ್ ಸಭಾಪತಿ, ಗೃಹ ಇಲಾಖೆ, ಡಿಜಿ, ಐಜಿಪಿಗೆ ದೂರು ನೀಡಿದ್ದಾರೆ. ಇ-ಮೇಲ್ ಮೂಲಕ 5 ಪುಟಗಳ ದೂರು ರವಾನಿಸಿರುವ ಸಿ.ಟಿ.ರವಿ, ಡಿ.19ರ ಸಂಭೆ ಸುವರ್ಣ ಸೌಧದಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ ಬಗ್ಗೆ ದೂರು ದಾಖಲಿಸಿದ್ದು, ಕರ್ತವ್ಯಲೋಪ ಎಸಗಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೇ ತಮಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದ ಸದನದೊಳಗೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ಧದಿಂದ ಬೈದು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ದೂರಿನ ಮೇರೆಗೆ ಹೀರೇಬಾಗೇವಾಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಸಿಟಿ ರವಿ ಅವರನ್ನು ಸುವರ್ಣಸೌಧ ಆವರಣದೊಳಗೆ ಬಂಧಿಸಿದ್ದರು.
ಬಳಿಕ ಅವರನ್ನು ಇಡೀ ರಾತ್ರಿ ಬೇರೆ ಬೇರೆ ಪೊಲೀಸ್ ಠಾಣೆಗೆ ಅಲೆದಾಡಿಸಿದ್ದಾರೆ. ನಂತರ ಬೆಳಗ್ಗೆ ಬೆಳಗಾವಿ ಜಿಲ್ಲಾ ಕೋರ್ಟ್ಗೆ ಹಾಜರುಪಡಿಸಿದ್ದರು. ಇದರಿಂದ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ. ರವಿ ಬಂಧನದಲ್ಲಿ ಪೊಲೀಸರು ಸಂಪೂರ್ಣವಾಗಿ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Tue, 24 December 24