ಕರ್ನಾಟಕದಲ್ಲೇ ಮೊದಲ ಬಾರಿಗೆ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಯುವಕ
ಮನುಷ್ಯ ಬದುಕಿರುವಾಗ ಬಹಳಷ್ಟ ಸಾಧನೆ ಮಾಡಬೇಕು ಅಂದರೂ ಆಗುವುದಿಲ್ಲ. ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಸತ್ತಮೇಲೆ ಸಾಧನೆ ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುವ ಭಾಗ್ಯ ಸಿಗುತ್ತದೆ. ಅಂತಹ ಒಂದು ಅಪರೂಪದಲ್ಲಿ ಅಪರೂಪದ ಸಾಧನೆಯನ್ನ ಕೊಡಗಿನ ಯುವಕನೊಬ್ಬ ಮಾಡಿದ್ದಾನೆ. ಇದರಿಂದ ಆರು ಮಕ್ಕಳು ಹೊಸ ಬದುಕನ್ನ ಪಡೆದುಕೊಳ್ಳಲಿದ್ದಾರೆ.
ಮಡಿಕೇರಿ, (ಡಿಸೆಂಬರ್. 24): ಹೃದಯ, ಕಣ್ಣು, ಕಿಡ್ನಿ, ಚರ್ಮ, ಲಿವರ್ ನಂತಹ ಮನುಷ್ಯನ ಅಂಗಾಂಗಳನ್ನು ದಾನ ಮಾಡುವುದನ್ನು ಕೇಳಿದ್ದೇವೆ. ಆದರೆ, ಕೊಡಗಿನ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದ 33 ವರ್ಷದ ಯುವಕ ಈಶ್ವರ್ ಅಪಘಾತದಲ್ಲಿ ಗಾಯಗೊಂಡಿದ್ದು, ಬ್ರೈನ್ ಡೆಡ್ ಆಗಿದೆ. ಹೀಗಾಗಿ ಕುಟುಂಬಸ್ಥರು ಸಾವಿನ ಸಂದರ್ಭದಲ್ಲಿ ಈಶ್ವರ್ನ ಮೂಳೆಗಳನ್ನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ರೀತಿ ಮೂಳೆ ದಾನ ಮಾಡಿರುವುದು ಕರ್ನಾಟಕ ರಾಜ್ಯದಲ್ಲೇ ಮೊದಲು ಎನ್ನಲಾಗಿದೆ. ಈ ಮೂಲಕ ಕ್ಯಾನ್ಸರ್‌ಪೀಡಿತ 6 ಮಕ್ಕಳ ಕಾಲುಗಳಿಗೆ ಬಲ ಬಂದಂತಾಗಿದೆ.
ಅಪಘಾತದಲ್ಲಿ ಡ್ರೈನ್ ಡೆಡ್ ಆಗಿದ್ದ ಯುವಕನ ಅಸ್ಥಿ (ಮೂಳೆ) ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರ ವಿಭಾಗದ ಮುಖ್ಯಸ್ಥ ಡಾ.ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ ಅಪರೂಪದ ದಾನವನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದೆ. ಇದರಿಂದ ಕ್ಯಾನ್ಸರ್‌ಪೀಡಿತ 6 ಮಕ್ಕಳ ಕಾಲುಗಳನ್ನು ಉಳಿಸಬಹುದು ಎಂದು ಅಸ್ಥಿ ಸಂಗ್ರಹಿಸಿದ ಬಳಿಕ ಡಾ.ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳಲ್ಲಿ 23 ಬಾಣಂತಿಯರ ಸಾವು: ಹೆಚ್ಚಿದ ಆತಂಕ
ಘಟನೆ ವಿವರ
ಈಶ್ವರ್ ತನ್ನ ತನದೆ ತಾಯಿಗೆ ಒಬ್ಬನೇ ಮಗ. ಇಬ್ಬರು ಅಕ್ಕಂದಿರು ವಿವಾಹವಾಗಿದ್ದರು. ಪಿಕ್ ಅಪ್ ಜೀಪ್ ಓಡಿಸಿ ಬರುವ ಬಾಡಿಗೆ ಹಣದಲ್ಲಿ ತಮದೆ ತಾಯಿಯನ್ನು ಸಾಕುತ್ತಿದ್ದ. ಆದ್ರೆ ಇದೇ ಡಿಸೆಂಬರ್ 21ರಂದು ತನ್ನ ಪಿಕ್ ಅಪ್ ಜೀಪ್ ಓಡಿಸಿ ಸಂಜೆ ಮನೆಗೆ ಮರಳುವ ಹಾದಿಯಲ್ಲಿ ಜೀಪ್ನ ಟೈರ್ ಸ್ಪೋಟಗೊಂಡು ಪಲ್ಟಿಯಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಈಶ್ವರ್ನನ್ನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎಜೆ ಶೆಟ್ಟಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ, ಆದ್ರೆ ವಿವಿಧ ಪರೀಕ್ಷೆ ಮಾಡಿದ ಡಾಕ್ಟರ್, ಈಶ್ವರ್ನ ಮೆದುಳು ಡೆಡ್ ಆಗಿದ್ದು ಯಾವುದೇ ಕ್ಷಣದಲ್ಲಿ ಪ್ರಾಣಬಿಡಬಹುದು ಎಂದಿದ್ದಾರೆ.
ಇದರಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಆದ್ರೆ ಇದೇ ಸಂಧರ್ಭ ವೈದ್ಯರೊಬ್ಬರು ಸಮ್ಮತಿ ಇದ್ರೆ ಯುವಕನ ಅಂಗಾಂಗ ದಾನ ಮಾಡಬಹುದು ಎಂದು ಸಲಹೆ ಮಾಡಿದ್ದಾರೆ. ನೋವಿನಲ್ಲೂ ಇದನ್ನ ಪರಿಗಣಿಸಿದ ಈಶ್ವರ್ನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಒಪ್ಪಿದ್ದಾರೆ. ಆದ್ರೆ ಹೃದಯ ಕಿಡ್ನಿಯಂತಹ ಅಂಗಾಂಗಳು ಆ ಸಂದರ್ಭದಲ್ಲಿ ದಾನ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ವೈದ್ಯರ ಸಲಹೆಯಂತೆ ಅಪರೂಪದಲ್ಲಿ ಅಪರೂಪ ಎಂಬಂತೆ, ಈಶ್ವರ್ನ ಎರಡು ಕೈ ಹಾಗೂ ಕಾಲುಗಳ ಮೂಳೆಗಳನ್ನ ದಾನ ಮಾಡಲು ಒಪ್ಪಿದ್ದಾರೆ. ಅದರಂತೆ ಆಸ್ಪತ್ರೆಯಲ್ಲಿ ಯುವಕನ ಮೂಳೆಗಳನ್ನ ಪಡೆಯಲಾಗಿದೆ.
ಈಶ್ವರ್ನಿಂದ ದಾನ ಪಡೆಯಲಾಗಿರೋ ನಾಲ್ಕು ಮೂಳೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಮಹತ್ವದ್ದಾಗಿದೆ. ಮೂಳೆ ಕ್ಯಾನ್ಸರ್ನಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ಈ ಮೂಳೆಗಳನ್ನ ಬಳಸಲಾಗುತ್ತದೆ. ಕ್ಯಾನ್ಸರ್‌ಪೀಡಿತ ಒಟ್ಟು ಆರು ಮಕ್ಕಳಿಗೆ ಈ ಯುವಕನಿಂದಾಗಿ ಹೊಸ ಜೀವನ ಸಿಗಲಿದೆ. ತಮ್ಮ ಆಸರೆಯಾಗಿದ್ದ ಏಕೈಕ ಮಗ ಅಸುನೀಗಿದರು ಅವನ ಅಂಗಾಂಗಳು ಆರು ಮಕ್ಕಳಿಗೆ ಜೀವನ ನೀಡಿದವು ಎನ್ನುವ ಖುಷಿ ಇವರದ್ದು. ತನ್ನ ಪ್ರೀತಿಯ ತಮ್ಮ ಪ್ರತ್ಯಕ್ಷವಾಗಿ ಬದುಕಿಲ್ಲದೇ ಇದ್ದರೂ, ಉಳಿದ ಮಕ್ಕಳಿಗೆ ಚಿಕಿತ್ಸೆಯ ರೂಪದಲ್ಲಿ ಬದುಕಿರುವುದು ಸಾರ್ಥಕತೆ ತಂದಿದೆ ಎನ್ನುತ್ತಾರೆ ಸಹೋದರಿಯರಾದ ರಾಣಿ ಮತ್ತು ಸೌಮ್ಯ.
ಈ ರೀತಿ ಮೂಳೆ ದಾನ ಮಾಡಿರುವುದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ. ಹೃದಯ ಕಿಡ್ನಿ, ಚರ್ಮ, ಲಿವರ್ ನಂತಹ ಅಂಗಾಂಗಳು ದಾನ ಮಾಡುವುದಿದೆ. ಆದ್ರೆ ಈ ರೀತಿ ಸಂಪೂರ್ಣ ಮೂಳೆಯನ್ನೇ ದಾನ ಮಾಡಿ ಇನ್ನಾರದ್ದೋ ಜೀವನಕ್ಕೆ ಆಧಾರವಾದ ಈ ಪ್ರಕರಣ ಅಪರೂಪದಲ್ಲಿ ಅಪರೂಪ ಎನಿಸಿದೆ. ಯುವಕ ಈಶ್ವರ್ನ ಕುಟುಂಬಸ್ಥರ ಉದಾರ ಮನಸ್ಥಿತಿಗೆ ಸಮಾಜದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ: ಗೋಪಾಲ್ ಸೋಮಯ್ಯ ಟಿವಿ9 ಕೊಡಗು
Published On - 3:42 pm, Tue, 24 December 24