ಸಿಟಿ ರವಿ ಬಂಧನ ಕೇಸ್: ಅಮಾನತುಗೊಂಡ ಸಿಪಿಐ ಮಂಜುನಾಥ್ ಹೇಳಿದ್ದಿಷ್ಟು!
ಖಾನಾಪುರದ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಸಿಟಿ ರವಿ ಅವರ ಬಂಧನಕ್ಕೆ ಸಂಬಂಧಿಸಿದ ಘಟನೆಗಳಿಗಾಗಿ ಅಮಾನತು ಮಾಡಲಾಗಿದೆ. ಇಲಾಖೆಯಿಂದ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಅವರ ಅಮಾನತು ಖಂಡಿಸಿ, ಬಿಜೆಪಿ ಮತ್ತು ಇತರ ಸಂಘಟನೆಗಳು ನಾಳೆ ಖಾನಾಪುರದಲ್ಲಿ ಬಂದ್‌ಗೆ ಕರೆ ನೀಡಿವೆ.
ಬೆಳಗಾವಿ, ಡಿಸೆಂಬರ್ 25: ಎಂಎಲ್ಸಿ ಸಿಟಿ ರವಿ (CT Ravi) ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ನನ್ನ ಅಮಾನತಿಗೆ ಇಲಾಖೆಯಿಂದ ನ್ಯಾಯ ಸಿಗುವ ಭರವಸೆ ಇದೆ. ಯಾರು ಕೂಡ ಖಾನಾಪುರ ಬಂದ್, ಪ್ರತಿಭಟನೆ ಮಾಡಬೇಡಿ ಎಂದು ಸಿಪಿಐ ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಡಿ. 19ರಂದು ಖಾನಾಪುರ ಠಾಣೆಗೆ ಸಿಟಿ ರವಿಯನ್ನ ಹಿರಿಯ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಡಿ.20ರಿಂದ ಸಿಪಿಐ ಮಂಜುನಾಥ್ ನಾಯಕ್ ಯಾರ ಕೈಗೂ ಸಿಗದೇ, ಠಾಣೆಗೂ ಬಂದಿರಲಿಲ್ಲ. ಅಮಾನತು ಆದೇಶ ಹೊರ ಬೀಳುತ್ತಿದ್ದಂತೆ ಫೋನ್ ಸ್ವಿಚ್ಛ್ ಆಫ್ ಮಾಡಿದ್ದರು. ಹಿರಿಯ ಅಧಿಕಾರಿಗಳ ನಡೆಯಿಂದ ನೊಂದುಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು.
ಇದನ್ನೂ ಓದಿ: ಸಿಟಿ ರವಿ ಬಂಧನ: ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಖಾನಾಪುರ ಸಿಪಿಐ ಅಮಾನತು, ಬಂದ್‌ಗೆ ಕರೆ
ಸದ್ಯ ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈಗಾಗಲೇ ನನ್ನನ್ನು ಅಮಾನುತು ಮಾಡಿ ಆದೇಶಿಸಲಾಗಿದೆ. ಡಿ.19ರಂದು ಖಾನಾಪುರ ಠಾಣೆಗೆ ಸಿ.ಟಿ.ರವಿರನ್ನ ಕರೆತರಲಾಗಿತ್ತು. ಅಂದು ಆ ಸಮಯದಲ್ಲಿ ಆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ನನ್ನನ್ನು ಅಮಾನತು ಮಾಡಿದ್ದಾರೆ. ಇಲಾಖೆಯಲ್ಲೇ ನ್ಯಾಯ ಪಡೆಯುತ್ತೇನೆ. ಹಾಗಾಗಿ ಯಾವುದೇ ಬಂದ್, ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ನಾಳೆ ಖಾನಾಪುರ ಪಟ್ಟಣ ಬಂದ್‌ಗೆ ಕರೆ
ಇನ್ನು ಮಂಜುನಾಥ್ ನಾಯಕ್ರ ಅಮಾನತು ಖಂಡಿಸಿ ನಾಳೆ ಖಾನಾಪುರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಬಿಜೆಪಿ, ಜೆಡಿಎಸ್, ದಲಿತ ಪರ ಮತ್ತು ಕನ್ನಡ ಪರ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಅಮಾನತು ಹಿಂಪಡೆಯುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಸಿ.ಟಿ.ರವಿ ಬಂಧನ ಪ್ರಕರಣ: ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಇನ್ನು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಐಜಿಪಿ ವಿಕಾಸ್ ಕುಮಾರ್ರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಇಂದು ಭೇಟಿ ಮಾಡಿದೆ. ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದವರನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಲಾಗಿದೆ. ಜೊತೆಗೆ ಸಿಪಿಐ ಮಂಜುನಾಥ್ ಅಮಾನತು ಮಾಡಿದ್ದಕ್ಕೆ ಬಿಜೆಪಿ ನಾಯಕರು ಕಿಡಿಕಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Wed, 25 December 24