ಮತ್ತೊಂದು ಗ್ಯಾರಂಟಿ ಬೇಡಿಕೆ: ಕುರುಬ ಸಮುದಾಯಕ್ಕೆ 5 ಸಾವಿರ ಕೋಟಿ ಅನುದಾನದ ಗ್ಯಾರಂಟಿ ಕೊಡಿ: ಬಂಡೆಪ್ಪ ಕಾಶಂಪುರ

| Updated By: Rakesh Nayak Manchi

Updated on: Oct 03, 2023 | 4:43 PM

ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಕುರುಬ ಸಮುದಾಯಕ್ಕೆ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನದ ಗ್ಯಾರಂಟಿ ಕೊಡಬೇಕು ಎಂದು ಬೇಡಿಕೆ ಮುಂದಿಟ್ಟರು.

ಮತ್ತೊಂದು ಗ್ಯಾರಂಟಿ ಬೇಡಿಕೆ: ಕುರುಬ ಸಮುದಾಯಕ್ಕೆ 5 ಸಾವಿರ ಕೋಟಿ ಅನುದಾನದ ಗ್ಯಾರಂಟಿ ಕೊಡಿ: ಬಂಡೆಪ್ಪ ಕಾಶಂಪುರ
ಬಂಡೆಪ್ಪ ಕಾಶಂಪುರ್ ಮತ್ತು ಸಿದ್ದರಾಮಯ್ಯ
Follow us on

ಬೆಳಗಾವಿ, ಅ.3: ಕುರುಬ ಸಮುದಾಯಕ್ಕೆ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನದ ಗ್ಯಾರಂಟಿ ಕೊಡಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ (Bandeppa Kashempur) ಅವರು ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ. ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ನಡೆದ ಕುರುಬ ಸಮುದಾಯದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಎರಡು ವರ್ಷದಲ್ಲಿ ಐದರಿಂದ ಹತ್ತು ಪಟ್ಟು ಸರ್ಕಾರಕ್ಕೆ ಕೊಡುವ ಶಕ್ತಿ ನಮ್ಮ ಸಮಾಜಕ್ಕಿದೆ ಎಂದರು.

ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಕೊಟ್ಟಿದ್ದು ಸ್ವಾಗತ. ಈ ವೇಳೆ ಕುರುಬ ಸಮುದಾಯಕ್ಕೆ ಒಂದು ಗ್ಯಾರಂಟಿ ಕೊಡಬೇಕು. ತೆಲಂಗಾಣದಲ್ಲಿ ಕುರುಬರಿಗೆ ಹದಿನೈದು ಸಾವಿರ ಕೋಟಿ ಲೋನ್ ಕೊಟ್ಟಿದ್ದಾರೆ. ತೊಂಬತ್ತು ಪರ್ಸೆಂಟ್ ಸಬ್ಸಿಡಿ ಅಲ್ಲಿ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಕುರಿ ಅಭಿವೃದ್ಧಿ ನಿಗಮ ಮಂಡಳಿ ಇದೆ. ಅದರ ಮೂಲಕ ಐದು ಸಾವಿರ ಕೋಟಿ ಕುರಿಗಾರರಿಗೆ ಅನುದಾನ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಇವತ್ತು ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಘಟನೆ ವತಿಯಿಂದ ಗೌರವ ಅರ್ಪಣೆ ಮಾಡಿದ್ದಾರೆ. ಜವಾಬ್ದಾರಿಯನ್ನ ನಿರ್ವಹಿಸುವ ಕೆಲಸವನ್ನ ಮಾಡಿದ್ದಾರೆ. ನನಗೆ ಸನ್ಮಾನಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಸಮಾವೇಶ ಐತಿಹಾಸಿಕ ಕಾರ್ಯಕ್ರಮ. ವಿಶ್ವನಾಥ್, ರೇವಣ್ಣ ಅವರು ದೇಶದ ಕುರುಬರ ಸಂಘಟನೆಯನ್ನ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕುರುಬರು ಎಲ್ಲಾ ರಾಜ್ಯದಲ್ಲಿ ವಾಸವಿದ್ದಾರೆ. ಅವರೆಲ್ಲರೂ ಕೂಡ ಒಂದು ವೇದಿಕೆಯಲ್ಲಿ ಸಂಘಟನೆ ಆಗುತ್ತಿರುವುದು ಸ್ವಾಗತಾರ್ಹ ಎಂದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಮತ್ತೋರ್ವ ಆಡಳಿತಾರೂಢ ಕಾಂಗ್ರೆಸ್ ಶಾಸಕ ಅಸಮಾಧಾನ, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಕುಟುಕು  

ಸಿದ್ದರಾಮಯ್ಯ ಅವರು ಸಮಾಜವಾದ ಹೇಳುತ್ತಾರೆ. ಜಾತ್ಯತೀತ ತತ್ವ ಪ್ರತಿಪಾದನೆ ಮಾಡುತ್ತಾರೆ. ಜಾತಿ ಸಮಾವೇಶಕ್ಕೆ ಹೋಗುತ್ತಾರೆ ಅಂತಾ ಬಹಳ ಜನ ಮಾತಾಡುತ್ತಾರೆ. ಯಾವ ಜಾತಿಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಂದಿದ್ದಾರೋ ಅಂತಹವರು ಜಾತಿ ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗುತ್ತದೆ. ಆದರೆ ಅವಕಾಶಗಳಿಂದ ವಂಚಿತರಾದರು ಜಾತಿ ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗಲ್ಲ ಎಂದರು.

ನಮ್ಮ ದೇಶದಲ್ಲಿ ಅಸಮಾನತೆ, ಜಾತಿ ನಡುವೆ ಸಂಘರ್ಷ ಉಂಟು ಮಾಡುವುದು ಸಮಾಜಕ್ಕೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ. ಸಂವಿಧಾನದ ಹಕ್ಕು ಪಡೆದುಕೊಳ್ಳಲು ಸಂಘಟನೆ ಆದರೆ ಸಮ ಸಮಾಜಕ್ಕೆ ಅನುಕೂಲ ಆಗುತ್ತದೆ. ನಾನು ಯಾವತ್ತೂ ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟವನಲ್ಲ. ನಮ್ಮ ಅಪ್ಪ ಅಮ್ಮ ಕುರುಬರ ಜಾತಿಯಲ್ಲಿ ಹುಟ್ಟಿದರು ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ ಎಂದರು.

ಕರ್ನಾಟಕದಲ್ಲಿ ರಾಜಕೀಯವಾಗಿ ಬೆಳೆದಿದ್ದು ಸಂಘಟನೆಯಿಂದ. ಬೇರೆ ಬೇರೆ ರಾಜ್ಯದಲ್ಲಿ ಸಂಘಟನೆ, ನಾಯಕತ್ವದ ಕೊರತೆಯಿಂದ ಬೆಳದಿಲ್ಲ. ಮಹಾರಾಷ್ಟ್ರದಲ್ಲಿ ಬಹಳ ಜನ ದನಗರ್ ಜಾತಿಯವರಿದ್ದಾರೆ‌. ಸಂಘಟನೆ ಪ್ರಮಾಣದ ಯಾವ ರೀತಿ ಇರಬೇಕು ಅಲ್ಲಿಲ್ಲ ಹೀಗಾಗಿ ಬೇರೆ ನಾಯಕರ ಜತೆಗೆ ತಿರುಗಾಡಬೇಕಾಗುತ್ತದೆ ಎಂದರು.

ಸಂಘಟನೆ ಕೊರತೆ ಇದೆ ಅನ್ನೋದನ್ನ ನಾವು ಒಪ್ಪಿಕೊಳ್ಳಬೇಕು. ಸಂಘಟನೆ ಶಕ್ತಿ ಇರದಿದ್ದರೆ ಕರ್ನಾಟಕದಲ್ಲಿ ಕನಕ ಗುರುಪೀಠ ಸ್ಥಾಪನೆ ಸಾಧ್ಯವಾಗುತ್ತಿರಲಿಲ್ಲ. ಕಾಗಿನೆಲೆ ಗುರಪೀಠ ಕೇವಲ ಕುರುಬರಿಗೆ ಸೀಮಿತವಾಗಿದ್ದಲ್ಲ. ಎಲ್ಲರನ್ನೂ ಮನುಷ್ಯರಾಗಿ ನೋಡುವ ಪ್ರವೃತ್ತಿ ಇದ್ದವರು ಜಾತ್ಯತೀತ ಸಮಾಜ ನೋಡಲು ಸಾಧ್ಯ ಎಂದರು.

2013 ರಿಂದ 18 ರ ವರೆಗೆ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆಗಿದ್ದೆ. ಈ ವೇಳೆ ಒಂದು ಜಾತಿ ಒಂದು ಧರ್ಮಕ್ಕೆ ಕಾರ್ಯಕ್ರಮ ಕೊಟ್ಟಿಲ್ಲ. ಎಲ್ಲರಿಗೂ ಸಮನಾಗಿ ಕಾರ್ಯಕ್ರಮ ಕೊಟ್ಟಿದ್ದೇನೆ ಎಂದರು.

ಸರ್ಕಾರದ ಮುಂದೆ ಹಲವು ಬೇಡಿಕೆ ಸಲ್ಲಿಸಿದ ಹೆಚ್.ಎಂ.ರೇವಣ್ಣ

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಸಮಾವೇಶದಲ್ಲಿ ಏಳು ಪ್ರಮುಖ ವಿಷಯಗಳನ್ನು ಮಂಡಿಸಿದರು. ಕುರುಬರ ಬೃಹತ್ ಸಮಾವೇಶದಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

  • ಜಾತಿವಾರು ಜನಗಣತಿ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು
  • ರಾಷ್ಟ್ರ ಮಟ್ಟದಲ್ಲಿ ಕುರುಬರ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಬೇಕು
  • ರಾಷ್ಟ್ರದಲ್ಲಿ ಇರುವ ಎಲ್ಲಾ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು
  • ಮೀಸಲಾತಿಯಲ್ಲಿ ಹಿಂದುಳಿದ ಮಹಿಳೆಯರಿಗೆ ಒಳ ಮೀಸಲಾತಿ ‌ನೀಡಬೇಕು
  • ನಂದಗಡ ಗ್ರಾಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು
  • ಕುರಿ ಮೇಯಿಸಲು ಕಂದಾಯ ಭೂಮಿ ಕಾಯ್ದಿರಿಸಬೇಕು, ಸಂಚಾರಿ ಆಸ್ಪತ್ರೆ, ಸಂಚಾರಿ ಶಾಲೆ ಆರಂಭಿಸಬೇಕು, ಹಾನಿಗೊಳಗಾದ ಕುರಿಗೆ ಪರಿಹಾರ ನೀಡಬೇಕು
  • ಕುರಿ, ಮೇಕೆ ಮಹಾಮಂಡಳಕ್ಕೆ 100 ಕೋಟಿ ರೂಪಾಯಿ ಕೊಡಬೇಕು

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, 12 ಕೋಟಿ ಜನಸಂಖ್ಯೆ ಇರುವ ಕುರುಬ ಸಮುದಾಯ ಬೇರೆ ಬೇರೆ ಹೆಸರಿನಲ್ಲಿದೆ. ಅವರಿಗೆ ನ್ಯಾಯ ಒದಗಿಸಲು ಈ ಕಾರ್ಯಕ್ರಮದಲ್ಲಿ ಮನವಿ ಕೊಟ್ಟಿದ್ದಾರೆ. ಆದಷ್ಟು ಬೇಗ ಅವರಿಗೆ ನ್ಯಾಯ ಸಿಗಲಿ ಅಂತಾ ನಾವು ಒತ್ತಾಯಿಸುತ್ತೇವೆ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸರ್ಕಾರ ಬಂದಿದೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಕಾರ್ಯ ಇದೆ. ಎರಡು ಬಾರಿ ಸಿಎಂ ಇದ್ದಾಗ ಜನಪರ ಕೆಲಸ ಮಾಡಿ ಈ ಸಮುದಾಯ ಮೇಲೆತ್ತುವ ಕಾರ್ಯ ಅವರು ಮಾಡಿದ್ದಾರೆ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಸುಮಾರು ಮೂವತ್ತು ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಸಿದ್ದರಾಮಯ್ಯ. ಇದೀಗ ಐದು ಗ್ಯಾರಂಟಿ ಕೊಡುವ ಮೂಲಕ ಸಮುದಾಯ ಎತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಅನುದಾನ ಕೊಟ್ಟು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅವರಿಗೆ ಸನ್ಮಾನ ಮಾಡಿ ಗೌರವಿಸುವ ಕೆಲಸ ಇಂದು ಆಗುತ್ತಿದೆ. ಶೋಷಿತರಿಗೆ ಧ್ವನಿ ಕೊಡುವ ಕೆಲಸ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಮಾಡುತ್ತಾರೆ. ಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಟಿಕೆಟ್ ಕೊಡುವ ಚಿಂತನೆ ಮಾಡುತ್ತಿದ್ದೇವೆ. ನಮ್ಮ ವಿಚಾರವನ್ನ ನಮ್ಮ ಮುಖಂಡರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಎರಡು ಕ್ಷೇತ್ರದ ಪೈಕಿ ಒಂದು ಕ್ಷೇತ್ರದಲ್ಲಿ ಕೊಡುವ ಚಿಂತನೆ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯರನ್ನು ಗುರು ಎಂದು ಕರೆದ ಲಕ್ಷ್ಮೀ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಮಾಜದ ಕೋರಿಕೆಯನ್ನ ಮುಖ್ಯಮಂತ್ರಿ ಮುಂದೆ ಇಟ್ಟಿದ್ದಾರೆ. ಬಸವಣ್ಣ, ಸಿದ್ದರಾಮಯ್ಯ ಸಾಹೇಬ್ರು ಕುರುಬ ಸಮಾಜದ ಕಣ್ಮನಿ ಅಲ್ಲ. ಪ್ರತಿಯೊಬ್ಬ ಸಮಾಜದ ಕಲ್ಪನೆ ಸಿದ್ದರಾಮಯ್ಯ ಸಾಹೇಬರು. ಅವರ ಜನ್ಮ ದಿನದಂದು ಎಲ್ಲಾ ಸಮಾಜದವರು ಕಾರ್ಯಕ್ರಮಕ್ಕೆ ಬಂದಿದ್ದರು. ಪಕ್ಷಾತೀತವಾಗಿ ಅಭಿಮಾನಿಗಳು ಸಿದ್ದರಾಮಯ್ಯನವರಿಗೆ ಇದ್ದಾರೆ. ಒಂದಲ್ಲಾ ಎರಡಲ್ಲಾ ನಾಲ್ಕು ಬಾರಿ ನನಗೆ ಬಿ ಪಾರಂ ಕೊಟ್ಟವರು ನನ್ನ ಗುರುಗಳಾದರು ಎಂದರು.

ರಾಜಕಾರಣದಲ್ಲಿ ಹೊಗುಳುತ್ತೇವೆ ಅಂತಾ ತಿಳಿದುಕೊಳ್ಳುತ್ತಾರೆ. ಆದರೆ ಅವರು ಮಾಡಿದ ಕೆಲಸಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಐದು ಗ್ಯಾರಂಟಿಗಳನ್ನ ಜಾತ್ಯಾತೀತವಾಗಿ ಕೊಟ್ಟಿದ್ದೇವೆ‌. ಬಹಳಷ್ಟು ಜನ ಎನೇನೋ ಮಾತಾಡ್ತಾರೆ ಮಾತಾಡಲಿ. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಸಾಹೇಬರ ನಾಯಕತ್ವ ಮಿಂಚುತ್ತಿರಬೇಕು. ಸಮಾಜದ ದೃವತಾರೆ ಸಿದ್ದರಾಮಯ್ಯ ಸಾಹೇಬರು ಹೀಗೆ ಬೆಳೆಯುತ್ತಿರಲಿ ಎಂದರು.

ಸಮಾವೇಶದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ, ನಮ್ಮ ಸಮಾಜವನ್ನ ನಂಬಿ ಯಾರು ಕೆಟ್ಟವರಿಲ್ಲ. 2023 ರ ಚುನಾವಣೆ ಸಂದರ್ಭದಲ್ಲಿ ನನಗೆ ಕರೆದು ಮೊದಲು ಬಿ ಫಾರ್ಂ ಕೊಟ್ಟರು. ನಾನು ಭೈರತ್ತಿ ಅಂತಾ ಕೊಡಲಿಲ್ಲ ಕುರುಬ ಅಂತಾ ಕೊಟ್ಟಿದ್ದಾರೆ. 2013 ರಲ್ಲಿ ಸಿದ್ದರಾಮಯ್ಯ ಅವರು ಭಾಗ್ಯಗಳ ಸರದಾರ ಅಂತಾ ಖ್ಯಾತಿ ಪಡೆದರು. ಇವತ್ತು ಸರ್ಕಾರದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದಾರೆ. 39 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಮುಖ್ಯಮಂತ್ರಿಯಿಂದಲೂ ಈ ಕೆಲಸ ಆಗಿಲ್ಲ ಎಂದರು.

ನಾವು ಸಿದ್ದರಾಮಯ್ಯ ಸಾಹೇಬ್ರಿಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಿ ಅಂತ ಹೇಳಿದ್ದೆವು, ಅವರು ಬೇಡಾ ಅಂದರು. ಆ ಬಳಿಕ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿದೆವು. ಇಲ್ಲಿ 20 ಲಕ್ಷ ಜನರು ಸಾಕ್ಷಿ ಆದರು. ಅಮೆರಿಕ ಅಧ್ಯಕ್ಷ ಸಮಾವೇಶಕ್ಕೆ 10 ಲಕ್ಷ ಜನ ಸೇರುತ್ತಾರೆ. ಅದೇ ಸಿದ್ದರಾಮಯ್ಯ ಜನುಮದಿನಕ್ಕೆ 20 ಲಕ್ಷ ಜನ ಸೇರಿದರು. ಜನರನ್ನ ನೋಡಿ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂದಿಕೊಂಡಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಅತೀ ಹೆಚ್ಚು ಶಾಸಕರ ಆಯ್ಕೆಯಾಗಿ ಸರ್ಕಾರ ರಚನೆ ಆಯ್ತು ಎಂದರು.

ಸಿದ್ದರಾಮಯ್ಯನವರು ಲಕೋಟೆ ಮೇಲೆ ಸಿಎಂ ಆಗಲಿಲ್ಲ. ಜನಾಭಿಪ್ರಾಯದ ಮೇಲೆ ಮುಖ್ಯಮಂತ್ರಿ ಆದವರು. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಜಾರಿಗೊಳಿಸಿದ್ದಾರೆ. ನಮ್ಮ ಸಮಾಜದಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಇದ್ದಾರೆ. ಆದರೆ ಎಲ್ಲಿಯೂ ಕುರುಬ ಸಮುದಾಯದ ಶಿಕ್ಷಣ ಸಂಸ್ಥೆಗಳಿಲ್ಲ. ನಮ್ಮ ಸಮಾಜ ಶಿಕ್ಷಣ ಸಂಸ್ಥೆಗಳನ್ನ ಎಲ್ಲಾ ಜಿಲ್ಲೆಯಲ್ಲಿ ಆರಂಭಿಸುತ್ತೇವೆ ಎಂದು ಘೋಷಣೆ ಮಾಡಿದರು.

ಕುರಿ‌‌ ಮೇಯಿಸುವ ಕೋಲು ಹಿಡಿಯಲು ಸಿದ್ದರಾಮಯ್ಯ ನಿರಾಕರಣೆ

ಕುರುಬರ ಬೃಹತ್ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ನಂತರ ಆಯೋಜಕರು ಎಲ್ಲರಿಗೂ ಗೆಜ್ಜೆ ಕಟ್ಟಿರುವ ಕುರಿ‌‌ ಮೇಯಿಸುವ ಕೋಲು ಕೊಟ್ಟರು. ಆದರೆ ಸಿದ್ದರಾಮಯ್ಯ ಅವರು ಆ ಕೋಲದನ್ನು ಹಿಡಿಯಲು ನಿರಾಕರಿಸಿದರು. ವೇದಿಕೆ ಹಿಂಬದಿ ಸಾಲಿನಲ್ಲಿ ಕುಳಿತಿದ್ದ ಮಾಜಿ ಶಾಸಕ ರಮೇಶ್ ಕುಡಚಿ ಅಸ್ವಸ್ಥರಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Tue, 3 October 23