ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಿ, ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ -ಗುಣಧರನಂದಿಶ್ರೀ

| Updated By: ಆಯೇಷಾ ಬಾನು

Updated on: Jul 10, 2023 | 7:17 AM

ಜೈನಮುನಿ ಹತ್ಯೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಇನ್ನು ಬೇಡಿಕೆ ಈಡೇರಿಸಲು ಸಂಜೆ 5ರವರೆಗೆ ಜಿಲ್ಲಾಡಳಿತ ಸಮಯ ಕೇಳಿದ್ದೇನೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ ಎಂದು ಗುಣಧರನಂದಿಶ್ರೀ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಿ, ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ -ಗುಣಧರನಂದಿಶ್ರೀ
ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜ
Follow us on

ಚಿಕ್ಕೋಡಿ: ಜೈನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ(Acharya Sri Kamakumara Nandi Maharaj) ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಚಿಕ್ಕೋಡಿಯಲ್ಲಿ ಇಂದು ಜೈನ ಸಮುದಾಯ ಮೌನಪ್ರತಿಭಟನೆಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಸದನದಲ್ಲಿ ಪ್ರಕರಣ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಇನ್ನು ಬೇಡಿಕೆ ಈಡೇರಿಸಲು ಸಂಜೆ 5ರವರೆಗೆ ಜಿಲ್ಲಾಡಳಿತ ಸಮಯ ಕೇಳಿದ್ದೇನೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ ಎಂದು ಹುಬ್ಬಳ್ಳಿ ತಾಲೂಕು ವರೂರಿನ ನವಗ್ರಹ ತೀರ್ಥಕ್ಷೇತ್ರದ ಗುಣಧರನಂದಿಶ್ರೀ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಜೈನಮುನಿಗಳ ಹತ್ಯೆಗೆ ಖಂಡನೆ, ಹಂತಕರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಘಟನೆ ಖಂಡಿಸಿ ಇಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಜೈನ ಸಮುದಾಯದಿಂದ ಮೌನಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಚಿಕ್ಕೋಡಿಯ ಆರ್‌ಡಿ ಹೈಸ್ಕೂಲ್ ಬಳಿ ಜಮಾವಣೆಗೊಂಡು ಎಸಿ ಕಚೇರಿಯವರೆಗೆ ಮೌನಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲ ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ನಮ್ಮ ಬೇಡಿಕೆ ಈಡೇರಿಸದಿದ್ದರೆ ದೇಹತ್ಯಾಗಕ್ಕೂ ಸಿದ್ಧ

ಇನ್ನು ಮತ್ತೊಂದೆಡೆ ಶ್ರೀ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಜೈನರು ಅಲ್ಪಸಂಖ್ಯಾತರು. ಕಡಿಮೆ ಮತಗಳಿವೆ ಎಂಬ ಕಾರಣಕ್ಕೆ ನಮ್ಮ ಆಗ್ರಹವನ್ನು ಪರಿಗಣಿಸುತ್ತಿಲ್ಲ. ಜೈನ ಮುನಿಗಳ ಹತ್ಯೆ ನಂತರ ಎಲ್ಲ ಮುನಿಗಳಲ್ಲಿ ಆತಂಕ ಮೂಡಿದೆ. ಭದ್ರತೆ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಜೈನ ಸಾಧು, ಸಂತರು ಕಾಲ್ನಡಿಗೆಯಲ್ಲಿ ವಿಹಾರ ಮಾಡುವ ವೇಳೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಜೈನ ಸಾಧುಗಳ ವಿಹಾರ ವೇಳೆ ಅವರ ವಾಸ್ತವ್ಯಕ್ಕೆ ಶಾಲೆ, ಕಾಲೇಜ್ ಅಥವಾ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಜೈನ ತೀರ್ಥಗಳು, ಮಂದಿರಗಳ ಮೇಲೆ ನಡೆಯುವ ಅತಿಕ್ರಮಣ, ದಬ್ಬಾಳಿಕೆಗಳನ್ನು ತಡೆಯಬೇಕು ಎಂದು ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.

ಇದನ್ನೂ ಓದಿ: ಜೈನ ಮುನಿ ಹತ್ಯೆ ಪ್ರಕರಣ: ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳುತ್ತೇವೆ: ಎಡಿಜಿಪಿ ಹಿತೇಂದ್ರ

ಜೈನ್ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಜು. 10ರಂದು ಸಂಜೆ 5ಗಂಟೆಯೊಳಗೆ ನನ್ನ ಬೇಡಿಕೆ ಈಡೇರಿಸುವ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಖುದ್ದು ಇಲ್ಲಿಗೆ ಆಗಮಿಸಿ ವಾಗ್ದಾನ ನೀಡಬೇಕು. ಇಲ್ಲವಾದರೆ ಮತ್ತೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸರ್ಕಾರ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿರನ್ನ ಕಳಿಸಿಕೊಟ್ಟಿದೆ. ಆಶ್ರಮಕ್ಕೆ ಭೇಟಿ ನೀಡಿದ ಎಡಿಜಿಪಿ ಆರ್‌.ಹಿತೇಂದ್ರ ಗ್ರಾಮಸ್ಥರು ಹಾಗೂ ಜೈನ ಸಮುದಾಯದ ಮುಖಂಡರ ಜೊತೆ ಚರ್ಚಿಸಿದ್ದಾರೆ.

ಸದನದಲ್ಲಿ ಚರ್ಚೆಯಾಗಲಿದೆ ಜೈನಮುನಿಗಳ ಹತ್ಯೆ ಪ್ರಕರಣ

ಇನ್ನು ವಿಧಾನಸಭೆ ಕಲಾಪದಲ್ಲೂ ಜೈನಮುನಿಗಳ ಹತ್ಯೆ ಪ್ರಕರಣ ಪ್ರತಿಧ್ವನಿಸಲಿದೆ. ಇಬ್ಬರು ಆರೋಪಿಗಳ ಪೈಕಿ ನಾರಾಯಣ ಮಾಳಿ ಹೆಸರು ಮಾತ್ರ ಹೇಳುತ್ತಿದ್ದಾರೆ ಹಸನ್ ಅಲಿಯಾಸ್ ಹುಸೇನ್ ಬಗ್ಗೆ ಹೇಳುತ್ತಿಲ್ಲ. ಪ್ರಕರಣದ ತನಿಖೆ ಸರಿಯಾಗಿ ನಡೀತಿಲ್ಲ ಅಂತಾ ಬಿಜೆಪಿ ಶಾಸಕರು ತಿಳಿಸಿದ್ದು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತೋದಾಗಿ ತಿಳಿಸಿದ್ದಾರೆ. ಇತ್ತ ಕಾಂಗ್ರೆಸ್ ಶಾಸಕರು ಸಹ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡ್ತೀವಿ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಚಿಕ್ಕೋಡಿ ಸದಲಗಾ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ, ‘ಲಕ್ಷ್ಮಣ್ ಸವದಿ & ನಾನು ಸದನದಲ್ಲಿ ವಿಚಾರ ಪ್ರಸ್ತಾಪ ಮಾಡ್ತೀವಿ. ಚಿಕ್ಕೋಡಿಯ ಆರ್‌ಡಿ ಹೈಸ್ಕೂಲ್ ನಿಂದ ಜೈನ ಸಮಾಜದವರು ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಿಂದ ಜನ ಬಂದು ಸಹ ಭಾಗವಹಿಸಲಿದ್ದಾರೆ. ಪ್ರಕರಣ ಕುರಿತು ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡ್ತೀವಿ. ಸದನದಲ್ಲಿ ಧ್ವನಿ ಎತ್ತಿ ಮುಂದಿನ ದಿನಗಳಲ್ಲಿ ಯಾವ ಸಮಾಜದ ಸ್ವಾಮೀಜಿಗಳಿಗೆ ಅನ್ಯಾಯ ಆಗಬಾರದು ಅಂತಾ ಮಾತನಾಡ್ತೀವಿ. ಜೈನ ಸಮಾಜ ಬಾಂಧವರು ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಮನವಿ ಕೊಡಬೇಕು. ಜೈನಮುನಿಗಳ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಪೊಲೀಸ್ ಇಲಾಖೆಯವರು ನಾಲ್ಕು ಗಂಟೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಜಾತಿವಾದ ಏನೂ ಇಲ್ಲ, ಇಂದು ಅಂತ್ಯಕ್ರಿಯೆಯಲ್ಲಿ ಪ್ರತಿಯೊಂದು ಸಮಾಜದವರು ಬಂದಿದ್ರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂಬುದು ಪ್ರತಿಯೊಬ್ಬರ ಆಗ್ರಹ ಎಂದು ತಿಳಿಸಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ