ಗೋವಾದಲ್ಲಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್ ರೈಲು: ಅದೃಷ್ಟವಶಾತ್ ಜೀವಹಾನಿ ಇಲ್ಲ
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಗ್ಗೆ 6.30ಕ್ಕೆ ವಾಸ್ಕೋದಿಂದ ಹೊರಟಿದ್ದ ರೈಲು ಕಾರಂಜೋಲ್ ಬಳಿ ಸಂಚರಿಸುತ್ತಿದ್ದಾಗ ಎಂಜಿನ್ನ ಮುಂಭಾಗದ ಗಾಲಿಗಳು ಹಳಿತಪ್ಪಿದವು
ಚಿಕ್ಕೋಡಿ: ಗೋವಾದ ವಾಸ್ಕೊದಿಂದ ಹೌರಾಗೆ ಹೋಗುತ್ತಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲು ಮಂಗಳವಾರ (ಜ.18) ದೂಧ್ಸಾಗರ-ಕಾರಂಜೋಲ್ ಮಾರ್ಗದಲ್ಲಿ ಹಳಿತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಗ್ಗೆ 6.30ಕ್ಕೆ ವಾಸ್ಕೋದಿಂದ ಹೊರಟಿದ್ದ ರೈಲು ಕಾರಂಜೋಲ್ ಬಳಿ ಸಂಚರಿಸುತ್ತಿದ್ದಾಗ ಎಂಜಿನ್ನ ಮುಂಭಾಗದ ಗಾಲಿಗಳು ಹಳಿತಪ್ಪಿದವು. ಲೋಕೋಪೈಲಟ್ ತಕ್ಷಣ ಇದನ್ನು ಗಮನಿಸಿ, ರೈಲು ನಿಲ್ಲಿಸಿದರು. ಕ್ಯಾಸಲ್ರಾಕ್ನಿಂದ ಬಂದ ಪರಿಹಾರದ ರೈಲಿನಲ್ಲಿ ಪ್ರಯಾಣಿಕರಿಗೆ ಬೆಳಿಗ್ಗೆಯ ಉಪಹಾರ ಮತ್ತು ಮಧ್ಯಾಹ್ನ ಊಟ ಪೂರೈಸಲಾಯಿತು. ಬೇರೊಂದು ಎಂಜಿನ್ ಕಳಿಸಿದ ರೈಲ್ವೆ ಇಲಾಖೆಯು ಅಮರಾವತಿ ಎಕ್ಸ್‌ಪ್ರೆಸ್ ಮತ್ತೆ ಸಂಚಾರ ಆರಂಭಿಸಲು ಅನುವು ಮಾಡಿಕೊಟ್ಟಿತು. ಎಲ್ಲ ಸಿಬ್ಬಂದಿ ಮತ್ತು ಪ್ರಯಾಣಿಕರು ಕ್ಷೇಮವಾಗಿದ್ದಾರೆ ಎಂದು ರೈಲ್ವೆ ಇಲಾಖೆಯ ಪ್ರಕರಣ ತಿಳಿಸಿದೆ.
ಹಳಿತಪ್ಪಿದ ರೈಲಿನಿಂದಾಗಿ ಹಲವು ರೈಲುಗಳ ಸಂಚಾರ ತಡವಾಯಿತು. ಕ್ಯಾಸಲ್ರಾಕ್-ಎರ್ನಾಕುಲಂ ರೈಲು ಸಹ ತಡವಾಗಿ ಸಂಚರಿಸಿತು. ಕ್ಯಾಸಲ್ರಾಕ್ ಮತ್ತು ಹುಬ್ಬಳ್ಳಿಯಿಂದ ಬಂದ ಅಪಘಾತ ಪರಿಹಾರ ರೈಲುಗಳು ಹಳಿತಪ್ಪಿದ್ದ ಎಂಜಿನ್ ಅನ್ನು ಮತ್ತೆ ಹಳಿಯ ಮೇಲೆ ಕೂರಿಸುವಲ್ಲಿ ಯಶಸ್ವಿಯಾಯಿತು. ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಂಡರು.
Snacks and water arranged to passengers onboard Tr. No. 18048 Vasco da Gama – Shalimar Amaravati Express of 18.01.2022https://t.co/hBqaaFlxCA pic.twitter.com/K9HsfsVKgp
— South Western Railway (@SWRRLY) January 18, 2022
ಹಳಿತಪ್ಪಿದ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು; ಮೂವರು ಪ್ರಯಾಣಿಕರು ಸಾವು ಪಶ್ಚಿಮ ಬಂಗಾಳದಲ್ಲಿ ಗುರುವಾರ (ಜ.13) ಗುವಾಹಟಿ- ಬಿಕಾನೇರ್ ಎಕ್ಸ್‌ಪ್ರೆಸ್ (Guwahati-Bikaner Express) ರೈಲಿನ ಕನಿಷ್ಠ ನಾಲ್ಕು ಬೋಗಿಗಳು ಹಳಿತಪ್ಪಿವೆ. ಪ್ರಾಥಮಿಕ ತನಿಖೆ ಪ್ರಕಾರ ರೈಲ್ವೆ ಹಳಿಯಲ್ಲಿ ಬಿರುಕು ಉಂಟಾಗಿ ಇದು ಅಪಘಾತಕ್ಕೆ ಕಾರಣವಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಉತ್ತರ ಬಂಗಾಳದ ಜಲ್ಪೈಗುರಿಯ (Jalpaiguri) ಮೊಯ್ನಗುರಿ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ. ರೈಲು ಸಂಖ್ಯೆ 15633 ಬಿಕಾನೇರ್‌ನಿಂದ ಗುವಾಹಟಿಗೆ ಹೋಗುತ್ತಿತ್ತು. ರೈಲ್ವೇ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ರೈಲು ಹಳಿತಪ್ಪಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ಕುರಿತು ರೈಲ್ವೆ ಆಯುಕ್ತರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಡಿಜಿ (ಸುರಕ್ಷತೆ), ರೈಲ್ವೆ ಮಂಡಳಿಯು ದೆಹಲಿಯಿಂದ ಅಪಘಾತದ ಸ್ಥಳಕ್ಕೆ ತೆರಳುತ್ತಿದ್ದಾರೆ. ಮೃತರಿಗೆ ₹ 5 ಲಕ್ಷ, ಗಂಭೀರ ಗಾಯಕ್ಕೆ ₹ 1 ಲಕ್ಷ, ಸಣ್ಣ ಪುಟ್ಟ ಗಾಯಗಳಿಗೆ ₹ 25,000 ಪರಿಹಾರ ಘೋಷಿಸಲಾಗಿದೆ.
ಇದನ್ನೂ ಓದಿ: IRCTC: ಭಾರತೀಯ ರೈಲ್ವೆಯಿಂದ 385 ರೈಲುಗಳು ರದ್ದು; ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೀಗೆ ಪರಿಶೀಲಿಸಿ ಇದನ್ನೂ ಓದಿ: ಸಿಲ್ವರ್ ಲೈನ್ ಕೇರಳಕ್ಕೆ ವಿಪತ್ತು: ಉದ್ದೇಶಿತ ರೈಲು ಕಾರಿಡಾರ್ ವಿರುದ್ಧ ಪ್ರಮುಖ ವ್ಯಕ್ತಿಗಳಿಂದ ಪಿಣರಾಯಿ ವಿಜಯನ್ಗೆ ಪತ್ರ