ಬೆಳಗಾವಿ/ವಿಜಯನಗರ: ಇತಿಹಾಸದ ಪುಟಗಳಲ್ಲಿ ಸ್ವರ್ಣ ಅಕ್ಷರಗಳಿಂದಲೇ ಬರೆಯಲಾಗಿರುವ ವಿಜಯನಗರ ಸಾಮ್ರಾಜ್ಯ ಜಗತ್ಪ್ರಸಿದ್ಧಿ. ಹಂಪಿ ಉತ್ಸವನ್ನು (Hampi Utsav) ಪ್ರತಿವರ್ಷ ನಡೆಸಲಾಗುತ್ತದೆ. ಅದರಂತೆ ಈ ವರ್ಷ ಜನವರಿ 27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಂಪಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟಿಸಲಿದ್ದಾರೆ. ಈ ಸಂಬಂಧ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ (Shashikala Jolle) ವಿಜಯನಗರ ಜಿಲ್ಲಾಡಳಿತದ ಜೊತೆ ಇಂದು (ಡಿ. 28) ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೈಸೂರು ದಸರಾ ಮಾದರಿಯಲ್ಲೇ ಹಂಪಿ, ಕಮಲಾಪುರ, ಹೊಸಪೇಟೆಯಲ್ಲಿ ದೀಪಾಲಂಕಾರ ಮಾಡುವ ಬಗ್ಗೆ ಚರ್ಚೆಯಾಗಿದೆ.
ಹಂಪಿ ಉತ್ಸವ ಹಿನ್ನೆಲೆ ಈಗಾಗಲೆ ಡಿಸೆಂಬರ್ 1 ರಂದು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ಅವರು ಪ್ರತಿ ವರ್ಷ ಹಂಪಿ ಉತ್ಸವ ಆಯೋಜಿಸುವ ಪ್ರದೇಶಗಳನ್ನು ಪರಿಶೀಲಿಸಿದ್ದರು. ಜಲಕ್ರೀಡಾ ಪ್ರದೇಶ, ಮುಖ್ಯ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಇತರ ಸ್ಥಳಗಳನ್ನು ಪರಿಶೀಲಿಸಿದ್ದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಾಮಾನ್ಯ ಕಾರ್ಯಕ್ರಮಗಳಾದ ತುಂಗಾ ಆರತಿ, ಸಾಂಸ್ಕೃತಿಕ ಸಂಜೆ, ಹಂಪಿ ಬೈ ಸ್ಕೈ, ಹೆಲಿಕಾಪ್ಟರ್ ರೈಡ್, ಲೈಟ್ ಆ್ಯಂಡ್ ಸೌಂಡ್ ಶೋ, ಗ್ರಾಮೀಣ ಕ್ರೀಡೆಗಳ ಜೊತೆಗೆ ತುಂಗಭದ್ರಾ ನದಿಯಲ್ಲಿ ಜಲಕ್ರೀಡೆ ನಡೆಸಲು ಆಡಳಿತ ಮಂಡಳಿ ಮುಂದಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಕಮಲಾಪುರ ಕೆರೆಯಲ್ಲಿ ಜಲಕ್ರೀಡೆ ನಡೆಯುತ್ತಿತ್ತು ಎಂದು ತಿಳಸಿದ್ದರು.
1980ರಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಮೊದಲ ಬಾರಿ ಆರಂಭಿಸಿದ ಈ ಹಂಪಿ ಉತ್ಸವ ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಂದಿನಿಂದ ಇಂದಿನವರೆಗೆ ಕೋವಿಡ್ ಸಂದರ್ಭವನ್ನು ಹೊರತುಪಡಿಸಿ ಅದ್ಧೂರಿ ಉತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ಹಂಪಿಯ ತುಂಗಭದ್ರಾ ನದಿಯ ದಡದಲ್ಲಿ ಸಾಂಕೇತಿಕವಾಗಿ ಉತ್ಸವವನ್ನು ಆಚರಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Wed, 28 December 22