ಕುಡಿದ ಮತ್ತಿನಲ್ಲಿ ಬೈದಿದ್ದಕ್ಕೆ ತೋಟದ ಕಾವಲುಗಾರನ ಕೊಲೆ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಆರೋಪಿ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಚಿರನಹಳ್ಳಿಯಲ್ಲಿ ತೋಟದ ಕಾವಲುಗಾರ ಲಕ್ಷ್ಮಣ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿ ನವೀನ್‌ನನ್ನು ಬಂಧಿಸಲಾಗಿದೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಘಟನೆಯಿಂದ ಸುತ್ತಮುತ್ತಲಿನ ತೋಟದ ಮಾಲೀಕರು ಹಾಗೂ ಕೃಷಿಕರಲ್ಲಿ ಆತಂಕ ಮೂಡಿತ್ತು.

ಮುಖ್ಯಾಂಶಗಳು
- ಕಡೂರು ತಾಲೂಕಿನ ಕರಿಚಿರನಹಳ್ಳಿಯಲ್ಲಿ ತೋಟದ ಕಾವಲುಗಾರ ಲಕ್ಷ್ಮಣ್ ಬರ್ಬರ ಹತ್ಯೆ.
- ಕುಡಿದ ಮತ್ತಿನಲ್ಲಿ ಅವಾಚ್ಯವಾಗಿ ಬೈದಿದ್ದಕ್ಕೆ ಆಕ್ರೋಶಗೊಂಡ ನವೀನ್‌ನಿಂದ ಕೊಲೆ.
- ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿ ನವೀನ್‌ನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು.
ಚಿಕ್ಕಮಗಳೂರು, ನವೆಂಬರ್ 12: ತೋಟದ ಕಾವಲುಗಾರನನ್ನು ನಿರ್ಮಾಣ ಹಂತದ ಮನೆಯೊಳಗೆ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ಕಡೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನವೆಂಬರ್ 5ರಂದು ಬೆಳಕಿಗೆ ಬಂದಿದ್ದ ಕೊಲೆ
ಕಡೂರು ತಾಲೂಕಿನ ಕುಪ್ಪಾಳು ಸಮೀಪದ ಕರಿಚಿರನಹಳ್ಳಿಯ ಅಡಿಕೆ ತೋಟದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆಯಾಗಿರುವ ಬಗ್ಗೆ ನವೆಂಬರ್ 5ರಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಪರಿಶೀಲನೆ ನಡೆಸಿದ್ದರು. ಮೃತ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ನಿವಾಸಿ, 52 ವರ್ಷದ ಲಕ್ಷ್ಮಣ್ ಎಂದು ಗುರುತಿಸಲಾಗಿತ್ತು. ಈತ ತೋಟದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.
ತೋಟದಲ್ಲಿ ಒಬ್ಬನೇ ವಾಸವಿದ್ದ ಲಕ್ಷ್ಮಣ್ನನ್ನು ಯಾರು, ಯಾವ ಕಾರಣಕ್ಕೆ ಕೊಲೆ ಮಾಡಿರಬಹುದು ಎಂಬುದು ಪೊಲೀಸರಿಗೆ ಆರಂಭದಲ್ಲಿ ಸವಾಲಾಗಿತ್ತು. ಕಳ್ಳತನದ ಉದ್ದೇಶದಿಂದ ಬಂದವರು ಹತ್ಯೆ ಮಾಡಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಪ್ರಕರಣದ ಸುಳಿವು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು.
ಹಳೆಯ ವೈಷಮ್ಯ
ಬಂಧಿತ ಆರೋಪಿ ನವೀನ್ ಕೂಡ ಕರಿಚಿರನಹಳ್ಳಿ ಗ್ರಾಮದ ನಿವಾಸಿ. ಈ ಹಿಂದೆ ನವೀನ್ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಲಕ್ಷ್ಮಣ್ ಕುಡಿದ ಮತ್ತಿನಲ್ಲಿ ಆತನನ್ನು ಬೈಯುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು.
ನವೆಂಬರ್ 16ರ ರಾತ್ರಿ ಇದೇ ವಿಚಾರವನ್ನು ಪ್ರಶ್ನಿಸಲು ನವೀನ್, ಲಕ್ಷ್ಮಣ್ ಇದ್ದ ತೋಟದ ಮನೆಗೆ ತೆರಳಿದ್ದಾನೆ. ಬಳಿಕ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಈ ವೇಳೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಲಕ್ಷ್ಮಣ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ನವೀನ್ ಅಲ್ಲಿಯೇ ಇದ್ದ ಆಯುಧದಿಂದ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಲಕ್ಷ್ಮಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ. ತನಿಖೆ ವೇಳೆ ಹಿಂದಿನ ಗಲಾಟೆಯ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ನವೀನ್‌ನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೂ ಆತನ ಚಲನವಲನಗಳ ಸುಳಿವು ಆಧರಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಡಿತದ ಅಮಲಿನಲ್ಲಿ ನಡೆದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿ, ಒಬ್ಬ ವ್ಯಕ್ತಿಯ ಜೀವ ಕಳೆದುಹೋಗಿದ್ದು, ಮತ್ತೊಬ್ಬ ಜೈಲು ಸೇರುವಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
