ಬೆಳಗಾವಿಯಲ್ಲಿ 3 ಮಕ್ಕಳ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಸಸ್ಪೆಂಡ್​ಗೆ ಆದೇಶಿಸಿದ ಸಚಿವ ಸುಧಾಕರ್

ಬೆಳಗಾವಿಯಲ್ಲಿ 3 ಮಕ್ಕಳ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳ ಸಸ್ಪೆಂಡ್​ಗೆ ಆದೇಶಿಸಿದ ಸಚಿವ ಸುಧಾಕರ್
ಮೃತಪಟ್ಟಿರುವ ಪವಿತ್ರಾ, ಮಧು ಮತ್ತು ಚಿಕಿತ್ಸೆ ಪಡೆಯುತ್ತಿದ್ದ ಚೇತನ ಪೂಜಾರಿ

ಕರ್ನಾಟಕ ರಾಜ್ಯದಲ್ಲಿ ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚು ಸಾವು ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಹೆಚ್ಚು ಕೊವಿಡ್ ಟೆಸ್ಟ್ ಮಾಡಿದಾಗ ಹೆಚ್ಚು ಪ್ರಕರಣ ಪತ್ತೆಯಾಗುತ್ತೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

TV9kannada Web Team

| Edited By: ganapathi bhat

Jan 17, 2022 | 1:18 PM

ಬೆಳಗಾವಿ: ಜಿಲ್ಲೆಯಲ್ಲಿ 3 ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ವರದಿ ತನಿಖಾಧಿಕಾರಿ ಈಶ್ವರ್ ಗಡಾದ್ ಸೋಮವಾರ ಹೇಳಿಕೆ ನೀಡಿದ್ದಾರೆ. ಅದರಂತೆ, ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಮೃತಪಟ್ಟಿದ್ದಾರೆ. ನರ್ಸ್, ಫಾರ್ಮಸಿಸ್ಟ್ ಬೇಜವಾಬ್ದಾರಿಯಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್‌ನಿಂದ ಮೃತಪಟ್ಟಿರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸೂಚಿಸಿದ್ದೇನೆ. ANM, ಫಾರ್ಮಸಿಸ್ಟ್‌ ಅಮಾನತು ಮಾಡಲು ಸೂಚಿಸಿದ್ದೇನೆ. ತನಿಖೆಗಾಗಿ ನೋಡಲ್ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ನರ್ಸ್ ಬೇಜವಾಬ್ದಾರಿ; ತಪ್ಪಿದ ಭಾರಿ ಅನಾಹುತ

ಬೆಳಗಾವಿಯಲ್ಲಿ ಜನವರಿ 12ರಂದು ಭಾರಿ ಅನಾಹುತವೊಂದು ತಪ್ಪಿದೆ. 23 ಕಂದಮ್ಮಗಳನ್ನ ಬೇಜವಾಬ್ದಾರಿಯುತವಾಗಿ ಸಾಲಹಳ್ಳಿ ನರ್ಸ್ ನೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಕೆಲಸ ಕಡಿಮೆ ಮಾಡಿಕೊಳ್ಳಲು ಆಸ್ಪತ್ರೆಗೆ ತಾನೂ ಹೋಗದ ನರ್ಸ್ ಆಶಾ ಕಾರ್ಯಕರ್ತೆಯನ್ನ ಕಳುಹಿಸಿದ್ದಾಳೆ. ಫ್ರಿಡ್ಜ್​ನಲ್ಲಿ ಅಡುಗೆ ಸಾಮಾಗ್ರಿಗಳ ಪಕ್ಕದಲ್ಲೇ ವ್ಯಾಕ್ಸಿನ್ ಇಟ್ಟಿದ್ದಳು. ನಂತರ ಎರಡು ದಿನಗಳಲ್ಲಿ 23 ಜನ ಮಕ್ಕಳಿಗೆ ವ್ಯಾಕ್ಸಿನೇಷನ್‌ ಮಾಡಿಸಲಾಗಿದೆ. ಅದೃಷ್ಟವಶಾತ್ 20 ಮಕ್ಕಳು ಯಾವುದೇ ಗಂಭೀರ ಸಮಸ್ಯೆ ಎದುರಿಸಿಲ್ಲ. ಆದರೆ, ಸಿಬ್ಬಂದಿ ಬೇಜವಾಬ್ದಾರಿಗೆ ಮೂರು ಮಕ್ಕಳ ಸಾವು ಸಂಭವಿಸಿದೆ. ಮೂರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ರುಬೆಲ್ಲಾ ಲಸಿಕೆ ಪಡೆದ ಆರು ಮಕ್ಕಳಿಗೆ ಪರಿಣಾಮ ಆಗಿದ್ದು ಅದರಲ್ಲಿ ಮೂರು ಮಕ್ಕಳ ಸಾವು ಸಂಭವಿಸಿದೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಒಂದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಇನ್ನೊಂದು ಮಗು ಚಿಕಿತ್ಸೆ ಪಡೆಯುತ್ತಿದೆ. ಬೆಳಗಾವಿಯಲ್ಲಿ ನರ್ಸ್ ಬೇಜವಾಬ್ದಾರಿಯೇ ಮೂರು ಜೀವ ಬಲಿಪಡೆದಿದೆ ಎಂದು ತಿಳಿದುಬಂದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣ; ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ಮೇರೆಗೆ WHO ಅಧಿಕಾರಿ ಡಾ.ಸಿದ್ದಲಿಂಗಯ್ಯ, ಡಾ.ಪ್ರಭು ಬಿರಾದಾರ ನೇಮಕ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬೆಳಗಾವಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ ತನಿಖೆ ನಡೆಸಲಿದ್ದಾರೆ. ಮಕ್ಕಳಿಗೆ ಲಸಿಕೆ ನೀಡುವ ವೇಳೆ ಮಾರ್ಗಸೂಚಿ ಪಾಲನೆ ಬಗ್ಗೆ ತನಿಖೆ ನಡೆಸಲಿದ್ದಾರೆ. ಕೋಲ್ಡ್ ಚೈನ್ ಬ್ರೇಕ್ ಆದ ಬಗ್ಗೆಯೂ ಅಧಿಕಾರಿಗಳಿಂದ ತ‌ನಿಖೆ ನಡೆಯಲಿದೆ. ತನಿಖೆ ನಡೆಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.

ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಕೊವಿಡ್ ಟೆಸ್ಟ್ ಆಗುತ್ತಿದೆ: ಸುಧಾಕರ್ ಮಾಹಿತಿ

ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಫ್ಲ್ಯೂ ಸೀಸನ್ ಇರುತ್ತದೆ. ಕೊವಿಡ್ ಲಕ್ಷಣ ಇರುವವರಿಗೆ ಟೆಸ್ಟ್ ಮಾಡುತ್ತಿದ್ದೇವೆ. ಆದ್ಯತೆಯ ಮೇರೆಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚು ಟೆಸ್ಟ್ ಆಗುತ್ತಿದೆ. ನಮ್ಮ ರಾಜ್ಯದಲ್ಲಿ ಕೊವಿಡ್ ಸಾವಿನ ಸಂಖ್ಯೆಯೂ ಕಡಿಮೆ ಇದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವ ಹಿನ್ನೆಲೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ರೂಲ್ಸ್ ಜಾರಿ ಮಾಡ್ತೇವೆ. ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿಯೇ 3 ದಿನಕ್ಕೊಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.

ಇಂದಿನ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚಿಸುತ್ತೇವೆ. ತಜ್ಞರ ಜತೆಗಿನ ಸಭೆ ಬಳಿಕ ಅಂತಿಮ ನಿರ್ಧಾರ ತಿಳಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚು ಸಾವು ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಹೆಚ್ಚು ಕೊವಿಡ್ ಟೆಸ್ಟ್ ಮಾಡಿದಾಗ ಹೆಚ್ಚು ಪ್ರಕರಣ ಪತ್ತೆಯಾಗುತ್ತೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಕಠಿಣ ನಿಯಮಗಳು ಮುಂದುವರೆಯುತ್ತಾ ಎಂಬ ವಿಚಾರವಾಗಿ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ನಡೆಸುವ ಸಭೆಯಲ್ಲಿ ಈ ವಿಚಾರ ತೀರ್ಮಾನವಾಗುತ್ತೆ. ಅದಕ್ಕೆ ತಾನೇ ಸಿಎಂ ಸಭೆ ಕರೆದಿರೋದು ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: Corona 3rd Wave: ಕೊರೊನಾ ಸೋಂಕು ಹೆಚ್ಚಳ; ಮೂರನೇ ಅಲೆ ಎದುರಿಸಲು ಬೆಂಗಳೂರಿನಲ್ಲಿ ಸಿದ್ಧತೆ

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸೋಂಕಿನ ಕೇಸ್​ಗಳು ನಿನ್ನೆಗಿಂತ ಇಂದು ಕಡಿಮೆ, ಪಾಸಿಟಿವಿಟಿ ರೇಟ್​ನಲ್ಲೂ ಇಳಿಕೆ; 24ಗಂಟೆಯಲ್ಲಿ 385 ಮಂದಿ ಸಾವು

Follow us on

Related Stories

Most Read Stories

Click on your DTH Provider to Add TV9 Kannada