ಚಿಕ್ಕೋಡಿ, ಅಕ್ಟೋಬರ್ 22: ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ಮಾಡಬೇಕು. ಆಗ ಮಾತ್ರ ಗಡಿ ಸುರಕ್ಷಿತವಾಗಿರಲು ಸಾಧ್ಯ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra border) ಸಂಬಂಧ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಗಡಿ ಉಸ್ತುವಾರಿ ಸಚಿವರ ನೇಮಿಸುವಂತೆ ಹಿಂದಿನ ಸರ್ಕಾರಕ್ಕೂ ಒತ್ತಾಯಿಸಿದ್ದೆವು ಎಂದು ಹೇಳಿದ್ದಾರೆ.
ಸರ್ಕಾರ ಎಷ್ಟೇ ಬೆಳೆದರೂ ರಾಜ್ಯದ ಗಡಿ ಭಾಗ ಗಟ್ಟಿಯಾಗಿರಬೇಕು. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಆ ನಿಟ್ಟಿನಲ್ಲಿ ತನ್ನ ಕಾರ್ಯ ಮಾಡುತ್ತಿದೆ. ಸರ್ಕಾರ ಬೇಗ ಎಚ್ಚೆತ್ತುಕೊಳ್ಳಬೇಕು, ಎಲ್ಲಾ ಆದ್ಮೇಲೆ ಏನೂ ಮಾಡಕ್ಕಾಗಲ್ಲ. ರಾಜ್ಯದ ಗಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ; ಭಾಷಾ ವೈಷಮ್ಯದ ಕಿಡಿ ಹೊತ್ತಿಸಲು ಕುತಂತ್ರ
ಉತ್ತರ ಕರ್ನಾಟಕದ ಉತ್ಸವಗಳಿಗೆ ಸರ್ಕಾರ ಹೆಚ್ಚಿನ ಅನುದಾನ ಕೊಡಲ್ಲ. ಮೈಸೂರಲ್ಲಿ ಅದ್ಭುತವಾಗಿ ದಸರಾ ಉತ್ಸವ ಆಗುತ್ತೆ, ನಮಗೆ ಹೆಮ್ಮೆ ಇದೆ. ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಹೆಚ್ಚು ಅನುದಾನ ನೀಡಲಿ. ಹೆಚ್ಚು ಅನುದಾನ ಕೊಟ್ಟರೆ ಗಡಿ ಕನ್ನಡಿಗರಿಗೆ ಹುರುಪು ತುಂಬಿದಂತಾಗುತ್ತೆ ಎಂದು ಹೇಳಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲೇ ಮಹಾರಾಷ್ಟ್ರ ಸರ್ಕಾರ ಕಾಲು ಕೆರೆದು ಕ್ಯಾತೆ ಆರಂಭಿಸಿದೆ. ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡು ಸೋತು ಸುಣ್ಣವಾಗಿದ್ದ ಎಂಇಎಸ್ ಪುಂಡರಿಗೆ ಬಲ ತುಂಬುವ ಕಾರ್ಯದಲ್ಲಿ ಮಹಾರಾಷ್ಟ್ರ ಸರ್ಕರ ತೊಡಗಿದೆ. ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಪುಲೆ ಜನಾರೋಗ್ಯ ಯೋಜನೆ ಕರ್ನಾಟಕ ಗಡಿಭಾಗದ 865 ಹಳ್ಳಿಗಳಿಗೆ ವಿಸ್ತರಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದನ್ನೂ ಓದಿ: ಗಡಿವಿವಾದ: ಮಹಾರಾಷ್ಟ್ರ ಅಲರ್ಟ್, ಕರ್ನಾಟಕ ಸೈಲೆಂಟ್? ಸರ್ಕಾರದ ನಡೆಗೆ ಕನ್ನಡಪರ ಸಂಘಟನೆಗಳು ಗರಂ
ಈ ಯೋಜನೆ ಲಾಭ ಪಡೆಯಲು ಎಂಇಎಸ್ ಪತ್ರವೂ ಅವಶ್ಯಕ ಎಂದಿರುವ ಮಹಾರಾಷ್ಟ್ರ ಸರ್ಕಾರ ಎಂಇಎಸ್ ನಾಯಕರ ಖರ್ಚುವೆಚ್ಚದ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರವೇ ವಹಿಸಿಕೊಳ್ಳಲು ಮುಂದಾಗಿದೆ. ಗಡಿವಿವಾದ ಸಂಬಂಧ ಈಗಾಗಲೇ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ 12 ವಕೀಲರ ತಂಡ ನೇಮಕ ಮಾಡಿದೆ.
ಆರೋಗ್ಯ ಯೋಜನೆ ಸೇರಿ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿ, ವೈದ್ಯಕೀಯ ಕಾಲೇಜುಗಳಲ್ಲಿ ಗಡಿಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆ ಮಹಾರಾಷ್ಟ್ರ ಸರ್ಕಾರ ರೂಪಿಸುತ್ತಿದೆ. ಚಂದಗಡ್ದಲ್ಲಿ ಗಡಿಭಾಗದ ಮರಾಠಿ ಭಾಷಿಕರಿಗಾಗಿ ಕಚೇರಿಯನ್ನು ಸಹ ಸ್ಥಾಪಿಸಲು ಮುಂದಾಗಿದೆ. ಗಡಿವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಇಷ್ಟೆಲ್ಲ ಕಾರ್ಯ ಮಾಡುತ್ತಿದ್ದರು ಸೈಲೆಂಟ್ ಆಗಿರೋದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.