ಬೆಳಗಾವಿ: ‘‘ನನಗೆ ಆಪರೇಷನ್ ಮಾಡಿಸಿಕೊಂಡರೆ ಕುರುಬರ ರಕ್ತ ಕೊಡಿ ಎಂದು ಕೇಳುತ್ತೇನಾ?’’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. ಪ್ರಸ್ತುತ ಜಾತಿ ರಾಜಕಾರಣವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು ಸಂವಿಧಾನ ಉಳಿದರೆ ಎಲ್ಲಾ ಸಮುದಾಯದವರು ಉಳಿಯುತ್ತಾರೆ ಎಂದಿದ್ದಾರೆ. ಅರಳಿಕಟ್ಟೆ ಗ್ರಾಮದಲ್ಲಿ ತೋಂಟದಾರ್ಯ ಮಠದ ಶಿವಮೂರ್ತಿ ದೇವರ ಪಟ್ಟಾಧಿಕಾರ ಮಹೋತ್ಸವದಲ್ಲಿ ಭಾಗಿಯಾಗಿದ್ದ ಅವರು ಮಾತನಾಡಿ, ‘‘ಜಾತಿ ವ್ಯವಸ್ಥೆಯ ಕಾರಣಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಇದೆ. ಅಸಮಾನತೆ ಹೋಗಲಾಡಿಸಲು ಬಸವಣ್ಣವರು ಸೇರಿದಂತೆ ಅನೇಕರು ಪ್ರಯತ್ನ ಮಾಡಿದ್ದಾರೆ. ಮನುಷ್ಯ ಮನುಷ್ಯರಾಗಿ ಬದುಕಬೇಕು ಬೇಕು ಅಂತಾ ಅವರು ಕನಸು ಕಂಡಿದ್ದರು. ನಾವು ಆಚರಿಸುವ ಧರ್ಮವನ್ನ ವೈಭವೀಕರಿಸಬಾರದು. ಯಾವ ಧರ್ಮ ಮನುಷ್ಯತ್ವವನ್ನ ಪ್ರತಿಪಾದಿಸುತ್ತೆ ಅದೇ ಶ್ರೇಷ್ಠವಾದ ಧರ್ಮ. ಸಂವಿಧಾನದಲ್ಲಿ ಧರ್ಮ, ಜಾತಿ ಆಧಾರದ ಮೇಲೆ ಮನುಷ್ಯರನ್ನ ವಿಂಗಡಣೆ ಮಾಡಲು ಸಾಧ್ಯವಿಲ್ಲ’’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘‘ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು. ಯಾವುದೇ ಪಕ್ಷದ ಸರ್ಕಾರ ಬರಲಿ ಸಂವಿಧಾನದ ರೀತಿಯಲ್ಲಿ ನಡೆದುಕೊಳ್ಳುವುದು ಆದ್ಯ ಕರ್ತವ್ಯ. ಸರ್ಕಾರ ಅಶಾಂತಿ, ಹಿಂಸೆಗೆ ಅವಕಾಶ ಮಾಡಿಕೊಡಬಾರದು’’ ಎಂದಿದ್ದಾರೆ. ‘‘ಎಲ್ಲರೂ ನಮ್ಮವರು ಅಂತಾ ಹೇಳಿ ಅವನು ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಅಂತಾ ಯಾಕೆ ಹೇಳಲು ಹೋಗುತ್ತೀರಿ?’’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘‘ಯಾವುದೇ ಧರ್ಮಕ್ಕೆ ಸೇರಲು ಮನುಷ್ಯರ ರಕ್ತ ಒಂದೆ. ನನಗೆ ಆಪರೇಷನ್ ಮಾಡಿಸಿಕೊಂಡರೆ ಕುರುಬರ ರಕ್ತ ಕೊಡಿ ಅಂತಾ ಕೇಳುತ್ತೇನಾ? ಈಗ ನಡೆಯುತ್ತಿರುವ ಬೆಳವಣಿಗೆಗೆ ಬೆಂಬಲ ಕೊಡುವುದು ಸಂವಿಧಾನ ವಿರುದ್ಧವಾಗಿದ್ದು. ಸಂವಿಧಾನ ಉಳಿದರೆ ಎಲ್ಲಾ ಸಮುದಾಯದವರು ಉಳಿಯುತ್ತಾರೆ. ಅಸಮಾನತೆ ಹೋಗದೇ ಯಾವುದೇ ನಾಡು ಶಾಂತಿ, ಸುವ್ಯವಸ್ಥೆಯಿಂದ ಇರಲು ಸಾಧ್ಯವಿಲ್ಲ’’ ಎಂದು ಜಾತಿ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ‘‘ಸಿದ್ದರಾಮಯ್ಯ ಅವರು ಮಠದ ಶ್ರೀಗಳಂತೆ ಮಾತನಾಡಿದರು. ರಾಜಕಾರಣ ಬಿಟ್ಟು ಸಿದ್ದರಾಮಯ್ಯನವರು ಇಂದು ಮಾತನಾಡಿದ್ದಾರೆ. ಬಸವಣ್ಣನವರ ಆಚಾರ ವಿಚಾರ ಇವತ್ತು ನೆನಪಿಸಿಕೊಳ್ಳುತ್ತಿದ್ದೇವೆ. ಬಸವಣ್ಣನವರ, ಕಿತ್ತೂರು ಚನ್ನಮ್ಮರ, ಕುವೆಂಪು ಅವರ ಕರ್ನಾಟಕ. ಇದನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗಬೇಕು ಅನ್ನೋದು ನಮ್ಮ ಸಿದ್ದಾಂತ. ಯಾವ ಜಾತಿಯಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಧರ್ಮ ಬೇಡ ಜಾತಿ ಬೇಡಾ ಅಂತಾ ಹೇಳಿದರೆ ಧರ್ಮ ಬಿಡುವುದಿಲ್ಲ’’ ಎಂದಿದ್ದಾರೆ.
‘‘ಇವತ್ತು ದೇಶ, ಸಮಾಜ ಬಹಳ ಕಷ್ಟದಲ್ಲಿದೆ’’ ಎಂದ ಡಿಕೆಶಿ, ತಾಯಂದಿರು ಮೊದಲು ಗುರು, ನೀವೇ ಈ ಸಮಾಜಕ್ಕೆ ಆಸ್ತಿ. ಈ ಸಮಾಜ ಎನಾದ್ರೂ ಬದುಕಿದೆ ಅಂದ್ರೇ ತಾಯಂದಿರ ಶ್ರಮ ಹೋರಾಟ ಮರೆಯಲು ಸಾಧ್ಯವಿಲ್ಲ. ಸಮಾಜಕ್ಕೆ ತೊಂದರೆ ಕಷ್ಟ ಆದಾಗ ನಿಮ್ಮ ಧ್ವನಿ ಎತ್ತಬೇಕು. ರಾಜಕೀಯವಾಗಿ, ಒಂದು ಪಕ್ಷದ ಪರವಾಗಿ ಧ್ವನಿ ಎತ್ತಿ ಅಂತಾ ಹೇಳುವುದಿಲ್ಲ. ಸಮಾಜಕ್ಕೆ ಅನ್ಯಾಯ ಆದಾಗ ಸ್ವಾಮೀಜಿಗಳು ನೀವು ಕೈಕಟ್ಟಿ ಕುಳಿತುಕೊಂಡು ಕೂಡಬಾರದು. ಧರ್ಮ ಉಳಿಯಬೇಕು ಅಂತಾ ಸಾವಿರಾರು ಜನ ಸ್ವಾಮೀಜಿಗಳನ್ನ ತಯಾರು ಮಾಡ್ತೀರಿ. ಶಾಂತಿ ನೆಮ್ಮದಿಯಿಂದ ಬದುಕಲು ನೀವೆಲ್ಲಾ ಸಹಕಾರ ಮಾಡಬೇಕು. ಸನ್ಮಾನ ಮಾಡಿಸಿಕೊಳ್ಳಲು ನಾವು ಇಲ್ಲಿಗೆ ಬಂದಿಲ್ಲ. ಮಠಗಳ ಜತೆಗೆ ನಾವಿದ್ದೇವೆ ಅನ್ನೋದನ್ನ ಹೇಳಲು ಬಂದಿದ್ದೇವೆ’’ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು. ಹಾನಗಲ್ ಕುಮಾರೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ