ಬೆಳಗಾವಿ ಮಸೀದಿ ವಿವಾದ ತಾರಕಕ್ಕೆ: ಅಕ್ರಮವಾಗಿ ತಲೆ ಎತ್ತಿರುವ ಫಾತಿಮಾ ಮಸೀದಿಗೆ ಬೀಗ ಜಡಿದ ವಕ್ಫ್ ಬೋರ್ಡ್!

| Updated By: ಸಾಧು ಶ್ರೀನಾಥ್​

Updated on: Jan 17, 2023 | 1:26 PM

Belagavi Fathima masjid: ಇನ್ನು ಫಾತಿಮಾ ಮಸೀದಿಗೆ ಬೀಗ ಬೀಳ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯಾವುದೇ ಅನಾಹುತ, ಕಾನೂನು ಉಲ್ಲಂಘನೆ ಆಗಬಾರದು ಅನ್ನೋ ಕಾರಣಕ್ಕೆ ಭಾನುವಾರದಿಂದ ಮಸೀದಿ ಮುಂಭಾಗದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಿದ್ದಾರೆ.

ಬೆಳಗಾವಿ ಮಸೀದಿ ವಿವಾದ ತಾರಕಕ್ಕೆ: ಅಕ್ರಮವಾಗಿ ತಲೆ ಎತ್ತಿರುವ ಫಾತಿಮಾ ಮಸೀದಿಗೆ ಬೀಗ ಜಡಿದ ವಕ್ಫ್ ಬೋರ್ಡ್!
ಬೆಳಗಾವಿ ಮಸೀದಿ ವಿವಾದ ತಾರಕಕ್ಕೆ: ಅಕ್ರಮವಾಗಿ ತಲೆ ಎತ್ತಿರುವ ಫಾತಿಮಾ ಮಸೀದಿಗೆ ಬೀಗ ಜಡಿದ ವಕ್ಫ್ ಬೋರ್ಡ್!
Follow us on

ಅದು ಬಹು ಧರ್ಮಿಯರು ನೆಲೆಸಿರುವ ಬಡಾವಣೆ. ಅಲ್ಲಿನ ವಸತಿ ನಿವೇಶನದಲ್ಲೊಂದು ಸದ್ದಿಲ್ಲದೇ ಮಸೀದಿ ತಲೆ ಎತ್ತಿತ್ತು. ಚುನಾವಣೆ ಹೊತ್ತಿನಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿವಾದದ ಕೇಂದ್ರವಾಗಿತ್ತು (controversy). ಮಸೀದಿ ತೆರವಿಗೆ ಹಿಂದೂಪರ ಸಂಘಟನೆಗಳು, ಬಿಜೆಪಿ ಸ್ಥಳೀಯ ನಾಯಕರು ಪಟ್ಟು ಹಿಡಿದಿದ್ದರು. ಹಿಂದೂ ಸಂಘಟನೆಗಳಿಗೆ ಮಣಿದ ಮಹಾನಗರ ಪಾಲಿಕೆ (Belagavi Municipal Corporation) ಮಾಡಿದ್ದೇನು? ದಿಢೀರ್ ಮಸೀದಿಗೆ ಬೀಗ ಜಡಿದಿದ್ದು ಯಾರು? ಇದೀಗ ಮಸೀದಿ ಸುತ್ತಮುತ್ತ ಪರಿಸ್ಥಿತಿ ಹೇಗಿದೆ? ಎಷ್ಟು ಜನ ಪೊಲೀಸರು ಭದ್ರತೆ ನೀಡಿದ್ದಾರೆ ಅಂತೀರಾ ಈ ಸ್ಟೋರಿ ನೋಡಿ… ಹೌದು, ಕುಂದಾನಗರಿ ಬೆಳಗಾವಿ ರಾಜ್ಯದ ಅತಿಸೂಕ್ಷ್ಮ ನಗರಗಳಲ್ಲಿ ಒಂದು. ಗಡಿ ವಿವಾದದಿಂದ ಸುದ್ದಿಯಲ್ಲಿರುತ್ತಿದ್ದ ಈ ನಗರದಲ್ಲೀಗ ಧರ್ಮ ದಂಗಲ್ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸಾರಥಿ ನಗರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಫಾತೀಮಾ ಮಸೀದಿ (Belagavi Fathima masjid controversy). ವಸತಿ ನಿವೇಶನದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗಿತ್ತು ಅನ್ನೋ ಆರೋಪ ಕೇಳಿ ಬಂದಿತ್ತು. ಸ್ಥಳೀಯ ನಿವಾಸಿಗಳು ಈ ಸಂಬಂಧ ಬೆಳಗಾವಿ ಮಹಾನಗರ ಪಾಲಿಕೆ ಗಮನಕ್ಕೆ ತಂದಿದ್ದರು. ಅಲ್ಲದೇ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಅನಧಿಕೃತ ಮಸೀದಿ (masjid) ತೆರವು ಮಾಡುವಂತೆ ಪಟ್ಟು ಹಿಡಿದಿದ್ದರು.

ಕಳೆದ ವಾರ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿ‌ದ ಹಿಂದೂಪರ ಸಂಘಟನೆಗಳು ವಸತಿ ಉದ್ದೇಶದ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಯುತ್ತಿವೆ. ತಕ್ಷಣವೇ ಮಸೀದಿ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ವಕ್ಫ್ ಬೋರ್ಡ್ ಗೆ ನೋಟಿಸ್ ಜಾರಿಗೊಳಿಸಿದ್ದರು. ಹೀಗಾಗಿ ವಕ್ಫ್ ಬೋರ್ಡ್ ಅಧಿಕಾರಿಗಳು ಸಾರಥಿ ನಗರದ ಫಾತೀಮಾ ಮಸೀದಿಗೆ ಭಾನುವಾರ ಸಂಜೆ ಬೀಗ ಜಡಿದಿದ್ದಾರೆ.

ಇನ್ನು ಫಾತಿಮಾ ಮಸೀದಿಗೆ ಬೀಗ ಬೀಳ್ತಿದ್ದಂತೆ ಅಲರ್ಟ್ ಆದ ಪೊಲೀಸರು ಭಾನುವಾರದಿಂದ ಮಸೀದಿ ಮುಂಭಾಗದಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಿದ್ದಾರೆ. ಯಾವುದೇ ಅನಾಹುತ, ಕಾನೂನು ಉಲ್ಲಂಘನೆ ಆಗಬಾರದು ಅನ್ನೋ ಕಾರಣಕ್ಕೆ ಪೊಲೀಸರು ಕೂಡ ಮಸೀದಿ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಸಾರಥಿ ನಗರ ಬೆಳಗಾವಿಯಲ್ಲಿದ್ದರೂ ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುತ್ತದೆ.

ಮಸೀದಿ ವಿವಾದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್‌ ಭವನದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಇದೆಲ್ಲ ಪ್ರಾರಂಭವಾಗುತ್ತದೆ. ಹಿಂದೆ ಮಂಗಳೂರು, ಉಡುಪಿ, ಕಾರವಾರದಲ್ಲಿ ಚುನಾವಣೆ ಬಂದಾಗ ಯಾವ ರೀತಿ ಮಾಡಿದ್ರು ನೋಡಿದೀವಿ. ಇಲ್ಲಿಯೂ ಮಾಡ್ತಾರೆ, ಬೇರೆಡೆಯೂ ಮಾಡ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಸಾವಿರಾರು ವರ್ಷಗಳಿಂದ ಮಸೀದಿ ಇದೆ, ಮಂದಿರ ಇದೆ, ಚರ್ಚ್ ಸಹ ಇದೆ. ಈಗ ವಿವಾದ ಸೃಷ್ಟಿಸುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗ್ತಿದ್ರೆ, ನ್ಯಾಯಾಲಯ ಆದೇಶ ನೀಡಿದ್ರೆ ಅದು ಬೇರೆ ಮಾತು. ಆದ್ರೆ ಶಾಸಕರೇ ಮುಂದೆ ನಿಂತು‌ ಪೊಲೀಸರಿಗೆ ಹೇಳಿ ಆ ಮಸೀದಿ ತೆಗಿ, ಈ ಮಸೀದಿ ತೆಗಿ ಅನ್ನೋದು ತಪ್ಪು. ಆದರೆ ಚುಣಾವಣೆ ಮುಗಿಯುವವರೆಗೆ ಬಿಜೆಪಿಯವರು ವಿವಾದ ಸೃಷ್ಟಿಸುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸದ್ಯ ಮಹಾನಗರ ಪಾಲಿಕೆಯಿಂದ ನೋಟಿಸ್ ಜಾರಿಯಾಗ್ತಿದ್ದಂತೆ ವಕ್ಫ್ ಬೋರ್ಡ್ ಅಧಿಕಾರಿಗಳು ವಿವಾದಿತ ಫಾತೀಮಾ ಮಸೀದಿಗೆ ಬೀಗ ಹಾಕಿದ್ದಾರೆ. ಮಸೀದಿ ತೆರವಿಗೆ ಹೋರಾಟ ಮುಂದುವರೆಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಜಿಲ್ಲಾಡಳಿತ ಮುಂದೆ ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದ್ದು ಈ ವಿವಾದ ಮುಂದೆ ಮತ್ಯಾವ ತಿರುವು ಪಡೆದುಕೊಳ್ಳುತ್ತೆ, ಇದಕ್ಕೆ ಮುಸ್ಲಿಂ ಸಂಘಟನೆಗಳು ಹೇಗೆ ರಿಯಾಕ್ಟ್ ಮಾಡುತ್ತವೆ ಎಂಬುದನ್ನ ಕಾದುನೋಡಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ

Published On - 12:42 pm, Tue, 17 January 23