18 ವರ್ಷದ ಹಿಂದೆ ಪತ್ನಿಯ ಕಳಕೊಂಡಿದ್ದ, ಇಬ್ಬರು ಮಕ್ಕಳು ಅಪ್ಪ-ಅಮ್ಮನನ್ನು ಸಾಕುತ್ತಾ ಬಂದಿದ್ದ, ಕೊನೆಗೆ ಅಕ್ರಮ ಸಂಬಂಧಕ್ಕೆ ಬಲಿಯಾದ
18 ವರ್ಷದಿಂದ ಹೆಂಡತಿ ಕಳೆದುಕೊಂಡು ಒಂಟಿಯಾಗಿದ್ದವ ಎರಡು ವರ್ಷದಿಂದ ಮಾಡಬಾರದ ಕೆಲಸ ಮಾಡಿ ಸಂಬಂಧಿಕರ ಆಕ್ರೋಶಕ್ಕೆ ಕಾರಣನಾಗಿದ್ದ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡ ಕುಟುಂಬ ಇದೀಗ ಬೀದಿಗೆ ಬಂದಿದೆ.
ಆತ 18 ವರ್ಷದ ಹಿಂದೆ ಅನಾರೋಗ್ಯದಿಂದ ಹೆಂಡತಿಯನ್ನ ಕಳೆದುಕೊಂಡಿದ್ದ. ಎರಡು ಮಕ್ಕಳನ್ನೇ ಸಾಕಿ ಸಲಹುತ್ತಾ ಈ ವರೆಗೂ ಜೀವನ ದೂಡಿದ್ದ. ಮಗಳ ಮದುವೆ ಮಾಡಿದವ, ತನ್ನ ತಂದೆ ತಾಯಿಯನ್ನು ನೋಡಿಕೊಂಡು ಜೀವನ ನಡೆಸುತ್ತಿದ್ದ. ಹೀಗಿದ್ದವ ಅದೊಂದು ದಿನ ಬರ್ಬರವಾಗಿ ರಸ್ತೆಯಲ್ಲಿ ಹತ್ಯೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ತಂಗಿ ಮನೆಗೆ ಹೋಗಿ ಬೈಕ್ ಮೇಲೆ ಬರ್ತಿದ್ದವನ ಹತ್ಯೆ ಮಾಡಿದ್ಯಾರು? ಮನೆ ಯಜಮಾನನ ಕಳೆದುಕೊಂಡ ಕುಟುಂಬದ ಪರಿಸ್ಥಿತಿ ಹೇಗಿದೆ ಅಂತೀರಾ? ಈ ಸ್ಟೋರಿ ನೋಡಿ
ಬೈಕ್ ಆ ಕಡೆ, ಶವ ಈ ಕಡೆ ಬಿದ್ದಿರುವುದು, ಮಗನನ್ನ ಕಳೆದುಕೊಂದು ದಿಕ್ಕೇ ತೋಚದ ಸ್ಥಿತಿಯಲ್ಲಿ ವೃದ್ಧ ಅಪ್ಪ ಅಮ್ಮ, ಬೀಕೋ ಅಂತಿರುವ ಮನೆಯ ಯಜಮಾನನಿಲ್ಲದ ಮನೆ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ (belagavi) ಜಿಲ್ಲೆಯ ಅಥಣಿ (athani) ತಾಲೂಕಿನ ಬಾವನದಡ್ಡಿ ಗ್ರಾಮದಲ್ಲಿ. ಇಲ್ಲಿ ಬರ್ಬರವಾಗಿ ಹತ್ಯೆಯಾಗಿರುವ (murder) ವ್ಯಕ್ತಿಯ ಹೆಸರು ವಿಠೋಬಾ ಮರಗಾಳೆ 42 ವರ್ಷ. 20 ವರ್ಷದ ಹಿಂದೆ ಮದುವೆಯಾಗಿದ್ದ ಈತ 18 ವರ್ಷದ ಹಿಂದೆ ಪತ್ನಿಯನ್ನ ಕಳೆದುಕೊಂಡ. ತನ್ನ ಎರಡೂ ಮಕ್ಕಳನ್ನ ಸಾಕಿ ಸಲುಹಿದ ವಿಠೋಬಾ ಕೆಲ ದಿನಗಳ ಹಿಂದಷ್ಟೇ ಮಗಳ ಮದುವೆ ಮಾಡಿಕೊಟ್ಟಿದ್ದ. ಇನ್ನು ಜನವರಿ 5, 2023ರಂದು ಸಹೋದರಿ ಮನೆಗೆ ಹೋಗಿ ಬರ್ತೇನಿ ಅಂತಾ ಅರಟಾಳ ಗ್ರಾಮಕ್ಕೆ ಹೋಗಿದ್ದ. ಹೀಗೆ ಹೋಗಿ ವಾಪಸ್ ಬರುವಾಗ ಪತರವಾಡಿ ಅನ್ನೋ ಗ್ರಾಮದ ಹೊರ ವಲಯದಲ್ಲಿರುವ ಹನುಮಾನ್ ಮಂದಿರಕ್ಕೆ ಹೋಗಿ ಕೈಮುಗಿದು ಮತ್ತೆ ಬೈಕ್ ಹತ್ತಿದ್ದಾನೆ. ಹೀಗೆ ಬೈಕ್ ಮೇಲೆ ಹತ್ತಿದ್ದ ಎರಡೇ ನಿಮಿಷಕ್ಕೆ ದೇವಸ್ಥಾನದ ಕೂಗಳತೆ ದೂರದಲ್ಲಿ ರಸ್ತೆ ಮೇಲೆ ಮಂಕಿ ಕ್ಯಾಪ್ ಹಾಕಿದ ಕೆಲವರು ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್ ನಿಲ್ಲಿಸದ ವಿಠೋಬಾ ಮರಗಾಳೆ ಮೇಲೆ ಕುಡುಗೋಲು, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ರಸ್ತೆ ಪಕ್ಕದಲ್ಲಿ ಶವ ಬಿದ್ದಿರುವುದನ್ನ ಕಂಡ ಸ್ಥಳೀಯರು ಕೂಡಲೇ ಐಗಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಕೊಲೆಯಾದ ಕುಟುಂಬಸ್ಥರಿಂದ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇದಾದ ಬಳಿಕ ಕುಟುಂಬಸ್ಥರಿಂದ ಮಾಹಿತಿ ಪಡೆದ ಪೊಲೀಸರಿಗೆ ಅದೊಂದು ರಾಜಿ ಪಂಚಾಯಿತಿ ವಿಚಾರ ಗೊತ್ತಾಗಿದೆ.
ಹೌದು ಸಂಬಂಧಿಕರಲ್ಲಿ ಓರ್ವ ಮಹಿಳೆ ಜತೆಗೆ ವಿಠೋಬಾ ಮರಗಾಳೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಆಕೆಯ ಗಂಡನಿಗೆ ಕುಟುಂಬಸ್ಥರಿಗೆ ಗೊತ್ತಾಗಿ ನಂತರ ಹಿರಿಯರನ್ನ ಸೇರಿಸಿ ರಾಜಿ ಪಂಚಾಯಿತಿ ಮಾಡಿದ್ದರಂತೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಕೂಡಲೇ ಆಕೆಯ ಗಂಡನ ಡಿಟೈಲ್ ಪಡೆಯುತ್ತಾರೆ. ಈ ವೇಳೆ ಆತ ಊರು ಬಿಟ್ಟಿರುವ ವಿಚಾರ ಗೊತ್ತಾಗುತ್ತೆ.
ಕೂಡಲೇ ಆತನ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಪತ್ತೆ ಹಚ್ಚಿ ಕರೆದುಕೊಂಡು ಬಂದು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ಹೆಂಡತಿ ಜತೆಗೆ ವಿಠೋಬಾ ಮರಗಾಳೆ ಅನೈತಿಕ ಸಂಬಂಧ ಹೊಂದಿದ್ದ ಈ ವಿಚಾರ ಊರಿಗೆಲ್ಲಾ ಗೊತ್ತಾಗಿ ಸಂಬಂಧಿಕರಿಗೂ ಗೊತ್ತಾಗಿ ಮಾನ ಮರ್ಯಾದೆ ಹೋಗಿತ್ತು. ಇದರಿಂದ ತನ್ನ ಭಾಮೈದನ ಜತೆಗೆ ಸೇರಿಕೊಂಡು 5 ರಂದು ಬೈಕ್ ಮೇಲೆ ಬರ್ತಿದ್ದ ವಿಠೋಬಾನ ಅಡ್ಡಗಟ್ಟಿ ಹತ್ಯೆ ಮಾಡಿದೆವು ಅಂತಾ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಆರೋಪಿಗಳಾದ ರಾಜಾರಾಮ್ ಸಲಗರ್, ಲಕ್ಷ್ಮಣ ಸಲಗರ್ ಇಬ್ಬರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ ಪೊಲೀಸರು.
ಇನ್ನು ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿರುವ ಶಂಕೆ ಇದ್ದು ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ. 18 ವರ್ಷದಿಂದ ಹೆಂಡತಿ ಕಳೆದುಕೊಂಡು ಒಂಟಿಯಾಗಿದ್ದವ ಎರಡು ವರ್ಷದಿಂದ ಮಾಡಬಾರದ ಕೆಲಸ ಮಾಡಿ ಸಂಬಂಧಿಕರ ಆಕ್ರೋಶಕ್ಕೆ ಕಾರಣನಾಗಿದ್ದ. ಹಿರಿಯರ ಸಮ್ಮುಖದಲ್ಲಿ ಈ ವಿಚಾರ ಬಗೆಹರಿದಿದ್ರೂ ಹೆಂಡತಿ ಮೇಲೆ ಕಣ್ಣಾಕಿದವನನ್ನ ಕೊಲೆ ಮಾಡಲೇಬೇಕೆಂದುಕೊಂಡ ದುರುಳ ಇದೀಗ ಆತನ ಜೀವ ತೆಗೆದಿದ್ದಾನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡ ಕುಟುಂಬ ಇದೀಗ ಬೀದಿಗೆ ಬಂದಿದೆ.
ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ