ಬೆಳಗಾವಿ: ಗುತ್ತಿಗೆದಾರರು ಕರ್ನಾಟಕ ಸರ್ಕಾರದ ವಿರುದ್ಧ ಶೇ 40ರ ಕಮಿಷನ್ ಆರೋಪ ಮಾಡಿರುವ ಬಗ್ಗೆ ಸೋಮವಾರ ಬೆಳಗಾವಿ ಸುವರ್ಣಸೌಧದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ಅವ್ಯವಹಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಗುತ್ತಿಗೆದಾರರ ಸಂಘವು ಸುದ್ದಿಗೋಷ್ಠಿ ನಡೆಸಿ, ಜಲಸಂಪನ್ಮೂಲ ಇಲಾಖೆಯ ಬಗ್ಗೆ ಗಂಭೀರ ಆರೋಪ ಮಾಡಿತ್ತು. ಈ ವಿಚಾರ ಸದನದಲ್ಲಿಯೂ ಪ್ರಸ್ತಾಪವಾಗಿತ್ತು. ಪ್ರತಿಪಕ್ಷಗಳು ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಮರ್ಪಕ ಪ್ರತಿಕ್ರಿಯೆ ನೀಡದೆ ಸದನದಿಂದ ಹೊರನಡೆದರು.
ನಿರ್ದಿಷ್ಟವಾಗಿ ನಿಮ್ಮ ಇಲಾಖೆಯ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಲು ಏಕೆ ಒಪ್ಪುತ್ತಿಲ್ಲ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಕಾರಜೋಳ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ತನಿಖೆಗೆ ಒಪ್ಪಿಸಿದ್ದಾರೆ’ ಎಂದಷ್ಟೇ ಹೇಳಿದರು. ‘ಎಲ್ಲಾ ಇಲಾಖೆಗಳ ಮೇಲೂ ಆರೋಪ ಬರುತ್ತದೆ’ ಎಂದು ಸದನದಿಂದ ಹೊರನಡೆದರು.
ಸಿಎಂ ಮಾತನಾಡಲು ಅವಕಾಶ ಕೊಡ್ತಿಲ್ಲ: ಗುತ್ತಿಗೆದಾರರ ಅಳಲು
ಬೆಂಗಳೂರು: ಗುತ್ತಿಗೆದಾರರಿಂದ ಶೇ 40ರ ಕಮಿಷನ್ ಪಡೆಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ ಕೆಂಪಣ್ಣ ಹಾಗೂ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ದೂರಿದರು. ಯಾವುದೇ ಕಾಮಗಾರಿ ಮಾಡಬೇಕಾದರೆ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗುತ್ತದೆ. ಹಿಂದೆ ಯಡಿಯೂರಪ್ಪಗೆ ಪತ್ರ ಬರೆದಿದ್ದೆವು, ಯಡಿಯೂರಪ್ಪ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಬಿ.ಎಲ್.ಸಂತೋಷ್ ಅವರಿಗೂ ರೆಫರ್ ಮಾಡಿದ್ದೆವು. ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದೆವು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆಯೂ ನಮ್ಮ ಸಮಸ್ಯೆಗೆ ಸ್ಪಂದನೆ ಸಿಗಲಿಲ್ಲ. ರಾಜ್ಯಪಾಲರು ಮತ್ತು ಲೋಕೋಪಯೋಗಿ ಇಲಾಖೆ ಸಚಿವರ ಬಳಿಯೂ ದೂರು ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.
ಈಗ ಸ್ಥಳೀಯ ಗುತ್ತಿಗೆದಾರರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಪ್ಯಾಕೇಜ್ ವ್ಯವಸ್ಥೆ ಜಾರಿಯಾಗಿರುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ಸಿಗುತ್ತಿಲ್ಲ. ಸಿಎಂ ನಮಗೆ ಮಾತನಾಡುವುದಕ್ಕೆ ಸಿಗುತ್ತಿಲ್ಲ. ಜನವರಿಯಲ್ಲಿ ನಾವು ಬೃಹತ್ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆ ನಡೆಸಬೇಕು. ಯಾರು ಎಲ್ಲಿ, ಹೇಗೆ ಕಮಿಷನ್ ಸಂಗ್ರಹಿಸುತ್ತಿದ್ದಾರೆ ಎಂಬ ವಿವರ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಬೆಂಗಳೂರು ನಗರದಲ್ಲಿ ₹ 20 ಸಾವಿರ ಕೋಟಿ ಮೊತ್ತದ ಕಾಮಗಾರಿ ಆಗಿದೆ. ಎದರಲ್ಲಿ ಎಷ್ಟರಮಟ್ಟಿಗೆ ಗುಣಮಟ್ಟ ಕಂಡುಬರುತ್ತಿದೆ. ಅವ್ಯವಹಾರಗಳಲ್ಲಿ ಅಧಿಕಾರಿಗಳು ಸಹ ಪಾಲುದಾರರಾಗಿದ್ದಾರೆ. ನಾವು ಯಾವುದೇ ದಾಖಲೆ ಇಲ್ಲದೆ ಮಾತನಾಡುತ್ತಿಲ್ಲ. ಈ ಆರೋಪಗಳನ್ನು ಸಾಬೀತುಪಡಿಸಲು ಸಿದ್ಧರಿದ್ದೇವೆ ಎಂದು ನುಡಿದರು.
ಇದನ್ನೂ ಓದಿ: ಕಮಿಷನ್ ದಂಧೆಯ ಬಗ್ಗೆ ಗುತ್ತಿಗೆದಾರರ ಆರೋಪ: ತನಿಖೆಗೆ ಮುಖ್ಯ ಕಾರ್ಯದರ್ಶಿ ಸೂಚನೆ
ಇದನ್ನೂ ಓದಿ: ಕರ್ನಾಟಕದಲ್ಲಿ ಕಮಿಷನ್ ದಂಧೆ: ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ, ಸರ್ಕಾರ ವಜಾ ಮಾಡಲು ಆಗ್ರಹ