ಜೈನಮುನಿ ಹತ್ಯೆ ಕೇಸ್​: ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ: ಶಾಸಕ ಅಭಯ್ ಪಾಟೀಲ್ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2023 | 9:23 PM

ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್​ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದ್ದು, ನಿಜವಾದ ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್​ ಆರೋಪ ಮಾಡಿದ್ದಾರೆ.

ಜೈನಮುನಿ ಹತ್ಯೆ ಕೇಸ್​: ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ: ಶಾಸಕ ಅಭಯ್ ಪಾಟೀಲ್ ಆರೋಪ
BJP ಶಾಸಕ ಅಭಯ್ ಪಾಟೀಲ್
Follow us on

ಬೆಳಗಾವಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್​ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದ್ದು, ನಿಜವಾದ ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್​ (MLA Abhay Patil) ಆರೋಪ ಮಾಡಿದ್ದಾರೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣ ಮಾಳಿ ಪ್ರಕರಣದಲ್ಲಿ ಭಾಗಿಯಾಗಿರಬಹುದು ಆದರೆ, ಪ್ರಮುಖ ಆರೋಪಿಯ ಹೆಸರನ್ನು ಸರ್ಕಾರ ಅಥವಾ ಪೊಲೀಸರು ಹೇಳುತ್ತಿಲ್ಲ. ಇದು ಹಲವು ಸಂಶಯಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ.

ಪ್ರಮುಖ ಆರೋಪಿಯ ಹೆಸರನ್ನು ಬಹಿರಂಗಪಡಿಸಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಪ್ರಕರಣ ಮುಚ್ಚುವ ಪ್ರಯತ್ನ ಮಾಡುತ್ತಿದೆ. ಯಾರೋ ಸಚಿವರ ಮಾತು ಕೇಳಿ ಪೊಲೀಸರು ಒತ್ತಡಕ್ಕೆ ಮಣಿಯಬೇಡಿ. ಒಬ್ಬನ ಉಳಿಸಲು ಇಷ್ಟೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೈನಮುನಿ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ: ಸಮಗ್ರ ತನಿಖೆ ಸೂಚನೆ

ಎಲ್ಲಾ ಫ್ರೀ, ಕೊಲೆನೂ ಫ್ರೀ: ಕಾಂಗ್ರೆಸ್​ ವಿರುದ್ಧ ಅಭಯ್ ಪಾಟೀಲ್​ ಕಿಡಿ

ಸರ್ಕಾರದ ಒತ್ತಡ ಇದೆ ಅಂತಾ ಅಧಿಕಾರಿಗಳು ಆಫ್ ದಿ ರೆಕಾರ್ಡ್ ಹೇಳುತ್ತಿದ್ದಾರೆ. ಆ ಅಧಿಕಾರಿಗಳದ್ದು ಬೇಕಿದ್ದರೆ ಬ್ರೇನ್ ಮ್ಯಾಪಿಂಗ್ ಮಾಡಿ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಾಧು ಸಂತರಿಗೂ ಉಳಿಗಾಲ ಇಲ್ಲದ ಪರಿಸ್ಥಿತಿ ಬಂದಿದೆ. ಕೊಲೆಗಡುಕರಿಗೆ ಫ್ರೀ ಸರ್ಕಾರ ಇದು, ಎಲ್ಲಾ ಫ್ರೀ ಕೊಲೆನೂ ಫ್ರೀ. ಅದಕ್ಕೆ ಒಬ್ಬನ ಉಳಿಸಲು ಇಷ್ಟೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ತನಿಖೆ ಪಾರದರ್ಶಕವಾಗಿ ಆಗುತ್ತಿಲ್ಲ: ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ್ ಪಾಟೀಲ್ ಆರೋಪ

ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ್ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದು, ಜೈನಮುನಿ ಹತ್ಯೆ ಪ್ರಕರಣದ ತನಿಖೆ ಪಾರದರ್ಶಕವಾಗಿ ಆಗುತ್ತಿಲ್ಲ. ಕೇವಲ ಒಬ್ಬ ಆರೋಪಿ ಮಾಳಿ ಹೆಸರು ಜಪ ಮಾಡುವ ಕೆಲಸ ಇಲಾಖೆ ಮಾಡುತ್ತಿದೆ. ಮತ್ತೋರ್ವನ ಹೆಸರು ಹೇಳುತ್ತಿಲ್ಲ, ಪ್ರಕರಣದಲ್ಲಿ ಬೇರೆ ಏನೋ ಇದೆ ಎಂಬ ಸಂಶಯವಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಹುಲ್ ಗಾಂಧಿ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಬಗ್ಗೆ ಮಾತಾಡಿದರು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಫಲಿತಾಂಶ ಬಂದ ಬಳಿಕ ಪಾಕ್ ಪರ ಘೋಷಣೆ ಹಾಕಿದ್ದಾರೆ. ಈ ದೇಶದಲ್ಲಿ ಧರ್ಮ ರಕ್ಷಣೆ ಮಾಡುವ ಸಾಧು ಸಂತರಿಗೆ ರಕ್ಷಣೆ ಇಲ್ಲ. ಪ್ರತಿ ಧರ್ಮದ ಸಾಧು ಸಂತರ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದಿರುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: 400 ಅಡಿ ಆಳದ ಕೊಳವೆ ಬಾವಿಯಲ್ಲಿ ಮೃತದೇಹ ಪತ್ತೆ

ಈಗ ಜೈನಮುನಿಗಳ ಹತ್ಯೆ ಪ್ರಕರಣದಲ್ಲಿ ಒಂದೇ ಹೆಸರು ಹೇಳುತ್ತಿದ್ದಾರೆ. ಮತ್ತೊಂದು ಹೆಸರು ಮುಚ್ಚಿಡುತ್ತಿದ್ದಾರೆ, ಇದು ಸರಿಯಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಆಗಬೇಕು. ಸರ್ಕಾರ ಬರುತ್ತೆ, ಹೋಗುತ್ತೆ ಅಧಿಕಾರಿಗಳು ಪ್ರಮಾಣ ಮಾಡಿ ನ್ಯಾಯ ಕೊಡುತ್ತೇವೆ ಅಂತಾ ಹೇಳಿರುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಬೇಕು. ಕೇವಲ ಫ್ರೀ ಕೊಟ್ರೆ ನಡೆಯಲ್ಲ, ಧರ್ಮ ಉಳಿಸಬೇಕು, ದೇಶದ ಸಂವಿಧಾನ ಉಳಿಸಬೇಕು. ಸಂಸ್ಕೃತಿ ಉಳಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಕ್ರೂರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 pm, Sat, 8 July 23