ಬೆಳಗಾವಿಯಲ್ಲಿ ಮತ್ತೆ ಪಾರುಪತ್ಯ ಮೆರೆದ ಜಾರಕಿಹೊಳಿ‌ ಬ್ರದರ್ಸ್, ನಡೆಯದ ಕತ್ತಿ ವರಸೆ

ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಕಾವು ಜೋರಾಗಿದ್ದು, ಇದೇ ಅಕ್ಟೋಬರ್ 19ರಂದು ಮತದಾನ ನಡೆಯಲಿದೆ. ಜಾರಕಿಹೊಳಿ ಬ್ರದರ್ಸ್ ಒಂದು ಕಡೆಯಾದ್ರೆ ಕತ್ತಿ, ಸವದಿ ಮತ್ತೊಂದು ಕಡೆ ಸೆಣಸಾಡುತ್ತಿದ್ದಾರೆ. ಆದ್ರೆ, ಮತದಾನಕ್ಕೂ ಮುನ್ನವೇ ಡಿಸಿಸಿ ಗದ್ದುಗೆಯನ್ನ ಜಾರಕಿಹೊಳಿ ಬ್ರದರ್ಸ್ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಈ ಮೂಲಕ ಬೆಳಗಾವಿ ರಾಜಕೀಯದಲ್ಲಿ ಪಾರುಪತ್ಯ ಮೆರೆದಿದ್ದಾರೆ. ಅರೇ ಇದೇನಿದು ಚುನಾವಣೆಗೂ ಮುನ್ನವೇ ಅದ್ಹೇಗೆ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಸಾಧ್ಯವಾಯ್ತು ಅಂತೀರಾ? ಇಲ್ಲಿದೆ ನೋಡಿ.

ಬೆಳಗಾವಿಯಲ್ಲಿ ಮತ್ತೆ ಪಾರುಪತ್ಯ ಮೆರೆದ ಜಾರಕಿಹೊಳಿ‌ ಬ್ರದರ್ಸ್, ನಡೆಯದ ಕತ್ತಿ ವರಸೆ
Jarkiholi Brothers
Updated By: ರಮೇಶ್ ಬಿ. ಜವಳಗೇರಾ

Updated on: Oct 13, 2025 | 10:48 PM

ಬೆಳಗಾವಿ, (ಅಕ್ಟೋಬರ್ 13): ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ (Belagavi DCC Bank Election) ಮತ್ತೆ ಜಾರಕಿಹೊಳಿ ಬ್ರದರ್ಸ್ (Jarkiholi Brothers)​ ಪಾರುಪತ್ಯ ಮರೆದಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯಲ್ಲಿ ಸದ್ಯ ರಾಜ್ಯವೇ ತಿರುಗಿ ನೋಡುವ ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಕ್ಕೆ ಇದೇ ಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ. ಆದ್ರೆ, ಮತದಾನಕ್ಕೂ ಮುನ್ನವೇ ಜಾರಕಿಹೊಳಿ ಬ್ರದರ್ಸ್ ತಮ್ಮ ಪೆನಲ್​ ನ 9 ಜನರನ್ನು ಅವಿರೋಧವಾಗಿ ಗೆಲ್ಲಿಸಿದ್ದಾರೆ. ಈ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಬಾರಿ ಜಾರಕಿಹೊಳಿ ಬ್ರದರ್ಸ್​ ವಿರುದ್ಧ ಮೀಸೆ ತಿರುವಿದ್ದ ಕತ್ತಿ ಹಾಗೂ ಲಕ್ಷ್ಮಣ ಸವದಿಗೆ ಶಾಕ್ ಕೊಟ್ಟಿದ್ದಾರೆ.

ಇದೇ ಅಕ್ಟೋಬರ್ 19ರಂದು ಹದಿನಾರು ಸ್ಥಾನಗಳ ಪೈಕಿ ಏಳು ಸ್ಥಾನಗಳಿಗೆ ಮಾತ್ರ ಮತದಾನ ನಡೆಯುತ್ತಿದೆ. ಇಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿತ್ತು. ಅಷ್ಟಕ್ಕೂ ಈ ಚುನಾವಣೆ ಜಾರಕಿಹೊಳಿ ಮತ್ತು ಕತ್ತಿ ಆ್ಯಂಡ್ ಸವದಿ ನಡುವೆ ಫೈಟ್ ನಡೆಯುತ್ತಿದೆ. ಇದರಲ್ಲಿ ಜಾರಕಿಹೊಳಿ ಪೆನಲ್ ದಿಂದ ಹದಿಮೂರು ತಾಲೂಕಿನಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ರೆ ಇನ್ನುಳಿದಂತೆ ಕತ್ತಿ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಉಳಿದುಕೊಂಡ್ರೇ ಲಕ್ಷ್ಮಣ ಸವದಿ ತಮ್ಮದೇ ಪತ್ಯೇಕ ಪೆನಲ್ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ‌ ಮನೆತನದ ಇಬ್ಬರು ರಾಜಕೀಯಕ್ಕೆ ಎಂಟ್ರಿ; ಕತ್ತಿ, ಸವದಿ ಪ್ಲ್ಯಾನ್ ಸಸ್ಪೆನ್ಸ್

9 ಜನ ಅವಿರೋಧ ಆಯ್ಕೆ

ಇನ್ನೂ ಜಾರಕಿಹೊಳಿ ಪೆನಲ್ ನಲ್ಲಿದ್ದ ಏಳು ಜನರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ರೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದ ಗಣೇಶ್ ಹುಕ್ಕೇರಿ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತ ಸವದಿ ಬಣದಲ್ಲಿ ಗುರುತಿಸಿಕೊಂಡಿದ್ದ ರಾಜು ಕಾಗೆ ಇಂದು ಏಕಾಏಕಿ ಸತೀಶ್ ಜಾರಕಿಹೊಳಿ ಅವರ ಜೊತೆಗೆ ಕಾಣಿಸಿಕೊಳ್ಳುವುದರ ಜೊತೆಗೆ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ ಅವರ ನಾಮ ಪತ್ರ ವಾಪಾಸ್ ತೆಗೆಸುವುದರಲ್ಲಿ ಯಶಸ್ವಿಯಾಗಿ ಕಡೆಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಾಲಚಂದ್ರ ಜಾರಕಿಹೊಳಿ ಪೆನಲ್ ನಲ್ಲಿ ಗುರುತಿಸಿಕೊಂಡಿದ್ದ ಏಳು ಜನ ಹಾಗೂ ಇಬ್ಬರು ಸೇರಿ ಒಂಬತ್ತು ಜನ ಅವಿರೋಧವಾಗಿ ಆಯ್ಕೆಯಾಗುವುದರ ಮೂಲಕ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.

ಯಾರು ಯಾವ ತಾಲೂಕಿನಿಂದ ಆಯ್ಕೆ?

ಇನ್ನೂ ಯಾವ ತಾಲೂಕಿನಿಂದ ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎನ್ನುವುದನ್ನು ನೋಡೊದಾದರೆ, ಬಾಲಚಂದ್ರ ಪೆನಲ್ ನಲ್ಲಿ ಗುರುತಿಸಿಕೊಂಡ ಯರಗಟ್ಟಿ ತಾಲೂಕಿನಿಂದ ವಿಶ್ವಾಸ್ ವೈದ್ಯ, ಗೋಕಾಕ್ ದಿಂದ ಅಮರನಾಥ್ ಜಾರಕಿಹೊಳಿ, ಮೂಡಲಗಿಯಿಂದ ನೀಲಕಂಠ, ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಖಾನಾಪುರದಿಂದ ಅರವಿಂದ್ ಪಾಟೀಲ್, ಅದರ್ಸ್ ವತಿಯಿಂದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ರೇ. ಇತ್ತ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆಯಿಂದ ಕಾಗವಾಡದಿಂದ ರಾಜು ಕಾಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಯಾರ ಬಣದಲ್ಲಿ ಗುರುತಿಸಿಕೊಳ್ಳದ ಗಣೇಶ್ ಹುಕ್ಕೇರಿ ಚಿಕ್ಕೋಡಿ ತಾಲೂಕಿನಿಂದ ಆಯ್ಕೆಯಾಗಿದ್ದಾರೆ.

ಇನ್ನುಳಿದ 7 ತಾಲೂಕಿನಲ್ಲಿ ಯಾರ್ಯಾರಿಗೆ ಫೈಟ್?

ಏಳು ತಾಲೂಕಿನಲ್ಲಿ ಚುನಾವಣೆ ನಡೆಯುತ್ತಿದ್ದ ಹುಕ್ಕೇರಿಯಲ್ಲಿ ರಮೇಶ್ ಕತ್ತಿ ವರ್ಸಸ್ ಜಾರಕಿಹೊಳಿ ನಡುವೆ ಫೈಟ್ ನಡೆಯುತ್ತಿದೆ. ಅಥಣಿಯಲ್ಲಿ ಲಕ್ಷ್ಮಣ್ ಸವದಿ ವರ್ಸಸ್ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ನಡುವೆ ಫೈಟ್ ಇದೆ. ಬೈಲಹೊಂಗಲದಲ್ಲಿ ಮಹಾಂತೇಶ್ ದೊಡ್ಡಗೌಡರ ಮತ್ತು ವಿ.ಐ ಪಾಟೀಲ್, ಕಿತ್ತೂರಿನಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ್ ಸಹೋದರ ನಾನಾಸಾಹೇಬ್ ಪಾಟೀಲ್ ಹಾಗೂ ವಿಕ್ರಂ ಇನಾಮದಾರ್, ರಾಮದುರ್ಗದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಮತ್ತು ಢವಣ್ ನಡುವೆ ಫೈಟ್ ಇದೆ. ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಪಾಟೀಲ್ ಹಾಗೂ ಉತ್ತಮ್ ಪಾಟೀಲ್ ನಡುವೆ, ರಾಯಬಾಗದಲ್ಲಿ ಕೂಡ ಚುನಾವಣೆ ನಡೆಯುತ್ತಿದೆ.

ಇನ್ನೂ ರಾಮದುರ್ಗ ತಾಲೂಕಿನಿಂದ ಸ್ಪರ್ಧೆ ಮಾಡಿದ್ದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಸೋಲಿನ ಭೀತಿ ಹಾಗೂ ಮುಂದೆ ಮಂತ್ರಿ ಸ್ಥಾನ ಕೈತಪ್ಪುವ ಭೀತಿಯಿಂದ ಈ ರೀತಿ ನಿರ್ಧಾರಕ್ಕೆ ಬಂದು ನಾಮಪತ್ರ ವಾಪಾಸ್ ಪಡೆದಿದ್ದಾಗಿ ಹೇಳಿದ್ದಾರೆ.

ಏಳು ತಾಲೂಕಿನಲ್ಲಿ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ. ಈಗಾಗಲೇ ತಮ್ಮ ತಮ್ಮ ಮತದಾರರನ್ನ ಅಭ್ಯರ್ಥಿಗಳು ಗೋವಾ ಸೇರಿದಂತೆ ಬೇರೆ ಬೇರೆ ಪ್ರದೇಶಕ್ಕೆ ಟೂರ್ ಗೆ ಕರೆದುಕೊಂಡು ಹೋಗಿದ್ದು ಗೆಲ್ಲಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಅದೇನೆ ಹೇಳಿ ಜಿಲ್ಲೆಯಲ್ಲಿ ಮತ್ತೊಮ್ಮೆ ಜಾರಕಿಹೊಳಿ ಬ್ರದರ್ಸ್ ಕಿಂಗ್ ಮೇಕರ್ ಆಗಿದ್ದು ಈ ಮೂಲಕ ಜಿಲ್ಲೆ ತಮ್ಮ ಕಂಟ್ರೋಲ್ ನಲ್ಲೇ ಇದೆ ಎನ್ನುವುದನ್ನು ತಮ್ಮ ರಾಜಕೀಯ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.