ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಮನೆತನದ ಇಬ್ಬರು ರಾಜಕೀಯಕ್ಕೆ ಎಂಟ್ರಿ; ಕತ್ತಿ, ಸವದಿ ಪ್ಲ್ಯಾನ್ ಸಸ್ಪೆನ್ಸ್
ಡಿಸಿಸಿ ಬ್ಯಾಂಕ್ ಚುನಾವಣೆ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಂದಿಗೆ ನಾಮ ಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಜಾರಕಿಹೊಳಿ ಮನೆತನದಿಂದ ಇಬ್ಬರು ಕುಡಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಜಾರಕಿಹೊಳಿ ಮನೆತನದ ಎರಡನೇ ಪೀಳಿಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದೆ.

ಬೆಳಗಾವಿ, ಅಕ್ಟೋಬರ್ 11: ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ (BDCC bank election) ಇಂದು ನಾಮ ಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಹದಿನಾರು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಕಣದಲ್ಲಿ ಘಟಾನುಘಟಿ ನಾಯಕರೇ ಅಖಾಡಕ್ಕೆ ಧುಮುಕಿದ್ದಾರೆ. ಅಷ್ಟೇ ಅಲ್ಲದೆ ಜಾರಕಿಹೊಳಿ ಮನೆತನದಿಂದ ಇಬ್ಬರು ಕುಡಿಗಳು ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆರಂಭದ ಹಂತದಲ್ಲೇ ಜಾರಕಿಹೊಳಿ ಬ್ರದರ್ಸ್ (Jarakiholi Brothers) ಪೆನಲ್ ಮೆಲುಗೈ ಸಾಧಿಸಿದೆ. ಇತ್ತ ಕತ್ತಿ ಮತ್ತು ಸವದಿ ಪ್ಲ್ಯಾನ್ ಏನು ಅನ್ನೋದು ಇನ್ನು ಸಸ್ಪೆನ್ಸ್ ಆಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಜಿದ್ದಾ ಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. ಡಿಸಿಸಿ ಬ್ಯಾಂಕ್ನ ಹದಿನಾರು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಅ.19ರಂದು ಮತದಾನ ನಡೆಯಲಿದೆ. ಇನ್ನೂ ಈ ವರೆಗೂ ಒಟ್ಟು 64 ನಾಮ ಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಆರು ತಾಲೂಕಿನಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದ್ದು ಆರಂಭದಲ್ಲೇ ಜಾರಕಿಹೊಳಿ ಪೆನಲ್ ಮೇಲುಗೈ ಸಾಧಿಸಿದೆ.
ಇದನ್ನೂ ಓದಿ: ಮತ್ತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್: ಘಟಾನುಘಟಿಗಳು ಕಣಕ್ಕೆ
ರಾಜಕೀಯ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಗೆ ಘಟಾನುಘಟಿ ನಾಯಕರೇ ಸ್ಪರ್ಧೆ ಮಾಡುತ್ತಿದ್ದಾರೆ. ಹಾಲಿ ಮಾಜಿ ಶಾಸಕರು ಸೇರಿದಂತೆ ಮಾಜಿ ಸಂಸದರು ಕೂಡ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಜಾರಕಿಹೊಳಿ ಬ್ರದರ್ಸ್ 13 ಜನರ ಒಂದು ಪೆನಲ್ ರೆಡಿ ಮಾಡಿಕೊಂಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನ ಕಣಕ್ಕಿಳಿಸದೇ ಇನ್ನೂಳಿದ ಕಡೆಗಳಲ್ಲಿ ತಮ್ಮವರನ್ನ ಅಖಾಡಕ್ಕಿಳಿಸಿದ್ದಾರೆ.
ಇತ್ತ ರಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ನಡೆ ಇನ್ನೂ ನಿಗೂಢವಾಗಿದ್ದು, ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯ ಆರಂಭಿಕ ಹಂತದಲ್ಲಿ ಜಾರಕಿಹೊಳಿ ಬ್ರದರ್ಸ್ ಮೇಲುಗೈ ಸಾಧಿಸಿದ್ದು, ಆರು ತಾಲೂಕಿನ ಪೈಕಿ ಐದು ಜಾರಕಿಹೊಳಿ ಬ್ರದರ್ಸ್ ಪೆನಲ್ನವರು ಆಯ್ಕೆಯಾಗಿದ್ದಾರೆ.
ಯಾವ ಕ್ಷೇತ್ರದಿಂದ ಯಾರು?
ಗೋಕಾಕ್ದಿಂದ ಅಮರನಾಥ್ ಜಾರಕಿಹೊಳಿ, ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ, ಯರಗಟ್ಟಿ ವಿಶ್ವಾಸ್ ವೈದ್ಯ, ಸವದತ್ತಿ ವಿರೂಪಾಕ್ಷ ಮಾಮನಿ, ಮೂಡಲಗಿ ನೀಲಕಂಠ ಜಾರಕಿಹೊಳಿ ಪೆನಲ್ ನಲ್ಲಿದ್ದವರು ಅವಿರೋಧ ಆಯ್ಕೆಯಾದರೆ, ಇತ್ತ ಯಾವುದೇ ಪೆನಲ್ನಲ್ಲಿ ಗುರುತಿಸಿಕೊಳ್ಳದೇ ಚಿಕ್ಕೋಡಿಯಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಗಣೇಶ್ ಹುಕ್ಕೇರಿ ಕೂಡ ಆಯ್ಕೆಯಾಗಿದ್ದಾರೆ.
ಇಂದು ಮಧ್ಯಾಹ್ನ ಮೂರು ಗಂಟೆವರೆಗೂ ಕಾದು ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಶಾಸಕ ವಿಶ್ವಾಸ್ ವೈದ್ಯ, ನೀಲಕಂಡ, ಗಣೇಶ್ ಹುಕ್ಕೇರಿ ಬೆಂಬಲಿಗರು ಗುಲಾಲ್ ಹಚ್ಚಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಇನ್ನೂ ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದರೂ ಅದಕ್ಕೆ ಠಕ್ಕರ್ ಕೊಡಲು ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಹಿಡಿಯಬೇಕು, ತಮ್ಮ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್ ಸಾಧಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ಲ್ಯಾನ್ ಮಾಡುತ್ತಿದ್ದು, ಅ.19ರವರೆಗೂ ಕಾದು ನೋಡಿ ಅಂತಿದ್ದಾರೆ.
ಜಾರಕಿಹೊಳಿ ಮನೆತನದ ಎರಡನೇ ಪೀಳಿಗೆ ರಾಜಕೀಯ ರಂಗಕ್ಕೆ ಎಂಟ್ರಿ
ಇನ್ನೊಂದು ಕಡೆ ಇದೇ ಮೊದಲ ಬಾರಿಗೆ ಅಣ್ತಮ್ಮಂದಿರು ತಾವು ಸ್ಪರ್ಧೆ ಮಾಡುವುದನ್ನ ಬಿಟ್ಟು ತಮ್ಮ ಕುಡಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು, ಆ ಮೂಲಕ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಹಾಗೂ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ನಾಮಪತ್ರ ಸಲ್ಲಿಸಿದ್ದು, ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಿಷ್ಟು
ಈ ಕುರಿತು ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ತಾವು ಎಳೆದುಕೊಂಡು ಹೋಗುತ್ತಿರು ತೇರನ್ನ ಮಕ್ಕಳು ಎಳೆಯಬೇಕು. ಜನರ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಚುನಾವಣೆಗೆ ನಿಲ್ಲಿಸಿದ್ದಾಗಿ ಹೇಳಿದ್ದಾರೆ. ಇತ್ತ ತಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಎಂಟ್ರಿಯಾಗಿದ್ದಾರೆ. ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದು, ಜಾರಕಿಹೊಳಿ ಸಹೋದರರ ಮತ್ತೊಂದು ದಾಳ ಅಂತಾ ಹೇಳಲಾಗುತ್ತಿದ್ದು ಬಾಲಚಂದ್ರ ಜಾರಕಿಹೊಳಿ ಕೂಡ ರಾಜಕಾರಣದಲ್ಲಿ ಎಲ್ಲವೂ ಮಾಡಬೇಕು ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ರಾಜಾರೋಷವಾಗಿ ಲಾಂಗು, ಮಚ್ಚು ಹಿಡಿದು ಓಡಾಡ್ತಿರುವ ಪುಢಾರಿಗಳು, ವಿಡಿಯೋ ವೈರಲ್
ಒಟ್ಟಿನಲ್ಲಿ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಕ್ಟೋಬರ್ 19ರಂದು ಮತದಾನ ನಡೆಯಲಿದ್ದು, ಈಗಾಗಲೇ ಆರು ತಾಲೂಕಿನಲ್ಲಿ ಯಾವುದೇ ನಾಮ ಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧ ಆಯ್ಕೆ ಖಚಿತವಾಗಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಇತ್ತ ಜಾರಕಿಹೊಳಿ ಬ್ರದರ್ಸ್ ಕಡೆಯಿಂದ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಲಿಂಗಾಯತ ಅಸ್ತ್ರ ಕೂಡ ಪ್ರಯೋಗವಾಗುತ್ತಿದ್ದು ಇದರಿಂದ ತಮ್ಮ ಪೆನಲ್ ಗೆದ್ದರೆ ಲಿಂಗಾಯತರೇ ಅಧ್ಯಕ್ಷ ಅಂತಾ ಬಾಲಚಂದ್ರ ಹೇಳಿದ್ದು, ಮತ್ತಷ್ಟು ರೋಚಕತೆ ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:05 pm, Sat, 11 October 25



