ಬೆಳಗಾವಿ: ಕರ್ನಾಟಕದಲ್ಲಿ ಎಂಇಎಸ್ ಪುಂಡಾಟಿಕೆ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಗೆ ಅವಕಾಶ ನೀಡಲಿಲ್ಲ. ಹೀಗಾಗಿ, ಈ ಬಗ್ಗೆ ಚರ್ಚೆಗೆ ಹೆಚ್ಚಿನ ಅವಕಾಶ ಕೊಡುವಂತೆ ಜೆಡಿಎಸ್ ಪಟ್ಟುಹಿಡಿಯಿತು. ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ ಪ್ರಕರಣ ಕುರಿತು ಚರ್ಚೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಒತ್ತಾಯಿಸಿದರು. ಇದಾದ ಬಳಿಕ ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟರು.
ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ ಪ್ರಕರಣ ಕುರಿತು ಚರ್ಚೆ ಆರಂಭಿಸಿದ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ನಾಡಿನ ಹಿತದ ವಿಷಯ ಬಂದಾಗ ಯಾವುದೇ ಮುಲಾಜಿಗೆ ಒಳಗಾಗುವುದು ಬೇಡ. ಯಾರು ಯಾರು ದುಷ್ಟ ಶಕ್ತಿಗಳು ಇದ್ದಾರೋ ಅವರನ್ನು ಬಗ್ಗು ಬಡಿಯಬೇಕು. ಎಲ್ಲಿಯವರೆಗೂ ಅವರನ್ನು ಬಗ್ಗು ಬಡಿಯುವುದಿಲ್ಲವೋ ಅಲ್ಲಿವರೆಗೂ ಇಂತಹ ಘಟನೆಗಳು ನಡೆಯುತ್ತವೆ. ನಾಡಿನ ಹಿತ ಬಂದಾಗ ಸರ್ಕಾರದ ಜೊತೆಗೆ ನಾವು ನಿಲ್ಲುತ್ತೇವೆ. ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಎ.ಟಿ. ರಾಮಸ್ವಾಮಿ ಒತ್ತಾಯಿಸಿದ್ದಾರೆ.
ಯಾರು ದಾಳಿ ಮಾಡಿದ್ದಾರೋ ಅವರ ವಿರುದ್ದ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ ಕೆಲಸ ಮಾಡಬೇಕು. ಶಾಂತಿಗೆ ಧಕ್ಕೆ ಬಾರದ ರೀತಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಬೇಕು. ನಾವು ಕೂಡ ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.
ಎಂಇಎಸ್ ಪುಂಡರು ಕನ್ನಡ ಧ್ವಜವನ್ನು ಸುಟ್ಟು ಹಾಕಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಎಂಇಎಸ್ ಪುಂಡರು ಉದ್ಧಟತನ ತೋರಿದ್ದರು. ಡಿಸಿಪಿ ವಿಕ್ರಂ ಆಮಟೆ ಸಂಭಾಜೀ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಎಂಇಎಸ್ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಈ ಪ್ರಕರಣಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರ ಭಾವನೆಗಳನ್ನು ಕೆದಕುತ್ತಿರುವ ಎಂಇಎಸ್ ಸಂಘಟನೆಗೆ ಕರ್ನಾಟಕದಲ್ಲಿ ನಿಷೇಧ ಹೇರಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.
ಇದನ್ನೂ ಓದಿ: ಎಂಇಎಸ್ ಪುಂಡಾಟಿಕೆಯ ಹಿಂದೆ ಕಾಂಗ್ರೆಸ್ ಪಕ್ಷ ಇದೆ, ಡಿಕೆ ಶಿವಕುಮಾರ್ ಈ ಪ್ರಕರಣದ ನಿರ್ಮಾಪಕ, ನಿರ್ದೇಶಕ; ಸಿಟಿ ರವಿ ಹೇಳಿಕೆ
ಎಂಇಎಸ್ ಪುಂಡಾಟಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ; ಸರ್ಕಾರಕ್ಕೆ 2 ದಿನ ಗಡುವು ನೀಡಿದ ವಾಟಾಳ್ ನಾಗರಾಜ್