ಉರ್ದುಗೆ ಇಲ್ಲದ ಆಕ್ಷೇಪ ಹಿಂದಿಗೇಕೆ, ಕನ್ನಡಿಗರು ಬಳೆತೊಟ್ಟಿಲ್ಲ: ವಿಧಾನಸಭೆಯಲ್ಲಿ ಯತ್ನಾಳ್ ಮಾತು
ಚಿಲ್ಲರೆ ರಾಜಕಾರಣ ಮಾಡಬೇಡಿ, ನೀವು ಹೋರಾಟ ಮಾಡಿ. ಕನ್ನಡಿಗರೇನು ಬಳೆ ತೊಟ್ಟಿ ಕುಳಿತಿಲ್ಲ, ನಾವು ಹೋರಾಡುತ್ತೇವೆ ಎಂದರು.

ಬೆಳಗಾವಿ: ಶಾಸಕ ಬಸನಗೌಡ ಯತ್ನಾಳ ಉರ್ದು ಭಾಷೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯು ವಿಧಾನಸಭೆಯಲ್ಲಿ ವ್ಯಾಪಕ ಗದ್ದಲಕ್ಕೆ ಕಾರಣವಾಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ನಡೆಯುತ್ತಿದ್ದಾಗ ಕೆಲ ಬಿಜೆಪಿ ಶಾಸಕರು ಜೈ ಶ್ರೀರಾಮ್ ಘೋಷಣೆಯನ್ನೂ ಮೊಳಗಿಸಿದರು. ತಮ್ಮ ಹೇಳಿಕೆಯನ್ನು ಕಡತದಿಂದ ತೆಗೆಸಬಾರದು ಎಂದು ಯತ್ನಾಳ ಆಗ್ರಹಿಸಿದರು. ನೀವು ಪಾಕಿಸ್ತಾನದ ಏಜೆಂಟರು ಎಂದು ಕಾಂಗ್ರೆಸ್ ಸದಸ್ಯರನ್ನು ಯತ್ನಾಳ ದೂರಿದಾಗ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಎಲ್ಲರ ಬಣ್ಣ ಬಯಲಾಗಬೇಕು. ಪಾಕಿಸ್ತಾನ ಪರ ಘೋಷಣೆ ಕೂಗುವವರು, ಉರ್ದು ಭಾಷೆಯಲ್ಲಿ ಬೋರ್ಡ್ ಬರೆಯುವರನ್ನು ಗಡಿಪಾರು ಮಾಡಬೇಕು ಎಂದು ಯತ್ನಾಳ ನುಡಿದಾಗ, ‘ಇದು ಸಂವಿಧಾನಬಾಹಿರ ಹೇಳಿಕೆ’ ಎಂದು ಕಾಂಗ್ರೆಸ್ ಶಾಸಕರು ಪ್ರತಿಭಟಿಸಿದರು. ‘ನಾನು ಸಂವಿಧಾನಬಾಹಿರ ವಿಚಾರ ಮಾತಾಡ್ತಿಲ್ಲ. ಹಿಂದುತ್ವದ ಪರ ಮಾತನಾಡುತ್ತಿದ್ದೇನೆ’ ಎಂದು ಯತ್ನಾಳ್ ತಿರುಗೇಟು ನೀಡಿದರು. ಉರ್ದು ಭಾಷಿಕರ ಕುರಿತು ಯತ್ನಾಳ ನೀಡಿರುವ ಹೇಳಿಕೆಯನ್ನು ಕಡತದಿಂದ ತೆಗೆಯಬೇಕೆಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದರು. ಈ ವೇಳೆ ವಿಧಾನಸಭೆಯಲ್ಲಿ ಬಿಜೆಪಿ ಪಾಳಯದಿಂದ ಜೈ ಶ್ರೀರಾಮ್ ಘೋಷಣೆ ಮೊಳಗಿತು.
ಕನ್ನಡಿಗರೇನೂ ಬಳೆತೊಟ್ಟು ಕೂತಿಲ್ಲ ಎಂದು ಘೋಷಿಸಿದ ಯತ್ನಾಳ ವೀರಾವೇಶದ ಮಾತುಗಳನ್ನು ಆಡಿದರು. ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಭಾರತ ಉಳಿದರೆ ಕನ್ನಡ-ಮರಾಠಿ ಎಲ್ಲವೂ ಉಳಿಯುತ್ತದೆ. ಇಲ್ಲದಿದ್ದರೆ ನಾವೆಲ್ಲಾ ಉರ್ದುಗೆ ವೋಟ್ ಹಾಕಬೇಕಾಗುತ್ತದೆ ಎಂದರು. ಉರ್ದು ಪ್ರಸ್ತಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಉರ್ದು ಬಗ್ಗೆ ಯಾಕೆ ಪ್ರಸ್ತಾಪ ಮಾಡ್ತೀರಿ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಸದನವು ಮತ್ತೆ ಗೊಂದಲದ ಗೂಡಾಯಿತು. ಗದ್ದಲದ ಮಧ್ಯೆಯೇ ಮಾತು ಮುಂದುವರಿಸಿದ ಯತ್ನಾಳ್, ರಾಯಣ್ಣ ಹಾಗೂ ಶಿವಾಜಿ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿದರು.
ಅಸ್ತಿತ್ವ ಹೋಗುತ್ತೆ ಎನ್ನುವಾಗ ಜನರು ಇಂಥ ಹೀನ ಕೃತ್ಯಗಳಿಗೆ ಇಳಿಯುತ್ತಾರೆ. ನಾವು ಇಂದು ಒಂದು ಸಮುದಾಯವನ್ನು ಗುರಿ ಮಾಡುವುದು ಬೇಡ. ಮರಾಠ ಒಂದು ಭಾಷೆ, ಮರಾಠ ಎಂದರೆ ಒಂದು ಸಮುದಾಯ. ಕೆಲವರು ಸ್ವಾರ್ಥಕ್ಕಾಗಿ ಕನ್ನಡ ಬಾವುಟ ಸುಡುತ್ತಾರೆ. ಚಿಲ್ಲರೆ ರಾಜಕಾರಣ ಮಾಡಬೇಡಿ, ನೀವು ಹೋರಾಟ ಮಾಡಿ. ಕನ್ನಡಿಗರೇನು ಬಳೆ ತೊಟ್ಟಿ ಕುಳಿತಿಲ್ಲ, ನಾವು ಹೋರಾಡುತ್ತೇವೆ ಎಂದರು.
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಶಾಲೆ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲೀಗ ಕೆಟ್ಟ ಸರ್ಕಾರ ಬಂದಿದೆ. ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯವಾಗ್ತಿದೆ ಎನ್ನುತ್ತಿದ್ದಾರೆ. ಆದರೆ ಎಲ್ಲಿ ದೌರ್ಜನ್ಯವಾಗುತ್ತಿದೆ ಎನ್ನುವುದನ್ನು ತೋರಿಸಬೇಕಲ್ಲವೇ? ಕರ್ನಾಟಕ ನೋಂದಣಿ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರಿಂದ ಹೀಗೆ ಮಾಡ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಭಾರತ ಉಳಿದರೆ ಕನ್ನಡಿಗರು, ಮರಾಠಿಗರು ಉಳಿಯುತ್ತಾರೆ ಎಂದರು.
ಹಿಂದಿ ಬಗ್ಗೆ ಬರೆದರೆ ವಿರೋಧಿಸುವವರು, ಉರ್ದುಗೆ ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದರು. ಯತ್ನಾಳ್ ಹೇಳಿಕೆಗೆ ಕೆಲ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ನೀವು ಏಕೆ ಉರ್ದು ವಿಚಾರ ತೆಗೆಯುತ್ತೀರಿ ಎಂದು ಪ್ರತಿಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಾವೆಲ್ಲಾ ಒಂದಾಗಬೇಕೆಂದು ಹೇಳುವ ನೀವು ಉರ್ದು ಬಗ್ಗೆ ಏಕೆ ಹೀಗೆ ಮಾತಾಡ್ತೀರಿ? ಉರ್ದು ವಿಚಾರ ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಕಲಾಪ ಬಹಿಷ್ಕರಿಸಿ ಹೊರನಡೆದ ಕಾಂಗ್ರೆಸ್: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದನ್ನೂ ಓದಿ: Karnataka Anti Conversion Bill 2021: ಮತಾಂತರ ನಿಷೇಧ ಮಸೂದೆಗೆ ಸಂಪುಟ ಒಪ್ಪಿಗೆ