ಬೆಳಗಾವಿ: ಕೃಷ್ಣಾ ನದಿ ತೀರದಲ್ಲಿ 2019 ರಲ್ಲಿ ಬಂದ ಪ್ರವಾಹದಿಂದ ಆ ಸೇತುವೆ ಕೊಚ್ಚಿ ಎರಡು ಗ್ರಾಮದ ಜನರು ತಮ್ಮ -ತಮ್ಮ ಗ್ರಾಮಗಳಿಗೆ ಹೋಗಲು 12 ರಿಂದ 15 ಕಿಲೋ ಮೀಟರ್ ಸುತ್ತು ಹಾಕಿ ಹೋಗಬೇಕಾಗಿತ್ತು. ಸತತ ಟಿವಿ9 ವರದಿ ಪ್ರಸಾರ ಬೆನ್ನಲೆ ಈಗ ಹೊಸ ಸೇತುವೆ(Bridge) ನಿರ್ಮಾಣಕ್ಕೆ ಚಾಲನೆ ದೊರೆತು ಕಾಮಗಾರಿ ಪ್ರಾರಂಭವಾಗಿದೆ. ಹೀಗಾಗಿ ಇಲ್ಲಿನ ಸ್ಥಳೀಯರು ಟಿವಿ9 ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. 2019 ರಲ್ಲಿ ಕೃಷ್ಣಾ ನದಿ ತೀರದಲ್ಲಿ ಬಂದ ಪ್ರವಾಹದಿಂದಾಗಿ(Flood) ಕಲ್ಲೋಳ – ಯಡೂರ ಗ್ರಾಮಕ್ಕೆ ಹೋಗಲು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕೊಚ್ಚಿ ಹೋಗಿ ಎರಡು ಗ್ರಾಮದ ಜನರು ಪಡಬಾರದ ಕಷ್ಟ ಪಡುವಂತಾಗಿತ್ತು. ಅದರಲ್ಲೂ ಯಡೂರ ಗ್ರಾಮದವರು ಕಲ್ಲೋಳ ಗ್ರಾಮಕ್ಕೆ ಬರಬೇಕಾದರೆ 12 ರಿಂದ 15 ಕೀಲೊ ಮೀಟರ್ ಸುತ್ತು ಹೊಡೆದು ಬರಬೇಕಾಗಿತ್ತು. ಏಕೆಂದರೆ ಕಲ್ಲೋಳದ ಅದೆಷ್ಟೋ ರೈತರ ಜಮೀನುಗಳು ಯಡೂರು ಗ್ರಾಮದ ಕೃಷ್ಣಾ ತೀರದಲ್ಲಿವೆ. ಹೀಗಾಗಿ ರೈತರು(Farmers) ತಮ್ಮ ಜಮೀನುಗಳಿಗೆ ಹೋಗಲು ತುಂಬ ಕಷ್ಟ ಪಡುವಂತಾಗಿದೆ.
ಕೊಚ್ಚಿ ಹೋದ ಸೇತುವೆಯಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆ ಕುರಿತಂತೆ ಟಿವಿ9 ಸರಣಿ ವರದಿ ಮಾಡಿದ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 35 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಿದ್ದಾರೆ.
ಸೇತುವೆ ನಿರ್ಮಾಣ ಮಾಡುವಂತೆ ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಸೇತುವೆ ನಿರ್ಮಾಣ ಮಾಡಲು ಯಾರೊಬ್ಬರು ಮುಂದಾಗಿರಲಿಲ್ಲ. ಕೇವಲ ಭೂಟಾಟಿಕೆಗೆ ಬಂದು ಶಂಕು ಸ್ಥಾಪನೆ ಮಾಡಿ ಸೇತುವೆ ನಿರ್ಮಾಣ ಮಾಡಿ, ಹುಸಿ ಭರವಸೆ ಕೊಟ್ಟು ಹೋಗಿದ್ದರು. ಯಾವಾಗ ಟಿವಿ9 ಈ ಕುರಿತಂತೆ ವಿಸ್ತೃತವಾಗಿ ಸರಣಿ ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೆ ಇದೀಗ 35 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ದೊರೆತು ಕಾಮಗಾರಿ ಆರಂಭ ಆಗುತ್ತಿರುವುದಕ್ಕೆ ಟಿವಿ9ಗೆ ಧನ್ಯವಾದ ಹೇಳುತ್ತೇವೆ ಎಂದು ಸ್ಥಳೀಯರಾದ ಚಂದ್ರಕಾಂತ ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರವಾಹ ಬಂದಾಗಿನಿಂದ ಒಂದಲ್ಲ ಒಂದು ಸಂಕಷ್ಟ ಅನುಭವಿಸುತ್ತಿರುವ ಈ ಭಾಗದ ಜನ ಕಳೆದ ಮೂರು ವರ್ಷಗಳಿಂದ ದಾರಿ ಇಲ್ಲದೇ ಪರಿತಪಿಸುತ್ತಿದ್ದರು. ಇದೀಗ ಮೂರು ವರ್ಷದ ನಂತರ ಟಿವಿ9 ವರದಿ ಬಳಿಕ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಂಡು ಜನರಿಗೆ ಓಡಾಡಲು ಅನಕೂಲ ಆಗಲಿ ಎನ್ನುವುದೇ ಟಿವಿ9 ಆಶಯ.
ವರದಿ: ವಿನಾಯಕ್ ಗುರವ್
ಇದನ್ನೂ ಓದಿ:
ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್; ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ