ಮಳೆಗಾಲದಲ್ಲಿ ಕೊಚ್ಚಿ ಹೋದ ಸೇತುವೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ತಾತ್ಕಾಲಿಕ ಸೇತುವೆ

ಸಚಿವರು 20 ಲಕ್ಷ ಅನುದಾನವನ್ನು ನೀಡಿದ್ದರೂ ಕಾಮಗಾರಿ ಗುತ್ತಿಗೆ ನೀಡುವ ಕಾರ್ಯ ಇದುವರೆಗೂ ಪೂರ್ಣಗೊಳ್ಳದ ಹಿನ್ನಲೆ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಒಟ್ಟಾಗಿ ಹಣ ಹೊಂದಿಸಿಕೊಂಡು ಕೇವಲ 8 ದಿನದಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ.

ಮಳೆಗಾಲದಲ್ಲಿ ಕೊಚ್ಚಿ ಹೋದ ಸೇತುವೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ತಾತ್ಕಾಲಿಕ ಸೇತುವೆ
ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ತಾತ್ಕಾಲಿಕ ಸೇತುವೆ

ಉತ್ತರ ಕನ್ನಡ: ಮೂರು ತಾಲ್ಲೂಕುಗಳ ಹತ್ತಾರು ಗ್ರಾಮಗಳನ್ನು ಸಂಪರ್ಕಿಸುತ್ತಿದ್ದ ಸೇತುವೆಯೊಂದು (Bridge) ಕಳೆದ ಬಾರಿ ಸುರಿದ ಧಾರಾಕಾರ ಮಳೆಗೆ (Rain effect) ಏಕಾಏಕಿ ನದಿ ಉಕ್ಕಿ ಹರಿದ ಪರಿಣಾಮ ಕೊಚ್ಚಿಹೋಗಿದ್ದು ಗ್ರಾಮಗಳ ಸಂಪರ್ಕವೇ ಕಡಿತಗೊಂಡಿತ್ತು. ಇದಾದ ಬಳಿಕ ಶಾಶ್ವತ ಸೇತುವೆ ನಿರ್ಮಾಣದ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾದರೂ ಸಹ ಗುತ್ತಿಗೆ ವಿಳಂಬದಿಂದಾಗಿ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಪರಿಣಾಮ ಓಡಾಟಕ್ಕೆ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರೇ (Villagers) ಇದೀಗ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಸೇತುವೆ ಕೊಚ್ಚಿಹೋದ ಪರಿಣಾಮ ಸಂಕಷ್ಟ ಎದುರಿಸಿದ್ದ ಗ್ರಾಮಸ್ಥರೇ ಇದೀಗ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಗುಳ್ಳಾಪುರ-ಡೋಂಗ್ರಿ ಗ್ರಾಮಗಳ ನಡುವೆ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ 25 ವರ್ಷದ ಹಿಂದೆ ಸೇತುವೆಯನ್ನು ನಿರ್ಮಿಸಿದ್ದು, ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ತಾಲ್ಲೂಕುಗಳಿಗೂ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಆದರೆ ಕಳೆದ 2021ರ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೀರಿನ ರಭಸಕ್ಕೆ ಸೇತುವೆ ಕೊಚ್ಚಿಹೋಗಿತ್ತು.

ದಶಕಗಳ ಬಳಿಕ ಗ್ರಾಮಸ್ಥರು ಮತ್ತೆ ದೋಣಿಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಶೀಘ್ರದಲ್ಲಿ ಸೇತುವೆಯನ್ನು ನಿರ್ಮಿಸಿಕೊಂಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಮನವಿ ಮಾಡಿದ್ದರು. ಅದರಂತೆ ಸಚಿವರು 20 ಲಕ್ಷ ಅನುದಾನವನ್ನು ನೀಡಿದ್ದರೂ ಕಾಮಗಾರಿ ಗುತ್ತಿಗೆ ನೀಡುವ ಕಾರ್ಯ ಇದುವರೆಗೂ ಪೂರ್ಣಗೊಳ್ಳದ ಹಿನ್ನಲೆ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಒಟ್ಟಾಗಿ ಹಣ ಹೊಂದಿಸಿಕೊಂಡು ಕೇವಲ 8 ದಿನದಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ.

ಇನ್ನು ಈ ಸೇತುವೆ ಗಂಗಾವಳಿ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ಸೇತುವೆಯ ಮೂಲಕವೇ ನದಿಯನ್ನು ದಾಟಿ ಹೋಗುತ್ತಿದ್ದರು. ತಾಲ್ಲೂಕಿನ ಸುಂಕಸಾಳ ಹಾಗೂ ರಾಮನಗುಳಿ ಗ್ರಾಮಗಳ ಬಳಿ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ತೂಗುಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ 2019ರಲ್ಲಿ ಉಂಟಾಗಿದ್ದ ನೆರೆ ಸಂದರ್ಭದಲ್ಲಿ ಎರಡೂ ತೂಗುಸೇತುವೆಗಳು ಕೊಚ್ಚಿಹೋಗಿದ್ದು, ಇದೊಂದೇ ಸೇತುವೆ ಆಸರೆಯಾಗಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಈ ಸೇತುವೆಯೂ ಕೊಚ್ಚಿಹೋದ ಪರಿಣಾಮ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿತ್ತು.

ಇದೀಗ ಗ್ರಾಮಸ್ಥರೇ ಒಟ್ಟಾಗಿ ಸೇರಿ ತಮಗೆ ಅಗತ್ಯವಿದ್ದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಈ ಸೇತುವೆ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಸಚಿವರು ಮುತುವರ್ಜಿವಹಿಸಿ ಆದಷ್ಟು ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರಾದ ದಿನೇಶ ಗಾಂವ್ಕರ್ ಮನವಿ ಮಾಡಿದ್ದಾರೆ.

ಒಟ್ಟಾರೇ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ ಎನ್ನುವುದನ್ನು ಡೋಂಗ್ರಿ ಗ್ರಾಮಸ್ಥರು ತೋರಿಸಿಕೊಟ್ಟಿದ್ದು ತಾವೇ ಒಟ್ಟಾಗಿ ಸೇತುವೆ ನಿರ್ಮಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಿಕೊಡಲಿ ಎನ್ನುವುದು ನಮ್ಮ ಆಶಯ

ವರದಿ: ಮಂಜುನಾಥ್ ಪಟಗಾರ್

ಇದನ್ನೂ ಓದಿ:

Girish Bharadwaj: ತೂಗು ಸೇತುವೆ ನಿರ್ಮಿಸಿ ಜನರ ಕಷ್ಟ ಪರಿಹರಿಸಿದ ಬ್ರಿಡ್ಜ್​ಮ್ಯಾನ್​ ಗಿರೀಶ್ ಭಾರದ್ವಾಜರ ಸಾಧನೆಗೆ ನಮ್ಮದೊಂದು ಸನ್ಮಾನ

ಕಾರವಾರ: ಮಳೆ ಬಂದರೆ ಗ್ರಾಮ ಸಂಪರ್ಕ ಕಡಿತ; ಸೇತುವೆ ಇಲ್ಲದೆ ಹೊಸಾಕುಳಿ ಗ್ರಾಮಸ್ಥರ ಪರದಾಟ

Click on your DTH Provider to Add TV9 Kannada