ಕಾರವಾರ: ಮಳೆ ಬಂದರೆ ಗ್ರಾಮ ಸಂಪರ್ಕ ಕಡಿತ; ಸೇತುವೆ ಇಲ್ಲದೆ ಹೊಸಾಕುಳಿ ಗ್ರಾಮಸ್ಥರ ಪರದಾಟ
ಹೊನ್ನಾವರ ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿ ಹೊಸಾಕುಳಿ ಗ್ರಾಮವಿದ್ದು, ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಚಿದಂಬರ ನಾಯ್ಕ ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳೇ ಕಳೆದರೂ ಇನ್ನೂ ಹೊಳೆಯಲ್ಲಿಯೇ ನಡೆದು ಸಾಗಬೇಕಾದ ದಯನೀಯ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗ್ರಾಮವೊಂದಕ್ಕೆ ಇದೆ. ತಾಲ್ಲೂಕಿನ ಹೊಸಾಕುಳಿ ಗ್ರಾಮಕ್ಕೆ ಇದುವರೆಗೂ ಸಹ ಸೇತುವೆ (bridge) ಸಂಪರ್ಕವೇ ಇಲ್ಲವಾಗಿದ್ದು, ಪ್ರತಿನಿತ್ಯ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಗ್ರಾಮಸ್ಥರು ನದಿಯಲ್ಲಿ ನಡೆದುಕೊಂಡೇ ಸಾಗಬೇಕಾಗಿದೆ. ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಂತೂ ಇಡೀ ಗ್ರಾಮ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುತ್ತದೆ. ಅದರಲ್ಲೂ ರೋಗಿಗಳು, ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಲು ಹೊಳೆಯ ನೀರಿನಲ್ಲಿ ಹೊತ್ತುಕೊಂಡೇ ಸಾಗಬೇಕಾಗಿದ್ದು, ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಸಹ ಇಲ್ಲವಾಗಿದೆ.
ಕಳೆದ ಮೂರು ವರ್ಷಗಳಿಂದ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು, ವರ್ಷವಿಡೀ ಹೊಳೆಯ ನೀರಿನಲ್ಲೇ ಓಡಾಡಬೇಕಾದ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹೊನ್ನಾವರ ಪಟ್ಟಣದಿಂದ ಕೇವಲ 8 ಕಿಲೋ ಮೀಟರ್ ದೂರದಲ್ಲಿ ಹೊಸಾಕುಳಿ ಗ್ರಾಮವಿದ್ದು, ದಶಕಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಚಿದಂಬರ ನಾಯ್ಕ ಬೇಸರ ವ್ಯಕ್ತಪಡಿಸಿದ್ದಾರೆ.
ಪುಟ್ಟ ಬಾಲಕಿಯೋರ್ವಳು ತಮ್ಮ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಕೈಮುಗಿದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಮನವಿ ಮಾಡಿಕೊಂಡಿದ್ದು, ಮನಕಲಕುವಂತಿದೆ. ಹುಟ್ಟಿದಾಗಿನಿಂದ ಸೇತುವೆಯನ್ನೇ ಕಾಣದೇ ಜೀವನ ಸಾಗಿಸಿಕೊಂಡು ಬಂದಿದ್ದು, ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಲ್ಲೂರು ಗ್ರಾಮದ ಜನರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜನರಿಗೆ ಮಳೆಗಾಲ ಅಂದ್ರೆ ಸಾಕು ಭಯ ಶುರುವಾಗಿಬಿಡುತ್ತೆ. ಯಾಕಂದ್ರೆ ಗ್ರಾಮಕ್ಕೆ ಅಡ್ಡಲಾಗಿ ಕಾಮನಗದ್ದೆ ಹೊಳೆ ಹರಿದಿದ್ದು, ಹೊಳೆಗೆ ಅಡ್ಡಲಾಗಿ ಸೂಕ್ತ ಸೇತುವೆ ನಿರ್ಮಿಸಿಲ್ಲ. ಕೆಲ ವರ್ಷಗಳ ಹಿಂದೆ ಜನರೇ ಸಂಕವೊಂದನ್ನು ಮಾಡಿಕೊಂಡಿದ್ದಾರೆ. ಆದ್ರೆ ಅದು ಸಹ ಈಗಲೋ ಆಗಲೋ ಬೀಳುವಂತಿದೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರಿದ್ದು ಪ್ರತಿನಿತ್ಯ ಅಪಾಯಕಾರಿ ಸಂಕದಲ್ಲಿಯೇ ಹೊಳೆ ದಾಟಬೇಕಿದೆ. ಮಳೆಗಾಲದಲ್ಲಿ ಹೊಳೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಹೆದರುತ್ತಲೇ ಹೊಳೆ ದಾಟಬೇಕಿದೆ. ಸೇತುವೆ ನಿರ್ಮಿಸಿ ಕೊಡಿ ಅಂತಾ ಅದೆಷ್ಟೇ ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸಿಲ್ಲವಂತೆ.
ನಿತ್ಯ ವಿಧ್ಯಾರ್ಥಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನ ಹೊಳೆ ದಾಟುತ್ತಾರೆ. ಕೆಲವೊಮ್ಮೆ ಆಯಾ ತಪ್ಪಿ ಸಂಕದಿಂದ ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದೆಡೆ ಕ್ಷೇತ್ರ ಶಾಸಕರಾಗಿರುವ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಈ ಬಗ್ಗೆ ಮನವಿ ಮಾಡಿ, ಸೇತುವೆ ನಿರ್ಮಾಣಕ್ಕೆ ಕೇಳಿಕೊಂಡಿದ್ರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಆರೋಪಿಸ್ತಿದ್ದಾರೆ.
ಒಟ್ನಲ್ಲಿ ಕಲ್ಲೂರು ಗ್ರಾಮದ ಜನ ಜೀವ ಕೈಯಲ್ಲಿಡಿದು ಹೊಳೆ ದಾಟುವ ಪರಿಸ್ಥಿತಿ ಇದೆ. ಈಗಲಾದ್ರೂ ಈ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಬಗೆಹರಿಸಬೇಕಿದೆ. ಮುಂದಿನ ಮಳೆಗಾಲದ ಒಳಗೆ ಸೂಕ್ತ ಸೇತುವೆ ವ್ಯವಸ್ಥೆ ಕಲ್ಪಿಸಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯ.
ಉಡುಪಿ: ಅಪಾಯದ ಅಂಚಿನಲ್ಲಿದೆ ದೀಪಕ್ ತೂಗು ಸೇತುವೆ; ದುರಸ್ತಿ ಕಾರ್ಯ ಆರಂಭಕ್ಕೆ ಜನರ ಆಗ್ರಹ